ADVERTISEMENT

ಇಂದು ಮಂಗಳ ಕಕ್ಷೆಗೆ ‘ಮಾವೆನ್‌’‌

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2014, 19:30 IST
Last Updated 21 ಸೆಪ್ಟೆಂಬರ್ 2014, 19:30 IST

ವಾಷಿಂಗ್ಟನ್‌ (ಎಎಫ್‌ಪಿ): ಅತ್ತ ಭಾರತದ ಇಸ್ರೊ ಉಡಾಯಿಸಿರುವ ಗಗನನೌಕೆಯು ಮಂಗಳ ಕಕ್ಷೆ ಸಂಧಿಸಲು ಕ್ಷಣಗಣನೆ ಆರಂಭವಾಗಿರುವಾಗಲೇ ಇತ್ತ ಅಮೆರಿಕದ ನಾಸಾ ಉಡಾಯಿಸಿರುವ ‘ಮಾವೆನ್‌’ ನೌಕೆಯು ಸೋಮವಾರ ಬೆಳಿಗ್ಗೆ (ಭಾರತದ ಕಾಲಮಾನದ ಪ್ರಕಾರ) ಮಂಗಳ ಕಕ್ಷೆಯನ್ನು ಯಶಸ್ವಿಯಾಗಿ ಸೇರುವ ನಿರೀಕ್ಷೆ ಇದೆ.

10 ತಿಂಗಳುಗಳ ಹಿಂದೆ ಉಡಾ­ವಣೆಗೊಂಡ ‘ಮಾವೆನ್‌’ ನೌಕೆಯು ಸ್ಥಳೀಯ ಕಾಲಮಾನ ಭಾನುವಾರ ರಾತ್ರಿ 9.30ಕ್ಕೆ (ಭಾರತದ ಕಾಲಮಾನ ಸೋಮ­­ವಾರ ಬೆಳಿಗ್ಗೆ7ಕ್ಕೆ) ಕೆಂಪು­ಕಾಯದ ಕಕ್ಷೆಯನ್ನು ಸೇರುವ ಅಂದಾ­ಜಿದೆ. ಮಂಗಳನ ವಾತಾವರಣ ಮತ್ತು ಅಲ್ಲಿನ ವಾತಾವರಣಕ್ಕೆ ಆವಿಯಾಗುವ ಗುಣ ಪ್ರಾಪ್ತವಾದ ಬಗೆಯ ಬಗ್ಗೆ ಅಧ್ಯಯನ ನಡೆಸುವುದು ಈ ಯಾನದ ಉದ್ದೇಶ.
ಮಂಗಳ ಗ್ರಹಕ್ಕೆ 2030ರ ವೇಳೆಗೆ ಮನುಷ್ಯನನ್ನು ಕಳುಹಿಸುವ ಯೋಚನೆ ಇದ್ದು, ಮಾವೆನ್‌ ನಡೆಸುವ ಅಧ್ಯಯನವು ಅದಕ್ಕೆ ಸಹಕಾರಿಯಾಗುವ ನಿರೀಕ್ಷೆಯೂ ಇದೆ.

ಈ ಮಾನವರಹಿತ ನೌಕೆಯು ಇದುವರಿಗೆ 71.1 ಕೋಟಿ ಕಿ.ಮೀ. ದೂರವನ್ನು ಕ್ರಮಿಸಿದೆ. ಆರು ಚಿಕ್ಕ ಥ್ರಸ್ಟರ್‌ಗಳನ್ನು ಉರಿಸುವುದರೊಂದಿಗೆ ನೌಕೆಯನ್ನು ಸ್ಥಿರಗೊಳಿಸಲಾಗಲು ನಾಸಾ ವಿಜ್ಞಾನಿಗಳು ಸಜ್ಜಾಗಿದ್ದಾರೆ. ‘ಮಾವೆನ್’ ಮಂಗಳನನ್ನು ಸುತ್ತಲು ಆರಂಭಿಸಿದ ಆರು ವಾರಗಳವರೆಗೆ ಅದನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗುವುದು. ನಂತರ ಅದು ಒಂದು ವರ್ಷ ಕಾಲ ಅಂಗಾರಕನ ಮೇಲುಸ್ತರದ ವಾತಾವರಣದ ಅನಿಲಗಳ ಬಗ್ಗೆ ಹಾಗೂ ಈ ಅನಿಲಗಳು ಸೂರ್ಯನ ಬೆಳಕು ಮತ್ತು ಸೌರಜ್ವಾಲೆಗಳ ಸಂದರ್ಭದಲ್ಲಿ ಹೇಗೆ ವರ್ತಿಸುತ್ತವೆ ಎಂಬ ಸಂಶೋಧನೆಗೆ ನೆರವು ನೀಡಲಿದೆ.

ಈ ಒಂದು ವರ್ಷದ ಬಹುತೇಕ ಅವಧಿಯಲ್ಲಿ ನೌಕೆಯು ಗ್ರಹದ ಮೇಲ್ಮೈನಿಂದ 3730 ಮೈಲುಗಳ ಎತ್ತರದಲ್ಲಿ ಸುತ್ತುಹಾಕಲಿದೆ. ಇದೇ ವೇಳೆ ಐದು ಸಲ ಗ್ರಹದ ಮೇಲ್ಮೈನಿಂದ 78 ಮೈಲುಗಳಷ್ಟು ಸನಿಹಕ್ಕೆ ಬಂದು ದತ್ತಾಂಶಗಳನ್ನು ಕಲೆಹಾಕಲಿದೆ. ಮಂಗಳ ಗ್ರಹದಲ್ಲಿ ಶತಕೋಟಿ ವರ್ಷಗಳ ಹಿಂದೆ ಇದ್ದ ನೀರು ಮತ್ತು ಇಂಗಾಲದ ಡೈಆಕ್ಸೈಡ್‌ ಹೇಗೆ ಅಲ್ಲಿಂದ ನಾಪತ್ತೆಯಾಯಿತು ಎಂಬ ಪ್ರಶ್ನೆಗೂ ಅಧ್ಯಯನದಿಂದ ಉತ್ತರ ಸಿಗಬಹುದೆಂದು ನಿರೀಕ್ಷಿಸಲಾಗಿದೆ. ಮಂಗಳನ ಇತಿಹಾಸ, ಅದರ ವಾತಾವರಣ ಮತ್ತು ಜೀವಾಣುಪೋಷಕ ಸಾಮರ್ಥ್ಯದ ಬಗ್ಗೆ ತಿಳಿಯಲು ಕೂಡ ಈ ಸಂಶೋಧನೆ ಮುಖ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.