ADVERTISEMENT

ಇಂದು ಹೈದರಾಬಾದ್ ಬಂದ್

ಪ್ರತ್ಯೇಕ ರಾಜ್ಯ ರಚನೆ ಬೇಡಿಕೆ: ತೆಲಂಗಾಣ ಮತ್ತೆ ಉದ್ವಿಗ್ನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 19:59 IST
Last Updated 14 ಜೂನ್ 2013, 19:59 IST
ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಒತ್ತಾಯಿಸಿ ಹೈದರಾಬಾದ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ತೆಲಂಗಾಣ ಜಂಟಿ ಕ್ರಿಯಾ ಸಮಿತಿ ಕಾರ್ಯಕರ್ತರು ಕಲ್ಲುಗಳನ್ನು ಎತ್ತಿಕೊಂಡು ಪೊಲೀಸರತ್ತ ಮುನ್ನುಗ್ಗಿದರು 	-ಎಎಫ್‌ಪಿ ಚಿತ್ರ
ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಒತ್ತಾಯಿಸಿ ಹೈದರಾಬಾದ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ತೆಲಂಗಾಣ ಜಂಟಿ ಕ್ರಿಯಾ ಸಮಿತಿ ಕಾರ್ಯಕರ್ತರು ಕಲ್ಲುಗಳನ್ನು ಎತ್ತಿಕೊಂಡು ಪೊಲೀಸರತ್ತ ಮುನ್ನುಗ್ಗಿದರು -ಎಎಫ್‌ಪಿ ಚಿತ್ರ   

ಹೈದರಾಬಾದ್ (ಪಿಟಿಐ): ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಒತ್ತಾಯಿಸಿ ಶುಕ್ರವಾರ ಇಲ್ಲಿ ನಡೆದ `ವಿಧಾನಸಭೆ ಚಲೋ' ಪ್ರತಿಭಟನೆಯಿಂದಾಗಿ ಹೈದರಾಬಾದ್ ಅಕ್ಷರಶಃ ರಣರಂಗವಾಗಿತ್ತು. 

ಬಜೆಟ್ ಅಧಿವೇಶನವನ್ನು ಅಡ್ಡಿಪಡಿಸುವುದಾಗಿ ಪ್ರತಿಭಟನಾಕಾರರು ಬೆದರಿಕೆ ಹಾಕಿದ್ದರಿಂದ ವಿಧಾನಸಭೆಯ ಸುತ್ತ ಅರೆಸೇನಾ ಪಡೆ ಸೇರಿ 30,000ಕ್ಕೂ ಹೆಚ್ಚಿನ ಪೊಲೀಸರು ಕಾವಲು ನಿಂತಿದ್ದಾರೆ.

ವಿಧಾನಸಭೆಗೆ ಮುತ್ತಿಗೆ ಹಾಕಲು ಹೊರಟಿದ್ದ ನೂರಾರು ಪ್ರತಿಭಟನಾಕಾರನ್ನು ಬಂಧಿಸಿರುವುದನ್ನು ಖಂಡಿಸಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಧ್ಯಕ್ಷ ಕೆ.ಚಂದ್ರಶೇಖರ್ ರಾವ್ ಅವರು ಹೈದರಾಬಾದ್ ಸೇರಿದಂತೆ ತೆಲಂಗಾಣ ಪ್ರಾಂತ್ಯದ ಹತ್ತು ಜಿಲ್ಲೆಗಳಲ್ಲಿ ಶನಿವಾರ ಬಂದ್‌ಗೆ ಕರೆ ನೀಡಿದ್ದಾರೆ.

ಪ್ರತಿಭಟನೆ ಎಷ್ಟು ಅತಿರೇಕಕ್ಕೆ ಹೋಗಿತ್ತೆಂದರೆ ಶಾಸಕರಿಬ್ಬರು ಶಾಸಕಾಂಗ ಪಕ್ಷದ ಕಚೇರಿ ಛಾವಣಿಯನ್ನು ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು.

`ಪ್ರತ್ಯೇಕ ರಾಜ್ಯ ಘೋಷಣೆ ಮಾಡಬೇಕು. ಬಂಧಿತ ಪ್ರತಿಭಟನಾಕಾರರನ್ನು ಕೂಡಲೇ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಕಟ್ಟಡದಿಂದ ಜಿಗಿದು ಪ್ರಾಣ ಬಿಡುತ್ತೇವೆ'ಎಂದು ಟಿಆರ್‌ಎಸ್ ಶಾಸಕರಾದ ಕೆ.ಸಾಮಯ್ಯ ಮತ್ತು ಡಿ. ವಿನಯ್ ಭಾಸ್ಕರ್ ಬೆದರಿಕೆ ಹಾಕಿದ್ದರಿಂದ ಕೆಲ ಕ್ಷಣ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕಪ್ಪು ಬಾವುಟ ಹಿಡಿದು ತೆಲಂಗಾಣ ಪರ ಘೋಷಣೆ ಕೂಗುತ್ತಿದ್ದ ಈ ಶಾಸಕರನ್ನು ಸುಮಾರು ಒಂದು ಗಂಟೆ ಬಳಿಕ ವಿಧಾನಸಭೆಯ ಮಾರ್ಷಲ್‌ಗಳು ಕೆಳಗೆ ಕರೆತರುವಲ್ಲಿ ಯಶಸ್ವಿಯಾದರು.

ಇನ್ನುಳಿದ ಶಾಸಕರು ವಿಧಾನಸಭೆ ಮುಖ್ಯದ್ವಾರದಲ್ಲಿ ಸೀಮಾಂಧ್ರ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಿಗಿ ಬಂದೋಬಸ್ತ್: ಆಂಧ್ರಪ್ರದೇಶ ವಿಧಾನಸಭೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗಗಳನ್ನು ಪೊಲೀಸರು ಬಂದ್ ಮಾಡಿದ್ದರು.

ಹೈದರಾಬಾದ್ ಕಡೆಗೆ ಬರುವ ಎಲ್ಲಾ ವಾಹನಗಳ ತಪಾಸಣೆ ನಡೆಸಿದ ನಂತರವೇ ಒಳಹೋಗಲು ಬಿಟ್ಟರು. ವಿಧಾನಸಭೆ ಚಲೋ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆಲಂಗಾಣ ಭಾಗದಿಂದ ಆಗಮಿಸಿದ್ದ ನೂರಾರು ಜನರನ್ನು ಹೈದರಾಬಾದ್ ಹೊರಗಡೆ ತಡೆದು ವಶಕ್ಕೆ ತೆಗೆದುಕೊಂಡರು. ನಿಷೇಧಾಜ್ಞೆ ಉಲ್ಲಂಘಿಸಿದ ತೆಲಂಗಾಣ ಜಂಟಿ ಕ್ರಿಯಾ ಸಮಿತಿ ಮುಖಂಡರನ್ನು ಪೊಲೀಸರು ಬಂಧಿಸಿದರು.

ವಿಧಾನಸಭೆಯತ್ತ ಹೊರಟಿದ್ದ ಸಮಿತಿಯ ಅಧ್ಯಕ್ಷ ಎಂ.ಕೋದಂಡರಾಮ, ಶ್ರೀನಿವಾಸ ಗೌಡ ಸೇರಿ ಇತರರನ್ನು ಇಂದಿರಾ ಪಾರ್ಕ್ ಬಳಿ ಪೊಲೀಸರು ವಶಕ್ಕೆ ತೆಗೆದುಕೊಂಡರು. ಈ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಟಿಆರ್‌ಎಸ್ ಪಾಲಿಟ್‌ಬ್ಯೂರೊ ಸದಸ್ಯ ಶರವಣ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ರ‌್ಯಾಲಿ ತಡೆಯಲು ಮುಂದಾದ ಪೊಲೀಸರತ್ತ ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಲ್ಲು ತೂರಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಅಶ್ರುವಾಯು ಸಿಡಿಸಿ, ವಿದ್ಯಾರ್ಥಿಗಳನ್ನು ಸ್ಥಳದಿಂದ ಚದುರಿಸಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಜಿ. ಕಿಶನ್ ರೆಡ್ಡಿ, ಹಿರಿಯ ಮುಖಂಡ ಬಂಡಾರು ದತ್ತಾತ್ರೇಯ, ಇಂದ್ರಸೇನಾ ರೆಡ್ಡಿ ಮತ್ತು ಜಿ. ಲಕ್ಷ್ಮಣ್ ಹಾಗೂ ಟಿಆರ್‌ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಪುತ್ರಿಯನ್ನು ಇಂದಿರಾ ಪಾರ್ಕ್ ಬಳಿ ವಶಕ್ಕೆ ತೆಗೆದುಕೊಳ್ಳಲಾಯಿತು. ಟಿಆರ್‌ಎಸ್ ಸಂಸದರಾದ ವಿಜಯಶಾಂತಿ, ಜಿ. ವಿವೇಕ್, ಮಂಡಾ ಜಗನ್ನಾಥಂ ಹಾಗೂ ಅವರ ನೂರಾರು ಬೆಂಬಲಿಗರನ್ನು ನಿಜಾಮ್ ಕ್ಲಬ್ ಹತ್ತಿರ ಬಂಧಿಸಲಾಯಿತು. ವಿಧಾನಸಭೆ ಕಡೆಗೆ ರ‍್ಯಾಲಿ ನಡೆಸಲು ಪ್ರಯತ್ನಿಸಿದ ಸಿಪಿಐ ರಾಜ್ಯ ಕಾರ್ಯದರ್ಶಿ ಕೆ. ನಾರಾಯಣ್ ಅವರನ್ನು ತಡೆದು ಪೊಲೀಸರು ವಶಕ್ಕೆ ತೆಗೆದುಕೊಂಡರು.
 

ವಿಧಾನಸಭೆ ಕಲಾಪಕ್ಕೆ ಅಡ್ಡಿ
ಪ್ರತ್ಯೇಕ ರಾಜ್ಯ ಸಂಬಂಧ ಟಿಆರ್‌ಎಸ್, ಟಿಡಿಪಿ, ಸಿಪಿಐ ಮತ್ತು ಬಿಜೆಪಿ ಶಾಸಕರು ವಿಧಾನಸಭೆ ಕಲಾಪಕ್ಕೆ ಅಡ್ಡಿಪಡಿಸಿದರು. ಟಿಆರ್‌ಎಸ್ ಮತ್ತು ಟಿಡಿಪಿ ಶಾಸಕರು ಸ್ಪೀಕರ್ ಪೀಠದ ಬಳಿ ತೆರಳಿ ಘೋಷಣೆ ಕೂಗಿದರು.

ಇದರಿಂದಾಗಿ ಸದನವನ್ನು ಮುಂದೂಡಲಾಯಿತು. ವಿಧಾನಸಭೆಯ ಪ್ರವೇಶ ದ್ವಾರದ ಬಳಿ ಧರಣಿ ಕುಳಿತಿದ್ದ ಟಿಆರ್‌ಎಸ್, ಬಿಜೆಪಿ ಮತ್ತು ಸಿಪಿಐನ ಸುಮಾರು 20 ಶಾಸಕರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.

ತೆಲಂಗಾಣ, ಆಹಾರ ಮಸೂದೆ ಚರ್ಚೆ
ನವದೆಹಲಿ (ಪಿಟಿಐ):
ಆಹಾರ ಭದ್ರತೆ ಮಸೂದೆ ಹಾಗೂ ತೆಲಂಗಾಣ ವಿಷಯಗಳನ್ನು ಚರ್ಚಿಸಲು ಶುಕ್ರವಾರ ಸಂಜೆ ಕಾಂಗ್ರೆಸ್ ಪ್ರಮುಖರ ಸಭೆ ನಡೆಯಿತು.

ಈ ಎರಡೂ ವಿಷಯವಾಗಿ ಒಮ್ಮತ ಮೂಡಿಸಲು ವಿರೋಧ ಪಕ್ಷಗಳ ಜತೆ ಸಮಾಲೋಚನೆ ನಡೆಸಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ  ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತಿತತರು ಉಪಸ್ಥಿತರಿದ್ದರು.
ಆಹಾರ ಭದ್ರತೆ ಮಸೂದೆ ಕುರಿತಂತೆ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹಾಗೂ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಂಗೋಪಾಲ್ ಯಾದವ್ ಅವರೊಂದಿಗೆ ಸಮಾಲೋಚನೆ ನಡೆಸುತ್ತಿರುವ ಹೊತ್ತಿನಲ್ಲಿಯೇ ಈ ಸಭೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT