ADVERTISEMENT

ಇಂಟರ್‌ನೆಟ್‌ ನಿಗಾ ಹೊಣೆ ಖಾಸಗಿ ಸಂಸ್ಥೆಗೆ?

​ಪ್ರಜಾವಾಣಿ ವಾರ್ತೆ
Published 30 ಮೇ 2018, 19:30 IST
Last Updated 30 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಡಿಜಿಟಲ್‌ ಮಾಧ್ಯಮದ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಕೇಂದ್ರ ಸರ್ಕಾರವು ಖಾಸಗಿ ಸಂಸ್ಥೆಯೊಂದನ್ನು ನೇಮಿಸಲಿದೆ. ಫೇಸ್‌ಬುಕ್‌ ಮತ್ತು ಟ್ವಿಟರ್‌ ಸೇರಿ ಎಲ್ಲ ಪ್ರಮುಖ ಸಾಮಾಜಿಕ ಜಾಲತಾಣಗಳ ಮೇಲೆಯೂ ಈ ಸಂಸ್ಥೆ ಕಣ್ಣಿಡಲಿದೆ.

ಸುದ್ದಿ ಮತ್ತು ಚರ್ಚೆಗಳು ಸಕಾರಾತ್ಮಕವಾಗಿರುವಂತೆ ನೋಡಿಕೊಳ್ಳುವುದು ಮತ್ತು ಜನರಲ್ಲಿ ರಾಷ್ಟ್ರೀಯತೆಯನ್ನು ಬೆಳೆಸುವುದು ಇದರ ಉದ್ದೇಶವಾಗಿದೆ.

ಸುದ್ದಿ ಪೋರ್ಟಲ್‌ಗಳು, ಬ್ಲಾಗ್‌ಗಳು ಮತ್ತು ಇ–ಮೇಲ್‌ಗಳಿಂದ ಮಾಹಿತಿ ಸಂಗ್ರಹಿಸಿ ಅದನ್ನು ಸಂಸ್ಥೆಯು ವಿಶ್ಲೇಷಿಸಲಿದೆ. ಇದಕ್ಕಾಗಿ ವಿಶೇಷ ಸಾಫ್ಟ್‌ವೇರ್‌ ಬಳಸಿಕೊಳ್ಳಲಾಗುವುದು.

ADVERTISEMENT

‘ನ್ಯೂ ಮೀಡಿಯಾ ಕಮಾಂಡ್‌ ರೂಮ್‌’ಗೆ ಬೇಕಾದ ಸೌಲಭ್ಯ ಒದಗಿಸಲು ಬ್ರಾಡ್‌ಕಾಸ್ಟ್‌ ಎಂಜಿನಿಯರಿಂಗ್‌ ಕನ್ಸಲ್‌ಟೆಂಟ್ಸ್‌ ಇಂಡಿಯಾ ಲಿ. (ಬಿಇಸಿಐಎಲ್‌) ಇತ್ತೀಚೆಗೆ ಟೆಂಡರ್‌ ಕರೆದಿತ್ತು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಈ ಕಮಾಂಡ್‌ ರೂಮ್‌ ಕಾರ್ಯನಿರ್ವಹಿಸಲಿದೆ.

ಸಾಫ್ಟ್‌ವೇರ್‌ ಮತ್ತು ಇತರ ತಂತ್ರಜ್ಞಾನವನ್ನು ಬಳಸಿ ಜನರು ಮತ್ತು ಗುಂಪುಗಳ ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ನಿಗಾ ಇರಿಸುವುದರ ಜತೆಗೆ ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳು ಯಾವ ಸುದ್ದಿಗಳನ್ನು ಪ್ರಕಟಿಸಲಿವೆ ಎಂಬುದನ್ನು ಅಂದಾಜಿಸುವ ಗುರಿ ಇದೆ ಎನ್ನಲಾಗಿದೆ. ಭಾರತ ಮಾತ್ರವಲ್ಲದೆ, ಜಗತ್ತಿನ ಎಲ್ಲೆಡೆಯ ಮಾಧ್ಯಮದ ಮೇಲೆಯೂ ಇದು ನಿಗಾ ಇರಿಸಲಿದೆ.

‘ದೇಶಕ್ಕಾಗಿ ಸಾರ್ವಜನಿಕ ದೃಷ್ಟಿಕೋನವನ್ನು ಸಕಾರಾತ್ಮಕವಾಗಿ ಹೇಗೆ ರೂಪಿಸಬಹುದು’ ಎಂಬ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುವುದಕ್ಕಾಗಿ ಈ ವಿಶ್ಲೇಷಣೆ ನೆರವಾಗಲಿದೆ ಎಂದು ಟೆಂಡರ್‌ ಪ್ರಕಟಣೆಯಲ್ಲಿ ಹೇಳಲಾಗಿತ್ತು.

ಸಾಫ್ಟ್‌ವೇರ್‌ ಹೇಗಿರಬೇಕು

ಇದು ಸರ್ಚ್‌ ಎಂಜಿನ್‌ನಂತೆ ಕೆಲಸ ಮಾಡಬೇಕು. ಅಂತರ್ಜಾಲದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲ ತಾಣದಲ್ಲಿಯೂ ಹುಡುಕುವ ಸಾಮರ್ಥ್ಯ ಇರಬೇಕು. ವಿವಿಧ ಹ್ಯಾಷ್‌ಟ್ಯಾಗ್‌ಗಳು, ಕೀ ವರ್ಡ್‌ಗಳ ಅಡಿಯಲ್ಲಿ ಸಾಮಾಜಿಕ ಜಾಲಾಣದಿಂದ ಮಾಹಿತಿ ಸಂಗ್ರಹಿಸಬೇಕು. ವೈಯಕ್ತಿಕ ಖಾತೆಗಳ ಮೇಲೆಯೂ ನಿಗಾ ಇರಿಸಬೇಕು ಎಂದು ಟೆಂಡರ್‌ನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.