ADVERTISEMENT

ಆಸಿಡ್ ಮಾರಾಟ ನಿಯಂತ್ರಣ; ಪ್ರಮಾಣ ಪತ್ರ ಸಲ್ಲಿಕೆಗೆ ಸುಪ್ರೀಂ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST

ನವದೆಹಲಿ (ಪಿಟಿಐ): ಮಹಿಳೆಯರ ಮೇಲೆ ದಾಳಿ ನಡೆಸಲು ಬಳಕೆಯಾಗುತ್ತಿರುವ ಆಸಿಡ್ ಮಾರಾಟ ನಿಯಂತ್ರಣಕ್ಕೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರವನ್ನು ಕೇಳಿದೆ.

ಈ ಕುರಿತು ಸಮಗ್ರ ಪ್ರಮಾಣ ಪತ್ರ ಸಲ್ಲಿಸುವಂತೆ ಗೃಹ ಸಚಿವಾಲಯಕ್ಕೆ ನಿರ್ದೇಶಿಸಿದೆ. ಇದೇ ವೇಳೆ, ಆಸಿಡ್ ಮಾರಾಟ ನಿರ್ಬಂಧ ಹಾಗೂ ಅದರಿಂದ ಮಹಿಳೆಯರ ಮೇಲೆ ಉಂಟಾಗುತ್ತಿರುವ ದಾಳಿಗಳನ್ನು ನಿಯಂತ್ರಿಸುವ ಸಂಬಂಧ ನ್ಯಾಯಾಲಯ ಕಳೆದ ವರ್ಷದ ಫೆಬ್ರುವರಿಯಲ್ಲಿ ನೀಡಿದ್ದ ನೋಟಿಸ್‌ಗೆ ಉತ್ತರಿಸುವಂತೆ ನ್ಯಾಯಮೂರ್ತಿ ಆರ್.ಎಂ.ಲೋಧಾ ಮತ್ತು ಎ.ಆರ್. ದವೆ ಅವರನ್ನೊಳಗೊಂಡ ಪೀಠ ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

2006ರಲ್ಲಿ ಲಕ್ಷ್ಮಿ ಎಂಬ ಬಾಲಕಿ ಮೇಲೆ ನಡೆದ ಆಸಿಡ್ ದಾಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ನಿರ್ದೇಶನ ನೀಡಿದೆ.

ಆಸಿಡ್ ಮಾರಾಟ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇದೇ ವರ್ಷದ ಏಪ್ರಿಲ್ 29ರಂದು ಸೂಚನೆ ನೀಡಿದ್ದ  ಸುಪ್ರೀಂಕೋರ್ಟ್, ಗೃಹ ಸಚಿವಾಲಯವು ವಿವಿಧ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮನ್ವಯ ಸಾಧಿಸಿ, ಆಸಿಡ್ ಮಾರಾಟಕ್ಕೆ ಯೋಜನೆ ರೂಪಿಸುವಂತೆ ತಿಳಿಸಿತ್ತು.
ಆಸಿಡ್ ದಾಳಿಗೊಳಗಾದವರಿಗೆ ಸೂಕ್ತ ಪರಿಹಾರ, ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸಿಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದಾದರೂ ಯೋಜನೆ ರೂಪಿಸಿದೆಯೇ ಎಂದೂ ಸುಪ್ರೀಂಕೋರ್ಟ್ ಕೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.