`ಮುಸ್ಲಿಮರ ಓಲೈಕೆ' ನಡೆಗೆ ಅಲಹಾಬಾದ್ ಹೈಕೋರ್ಟ್ ಪೀಠ ತಡೆ
ಲಖನೌ: ಸಮಾಜವಾದಿ ಪಕ್ಷವು ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಓಲೈಕೆಗಾಗಿ ಮಾಡಿದ್ದ ರಾಜಕೀಯ ತಂತ್ರ ಇದೀಗ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಭಾರಿ ಇಕ್ಕಟ್ಟಿಗೆ ಸಿಲುಕಿಸಿದೆ.
ಭಯೋತ್ಪಾದನೆ ಆರೋಪದ ಮೇಲೆ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ ಮುಗ್ಧ ಮುಸ್ಲಿಂ ಯುವಕರನ್ನು ಬಿಡುಗಡೆ ಮಾಡುವುದಾಗಿ 2012ರ ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಎಸ್‌ಪಿ ಆಶ್ವಾಸನೆ ನೀಡಿತ್ತು. ಅಧಿಕಾರಕ್ಕೆ ಬಂದ ಮೇಲೆ ಕ್ರಮಕ್ಕೂ ಮುಂದಾಗಿತ್ತು. ಆದರೆ ಇದಕ್ಕೆ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠ ವಾರದ ಹಿಂದೆ ತಡೆ ನೀಡಿತು. ಆರೋಪಿಗಳ ವಿರುದ್ಧದ ಪ್ರಕರಣವನ್ನು ವಾಪಸ್ ಪಡೆಯುವುದಕ್ಕೆ ಕೋರಿ ಸರ್ಕಾರ ಸಲ್ಲಿಸಿದ್ದ ಮನವಿಯನ್ನೂ ಪೀಠ ತಿರಸ್ಕರಿಸ್ದ್ದಿದರಿಂದ ಅಖಿಲೇಶ್‌ಗೆ ಭಾರಿ ಹಿನ್ನಡೆಯಾಗಿದೆ.
ಭಯೋತ್ಪಾದನೆ ಆರೋಪದ ಮೇಲೆ 19 ಜನರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯಲು ಕ್ರಮ ತೆಗೆದುಕೊಳ್ಳುವಂತೆ ಕಾನೂನು ಇಲಾಖೆಗೆ ಅಖಿಲೇಶ್ ತಾಕೀತು ಮಾಡಿದ್ದರು. ಈ 19ಜನರಲ್ಲಿ ಹರ್ಕತ್ -ಉಲ್-ಜಿಹಾದ್ -ಎ-ಇಸ್ಲಾಮಿ (ಹುಜಿ)ಸದಸ್ಯ ನಾಸಿರ್ ಹುಸೇನ್ ಅಲಿಯಾಸ್ ಆರೀಫ್ ಕೂಡ ಒಬ್ಬ. ಪೊಲೀಸರು ಹೇಳುವ ಪ್ರಕಾರ ಈತ ಪಾಕಿಸ್ತಾನದಲ್ಲಿ ತರಬೇತಿ ಪಡೆದುಕೊಂಡಿದ್ದ. ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 2006ರ ಜೂನ್‌ನಲ್ಲಿ ಈತನನ್ನು ಬಂಧಿಸಲಾಗಿತ್ತು. ದೇಶದ ಪ್ರಮುಖ ಸ್ಥಳಗಳಲ್ಲಿ ಸ್ಫೋಟ ನಡೆಸಲು ಹೊಂಚು ಹಾಕಿದ್ದಾಗಿ ವಿಚಾರಣೆ ವೇಳೆ ಈತ ಬಾಯಿ ಬಿಟ್ಟಿದ್ದ.
ಹುಜಿಯ ಇನ್ನೊಬ್ಬ ಸದಸ್ಯ ಮೊಹಮ್ಮದ್ ಯಾಕೂಬ್‌ನನ್ನು 2007ರಲ್ಲಿ ಬಂಧಿಸಲಾಗಿತ್ತು. ಸರ್ಕಾರ ಜೈಲಿನಿಂದ ಬಿಡುಗಡೆ ಮಾಡಲು ಪ್ರಯತ್ನಿಸುತ್ತಿರುವ ವ್ಯಕ್ತಿಗಳ ಪೈಕಿ ಐವರ ಮೇಲೆ ಕೋರ್ಟ್ ಆವರಣದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪ ಇದೆ.
2007ರಲ್ಲಿ ವಾರಣಾಸಿ, ಗೋರಖ್‌ಪುರ ಹಾಗೂ ಫೈಜಾಬಾದ್‌ನಲ್ಲಿ ನಡೆದ ಸರಣಿ ಸ್ಫೋಟಗಳಿಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ವಾಪಸ್ ಪಡೆಯುವುದಕ್ಕೂ ಸರ್ಕಾರ ಮುಂದಾಗಿತ್ತು. ಇದಕ್ಕಾಗಿ ಕಾನೂನು ಇಲಾಖೆ ಅಧಿಕಾರಿಗಳಿಂದ ವರದಿ ಕೇಳಿತ್ತು.
`ಕೆಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಬಿಡುಗಡೆ ಮಾಡುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದುದು. ಅಲ್ಲದೇ ಇದು ಕೆಟ್ಟ ಸಂದೇಶ ನೀಡುತ್ತದೆ. ಸ್ಫೋಟ ಪ್ರಕರಣಗಳಲ್ಲಿ ಹಲವಾರು ಮಂದಿ ಮೃತಪಟ್ಟಿದ್ದಾರೆ. ಆರೋಪಿಗಳು ಎಸಗಿರುವ ಕೃತ್ಯ ಗಂಭೀರವಾದುದು. ಇವರೆಲ್ಲರ ವಿರುದ್ಧ ಪ್ರಾಸಿಕ್ಯೂಷನ್ ಬಳಿ ಬಲವಾದ ಪುರಾವೆಗಳು ಇವೆ' ಎಂದು ಅಧಿಕಾರಿಗಳು ಹೇಳಿದ್ದರು.
ಒತ್ತಡಕ್ಕೆ ಮಣಿದ ಸರ್ಕಾರ: ಜೈಲಿನಲ್ಲಿರುವ ಮುಸ್ಲಿಂ ಯುವಕರ ಬಿಡುಗಡೆ ಸೂಕ್ಷ್ಮ ವಿಚಾರವಾಗಿದ್ದರಿಂದ ಸರ್ಕಾರ ದುಡುಕಿನ ನಿರ್ಧಾರಕ್ಕೆ ಬರಲು ಮೊದಲು ಹಿಂಜರಿದಿತ್ತು.
`ಭಯೋತ್ಪಾದನೆ ಪ್ರಕರಣಗಳಲ್ಲಿ ಸುಳ್ಳು ಆರೋಪದ ಮೇಲೆ ಬಂಧಿತರಾಗಿರುವ ಮುಗ್ಧ ಮುಸ್ಲಿಂ ಯುವಕರನ್ನು ಬಿಡುಗಡೆ ಮಾಡುವುದಾಗಿ ಸಮಾಜವಾದಿ ಪಕ್ಷ ಚುನಾವಣೆಗೆ ಮುನ್ನ ಭರವಸೆ ನೀಡಿತ್ತು. ಆದರೆ ನಂತರ ಕ್ರಮ ಕೈಗೊಂಡಿಲ್ಲ' ಎಂದು ಮುಸ್ಲಿಂ ಸಂಘಟನೆಗಳು ವಾಗ್ದಾಳಿ ನಡೆಸಿದ್ದರಿಂದ ಸರ್ಕಾರ ಒತ್ತಡಕ್ಕೆ ಕಟ್ಟುಬೀಳಬೇಕಾಯಿತು.
` ಒಬ್ಬ ವ್ಯಕ್ತಿ ಭಯೋತ್ಪಾದಕ ಎನ್ನುವುದನ್ನು ಯಾರು ನಿರ್ಧರಿಸಬೇಕು...ಈ ವಿಷಯ ಕೋರ್ಟ್ ಮುಂದೆ ಇದೆ. ಆರೋಪಿಗಳನ್ನು ಬಿಡುಗಡೆ ಮಾಡಲು ಮುಂದಾಗುವ ಮೂಲಕ ಸರ್ಕಾರ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆಯೇ?
ಇಂದು ಭಯೋತ್ಪಾದಕರನ್ನು ಬಿಡುಗಡೆ ಮಾಡುತ್ತೀರಿ. ಆ ಮೇಲೆ ಅವರಿಗೆ ನೀವು ಪದ್ಮಭೂಷಣ ನೀಡಿ ಗೌರವಿಸಿದರೂ ಆಶ್ಚರ್ಯವಿಲ್ಲ'- ಸರ್ಕಾರದ ನಿಲುವನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಈ ರೀತಿ ಕೆಂಡಕಾರಿತ್ತು.
`ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಸ್ಲಿಮರನ್ನು ಓಲೈಸಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ' ಎನ್ನುವುದು ಬಿಜೆಪಿ ಆರೋಪ. `ಸರ್ಕಾರ ತನ್ನ ಕರ್ತವ್ಯ ಮಾಡಿದೆ. ನಮ್ಮ ಕೈಲಿ ಏನು ಸಾಧ್ಯವೋ ಅದನ್ನು ಮಾಡಿದ್ದೇವೆ.
ಕೋರ್ಟ್ ಆದೇಶವನ್ನು ನಾವು ಪರಿಶೀಲಿಸಿ ಸೂಕ್ತ ನಿರ್ಧಾರಕ್ಕೆ ಬರುತ್ತೇವೆ' ಎನ್ನುವುದು ಅಖಿಲೇಶ್ ಸಮರ್ಥನೆ.
ರಾಜ್ಯದ ಜನಸಂಖ್ಯೆಯಲ್ಲಿ ಶೇ20ರಷ್ಟಿರುವ ಮುಸ್ಲಿಮರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.