ADVERTISEMENT

ಆಹಾರ ಭದ್ರತೆಗೆ ಅಂಕಿತ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 19:59 IST
Last Updated 5 ಜುಲೈ 2013, 19:59 IST
ಆಹಾರ ಭದ್ರತೆಗೆ ಅಂಕಿತ
ಆಹಾರ ಭದ್ರತೆಗೆ ಅಂಕಿತ   

ನವದೆಹಲಿ(ಪಿಟಿಐ): ದೇಶದ ಶೇ 67 ರಷ್ಟು ಜನರಿಗೆ ಅತಿಕಡಿಮೆ ದರದಲ್ಲಿ ಆಹಾರಧಾನ್ಯ ಪೂರೈಸುವ ಯುಪಿಎ ಸರ್ಕಾರದ ಮಹತ್ವಾಕಾಂಕ್ಷಿ ಆಹಾರ ಭದ್ರತಾ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಶುಕ್ರವಾರ ಅಂಕಿತ ಹಾಕಿದ್ದಾರೆ.

ಇದರಿಂದಾಗಿ ದೇಶದ ಮೂರನೇ ಎರಡರಷ್ಟು ಜನರಿಗೆ ಪ್ರತಿ ತಿಂಗಳು 15 ಕೆ.ಜಿಗಳಷ್ಟು ಆಹಾರಧಾನ್ಯವು ರೂ1 ರಿಂದ ರೂ3 ರ ಒಳಗೆ ದೊರೆಯಲಿದೆ. ದೇಶದಾದ್ಯಂತ ಈ ಯೋಜನೆ ಜಾರಿಯಾಗಲು ಆರು ತಿಂಗಳು ಹಿಡಿಯಲಿದೆ.

ಆಹಾರ ಭದ್ರತಾ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ತೀರ್ಮಾನವನ್ನು ಬುಧವಾರ ನಡೆದ ಸಂಪುಟ ಸಭೆ ಕೈಗೊಂಡಿತ್ತು. ರಾಷ್ಟ್ರಪತಿಗಳ ಕಾರ್ಯಾಲಯಕ್ಕೆ ಗುರುವಾರ ರಾತ್ರಿ ಸುಗ್ರೀವಾಜ್ಞೆಯನ್ನು ಕಳುಹಿಸಿಕೊಡಲಾಗಿತ್ತು. ಬಿಜೆಪಿ ಸೇರಿದಂತೆ ಎಡಪಕ್ಷಗಳು ಆಹಾರ ಭದ್ರತೆ ಸುಗ್ರೀವಾಜ್ಞೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ರಾಷ್ಟ್ರಪತಿಗಳ ತೀರ್ಮಾನ ಕುತೂಹಲ ಕೆರಳಿಸಿತ್ತು.  ಕೆಲವೇ ವಾರಗಳಲ್ಲಿ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಆಹಾರ  ಭದ್ರತೆ ಬಗ್ಗೆ ಚರ್ಚೆ ನಡೆಸಬೇಕು ಎಂದು ರಾಜಕೀಯ ಪಕ್ಷಗಳು ಒತ್ತಾಯ ಮಾಡುತ್ತಿರುವಾಗಲೇ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಈ ಸುಗ್ರೀವಾಜ್ಞೆಗೆ ಸಂಸತ್ತು 6 ತಿಂಗಳಲ್ಲಿ ಒಪ್ಪಿಗೆ ನೀಡಬೇಕಿದೆ.

ಇದು ವಿಶ್ವದ ಅತಿದೊಡ್ಡ ಯೋಜನೆಯಾಗಿದ್ದು, ಸರ್ಕಾರಕ್ಕೆ ಪ್ರತಿವರ್ಷ ರೂ1.25 ಲಕ್ಷ ಕೋಟಿ ಹೊರೆಯಾಗಲಿದ್ದು, 62 ದಶಲಕ್ಷ ಟನ್ ಆಹಾರಧಾನ್ಯ ಪೂರೈಕೆ ಮಾಡಬೇಕಿದೆ.

`ಉದ್ದೇಶ ಒಳ್ಳೆಯದಲ್ಲ'
`ಕೇಂದ್ರ ಸರ್ಕಾರ ವೋಟ್‌ಬ್ಯಾಂಕ್ ರಾಜಕಾರಣ ನಡೆಸುತ್ತಿದ್ದು, ಈ ಉದ್ದೇಶ ಒಳ್ಳೆಯದಲ್ಲ. ಕಾಂಗ್ರೆಸ್ ಮಾತ್ರ ವೋಟ್‌ಬ್ಯಾಂಕ್ ರಾಜಕಾರಣ ಮಾಡಬಲ್ಲದು.'

- ಮುಲಾಯಂ ಸಿಂಗ್,
ಸಮಾಜವಾದಿ ಪಕ್ಷದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.