ADVERTISEMENT

ಇಂದು ದೂರವಾಣಿ ಹೊಸ ಕರಡು ನೀತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ನವದೆಹಲಿ: ಗ್ರಾಹಕರ ಕುಂದುಕೊರತೆ ನಿವಾರಣೆಗೆ ಆದ್ಯತೆ ನೀಡಲು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡಲು ಉದ್ದೇಶಿತ ಹೊಸ ಟೆಲಿಕಾಂ ನೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ರಾಷ್ಟ್ರೀಯ ದೂರಸಂಪರ್ಕ ನೀತಿ- 2011ರ ಕರಡನ್ನು ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಸೋಮವಾರ ಬಿಡುಗಡೆ ಮಾಡಲಿದ್ದಾರೆ.

ಇಲಾಖೆಯಲ್ಲಿ ನಡೆದ ಅನೇಕ ಹಗರಣಗಳ ಹಿನ್ನೆಲೆಯಲ್ಲಿ, ಹೊಸ ನೀತಿಯಲ್ಲಿ ಪಾರದರ್ಶಕತೆ ಮತ್ತು ಶೀಘ್ರ ನಿರ್ಧಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.

ದೂರವಾಣಿ ಗ್ರಾಹಕರ ಸಂಖ್ಯೆ ಬಹಳ ಕಡಿಮೆ ಇದ್ದಾಗ 1999ರಲ್ಲಿ ದೂರವಾಣಿ ನೀತಿಯನ್ನು ರೂಪಿಸಲಾಗಿತ್ತು. ಅದರ ನಂತರ ನೀತಿಯನ್ನು ಪರಾಮರ್ಶಿಸಿರಲಿಲ್ಲ. ಈಗ ಗ್ರಾಹಕರ ಸಂಖ್ಯೆ ಅಗಾಧವಾಗಿ ಬೆಳೆದಿದ್ದು, ಕಳೆದ ಜುಲೈ ಅಂತ್ಯಕ್ಕೆ 90 ಕೋಟಿ ಜನ ದೂರವಾಣಿ ಗ್ರಾಹಕರಾಗಿದ್ದಾರೆ.

ಹೊಸ ನೀತಿಯಲ್ಲಿ ಗ್ರಾಹಕರ ಕುಂದು ಕೊರತೆ ನಿವಾರಣೆಗೆ ಮಹತ್ವ ನೀಡಲಾಗಿದೆ. ಅದಕ್ಕಾಗಿ ದೂರವಾಣಿ ನಿಯಂತ್ರಣ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡಲು ಉದ್ದೇಶಿಸಲಾಗಿದೆ. ನಿಯಂತ್ರಣ ಪ್ರಾಧಿಕಾರದಲ್ಲಿ ಗ್ರಾಹಕರ ದೂರು ಸ್ವೀಕರಿಸಲು ಪ್ರತ್ಯೇಕ ಘಟಕ ಆರಂಭಿಸುವ ಪ್ರಸ್ತಾವ ಸಹ ಇದೆ.

ಪ್ರಸಕ್ತ ಜಾರಿಯಲ್ಲಿ ಇರುವ ನೀತಿಯ ಪ್ರಕಾರ, ನಿಯಂತ್ರಣ ಪ್ರಾಧಿಕಾರ ಮಾಡುವ ಶಿಫಾರಸಿಗೆ ಅನುಗುಣವಾಗಿ ದೂರಸಂಪರ್ಕ  ಇಲಾಖೆಯು ತಪ್ಪಿತಸ್ಥ ಟೆಲಿಕಾಂ ಕಂಪೆನಿಗಳನ್ನು ಶಿಕ್ಷಿಸಲು ಅವಕಾಶವಿದೆ.

ಹೊಸ ನೀತಿಯಲ್ಲಿ ನಿಯಂತ್ರಣ ಪ್ರಾಧಿಕಾರಕ್ಕೇ ಶಿಕ್ಷಿಸುವ ಅಧಿಕಾರ ನೀಡಲು, ಪ್ರಾಧಿಕಾರಕ್ಕೆ ಸಂಬಂಧಿಸಿದ ಕಾನೂನನ್ನು ತಿದ್ದುಪಡಿ ಮಾಡುವ ಪ್ರಸ್ತಾವವಿದೆ. ಪ್ರಾಧಿಕಾರದ ಅಧ್ಯಕ್ಷರ ಅಧಿಕಾರಾವಧಿಯನ್ನು ಮೂರರಿಂದ ಐದು ವರ್ಷಗಳಿಗೆ ಏರಿಸಲು ಉದ್ದೇಶಿಸಲಾಗಿದೆ.

ಟೆಲಿಕಾಂ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ, ಮೂಲ ಸೌಕರ್ಯ ಅಭಿವೃದ್ಧಿಗೆ ತೆರಿಗೆ ವಿನಾಯಿತಿ ಮತ್ತು ತಂತ್ರಜ್ಞಾನ ಸುಧಾರಣೆಗೆ ಒತ್ತು ನೀಡಲು ಅವಕಾಶವಿದೆ.

ರಾಷ್ಟ್ರದಾದ್ಯಂತ ಉಚಿತ ರೋಮಿಂಗ್ ಸೌಲಭ್ಯ ಕಲ್ಪಿಸುವ ಪ್ರಸ್ತಾವವನ್ನೂ ಹೊಸ ನೀತಿ ಒಳಗೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.