ADVERTISEMENT

ಇಟಲಿಯಿಂದ ದಾಖಲೆ ಪಡೆದ ಸಿಬಿಐ

ಅತಿ ಗಣ್ಯ ವ್ಯಕ್ತಿಗಳ ಹೆಲಿಕಾಪ್ಟರ್ ಒಪ್ಪಂದ ಹಗರಣ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2013, 19:59 IST
Last Updated 24 ಫೆಬ್ರುವರಿ 2013, 19:59 IST
ಇಟಲಿಯಿಂದ ದಾಖಲೆ ಪಡೆದ ಸಿಬಿಐ
ಇಟಲಿಯಿಂದ ದಾಖಲೆ ಪಡೆದ ಸಿಬಿಐ   

ನವದೆಹಲಿ (ಐಎಎನ್‌ಎಸ್): ಅತಿ ಗಣ್ಯ ವ್ಯಕ್ತಿಗಳ ಹೆಲಿಕಾಪ್ಟರ್ ಒಪ್ಪಂದ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿರುವ ಸಿಬಿಐ, ಇಟಲಿಯ ಅಧಿಕಾರಿಗಳಿಂದ ಕೆಲವು ಪ್ರಮುಖ ದಾಖಲೆಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಆಗಸ್ಟಾ ವೆಸ್ಟ್‌ಲ್ಯಾಂಡ್ ಜೊತೆಗೆ ಒಪ್ಪಂದ ಕುದುರಿಸುವಲ್ಲಿ ಯಾವುದೇ ಭಾರತೀಯ ವ್ಯಕ್ತಿ ಲಂಚ ಪಡೆದಿದ್ದರೇ ಎನ್ನುವುದರ ತನಿಖೆಗೆ ಇದು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಭಾರತಕ್ಕೆ ವಾಪಸಾಗಿರುವ ಸಿಬಿಐ ತಂಡದ ಸದಸ್ಯರೊಬ್ಬರು ಇಟಲಿ ಪ್ರಾಸಿಕ್ಯೂಟರ್‌ನಿಂದ ಕೆಲವು ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಈ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪ್ರಾಥಮಿಕ ತನಿಖೆ ಕೈಗೊಳ್ಳಲಾಗುತ್ತದೆ ಎಂದು ತನಿಖಾ ತಂಡದ ಉನ್ನತ ಮೂಲಗಳು ತಿಳಿಸಿವೆ.

ತನಿಖೆ ಪೂರ್ಣಗೊಂಡ ಬಳಿಕ ಇತರ ದಾಖಲೆಗಳನ್ನು ಹಸ್ತಾಂತರಿಸುವುದಾಗಿ ಇಟಲಿಯ ಅಧಿಕಾರಿಗಳು ಹೇಳಿದ್ದಾರೆ. ಇಟಲಿಯಲ್ಲೇ ಇರುವ ಸಿಬಿಐ ಅಧಿಕಾರಿಯೊಬ್ಬರು ಇನ್ನಷ್ಟು ದಾಖಲೆಗಳೊಂದಿಗೆ ಸೋಮವಾರ ವಾಪಸಾಗುವರು ಎಂದೂ ಮೂಲಗಳು ತಿಳಿಸಿವೆ.

ಹಗರಣ ಕುರಿತು ತನಿಖೆ ನಡೆಸಲು ಇಟಲಿಗೆ ತೆರಳಿದ ರಕ್ಷಣಾ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಸಿಬಿಐ ತಂಡದ ವರದಿಯನ್ನು ಪರಿಶೀಲಿಸಿದ ಬಳಿಕ ಆಗಸ್ಟಾ ವೆಸ್ಟ್‌ಲ್ಯಾಂಡ್ ಕಂಪೆನಿ ಜತೆಗಿನ ಒಪ್ಪಂದ ಕೈಬಿಡುವ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿತ್ತು.

ಷೋಕಾಸ್ ನೋಟಿಸ್‌ಗೆ ಆಗಸ್ಟಾ ವೆಸ್ಟ್‌ಲ್ಯಾಂಡ್ ನೀಡಿದ ಉತ್ತರವನ್ನೂ ಸಚಿವಾಲಯ ಪರಿಶೀಲಿಸುತ್ತಿದೆ.

ಜಂಟಿ ಕಾರ್ಯದರ್ಶಿ ಅರುಣ್ ಕುಮಾರ್ ಬಾಲ್ ಮತ್ತು ಸಿಬಿಐ ತಂಡ ನೀಡಿರುವ ಸಾಕ್ಷ್ಯಗಳನ್ನು ಪರಿಗಣಿಸುವುದರೊಂದಿಗೆ ಒಪ್ಪಂದ ಕುರಿತ ಕಾನೂನು ಅಂಶಗಳತ್ತಲೂ  ಗಮನಹರಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.