ADVERTISEMENT

ಆಸಿಡ್ ಮಾರಾಟ ನಿಯಂತ್ರಣಕ್ಕೆ ಕ್ರಮ

ಕೇಂದ್ರದ ಹೊಸ ಮಾರ್ಗದರ್ಶಿ ಸೂತ್ರ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 19:45 IST
Last Updated 17 ಜುಲೈ 2013, 19:45 IST

ನವದೆಹಲಿ (ಪಿಟಿಐ): ಆಸಿಡ್ ಹಾಗೂ ಇತರೆ ವಿಷಕಾರಿ ಪದಾರ್ಥಗಳ ಚಿಲ್ಲರೆ ಮಾರಾಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿದೆ. ಹೆಚ್ಚುತ್ತಿರುವ ಆಸಿಡ್ ದಾಳಿ ಪ್ರಕರಣಗಳ ಹಿನ್ನೆಲೆಯಲ್ಲಿ ಪ್ರಸಕ್ತ ಇರುವ ಕಾನೂನಿನ ವ್ಯಾಪ್ತಿಯ್ಲ್ಲಲೇ ಈ ಕ್ರಮ ಕೈಗೊಂಡಿರುವುದಾಗಿ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

1919ರ ವಿಷಕಾರಿ ಪದಾರ್ಥಗಳ ಕಾಯ್ದೆ (ಪಾಯಿಸನ್ ಆ್ಯಕ್ಟ್) ಅಡಿ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವಾಲಯದ ಅಧಿಕಾರಿಗಳೊಂದಿಗೆ ಚರ್ಚೆ ಕೈಗೊಂಡಿರುವ ಗೃಹ ಸಚಿವಾಲಯ `ವಿಷ ಪದಾರ್ಥಗಳ ಜಪ್ತಿ ಹಾಗೂ ಮಾರಾಟ ಕಾನೂನು-2013' ರೂಪಿಸಿದ್ದು ಇದನ್ನು ನ್ಯಾಯಮೂರ್ತಿಗಳಾದ ಆರ್.ಎಂ. ಲೋಧಾ ಹಾಗೂ ಎಸ್.ಜೆ. ಮುಖ್ಯೋಪಾಧ್ಯಾಯ ಅವರನ್ನು ಒಳಗೊಂಡ ಪೀಠ ಪರಿಶೀಲನೆ ನಡೆಸಿತು.

ಆಸಿಡ್ ದಾಳಿ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಇದೀಗ ಅಗತ್ಯವಾಗಿದೆ ಎಂದು ಕೋರ್ಟ್ ತಿಳಿಸಿತು.`ಈ ಸಂಬಂಧ ವಿವಿಧ ರಾಜ್ಯಗಳೊಂದಿಗೆ ಮೊದಲು ನೀವು ಚರ್ಚೆ ಕೈಗೊಂಡು ನಂತರ ಕರಡು ಪ್ರತಿಯೊಂದಿಗೆ ನಮ್ಮಲ್ಲಿಗೆ ಬನ್ನಿ' ಎಂದು ಕೋರ್ಟ್ ಕೇಂದ್ರ ಸರ್ಕಾರಕ್ಕೆ ತಿಳಿಸಿತು. ರೂಪಿಸಿರುವ ಮಾರ್ಗದರ್ಶಿ ಸೂತ್ರಗಳಿಗೆ ಅನುಮೋದನೆ ನೀಡುವಂತೆ ಕೇಂದ್ರವು ರಾಜ್ಯಗಳಿಗೆ ಕರಡು ಪ್ರತಿ ಕಳುಹಿಸಿಕೊಡಬೇಕಾಗಿರುವುದರಿಂದ ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸಾಕಷ್ಟು ಸಮಯ ಬೇಕಾಗಬಹುದು.

ಹೊಸದಾಗಿ ಸಿದ್ಧಪಡಿಸಲಾದ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಿದಂತೆ, ಯಾವುದೇ ವ್ಯಕ್ತಿ ವಿಷಕಾರಿ ಪದಾರ್ಥ ಮಾರುವುದಾದಲ್ಲಿ ಆತನಿಗೆ ಮಾರಾಟ ಮಾಡುವ ಲೈಸನ್ಸ್ ಇರಬೇಕು ಮೇಲಾಗಿ ಭಾವಚಿತ್ರ ಸಹಿತ ಗುರುತಿನ ಚೀಟಿ ಇರುವ, 18 ವರ್ಷ ತುಂಬಿದ ವ್ಯಕ್ತಿಗಳಿಗೆ ಮಾತ್ರ ಅದನ್ನು ಮಾರಬೇಕು ಎಂದು ಸ್ಪಷ್ಟಪಡಿಸಲಾಗಿದೆ ಎಂದು ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ಮೋಹನ್ ಪರಾಸರಣ್‌ಕೋರ್ಟ್‌ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.