ADVERTISEMENT

ಇಟಲಿ ತಜ್ಞರ ಸಮ್ಮುಖದಲ್ಲಿ ಇಂದು ಶಸ್ತ್ರಾಸ್ತ್ರ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST
ಇಟಲಿ ತಜ್ಞರ ಸಮ್ಮುಖದಲ್ಲಿ ಇಂದು ಶಸ್ತ್ರಾಸ್ತ್ರ ಪರಿಶೀಲನೆ
ಇಟಲಿ ತಜ್ಞರ ಸಮ್ಮುಖದಲ್ಲಿ ಇಂದು ಶಸ್ತ್ರಾಸ್ತ್ರ ಪರಿಶೀಲನೆ   

ಕೊಚ್ಚಿ (ಪಿಟಿಐ): ಕೇರಳ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡವು (ಎಸ್‌ಐಟಿ) ಶನಿವಾರ ಇಟಲಿ ಎನ್‌ರಿಕಾ ಲೆಕ್ಸಿ ಹಡಗಿಗೆ ತೆರಳಿ ಮೀನುಗಾರರ ಹತ್ಯೆಗೆ ಹಡಗಿನ ಸಿಬ್ಬಂದಿ ಬಳಸಿರುವ ಬಂದೂಕುಗಳಿಗೆ ಶೋಧ ನಡೆಸಲಿದ್ದು, ಈ ಸಂದರ್ಭದಲ್ಲಿ ಇಟಲಿಯ ಶಸ್ತ್ರಾಸ್ತ್ರ ತಜ್ಞರೂ ಹಾಜರಿರುತ್ತಾರೆ.

ಎಸ್‌ಐಟಿ ಮುಖ್ಯಸ್ಥರೂ ಆಗಿರುವ ಕೊಚ್ಚಿ ಪೊಲೀಸ್ ಕಮಿಷನರ್ ಎಂ. ಆರ್. ಅಜಿತ್ ಕುಮಾರ್ ಅವರು ಈ ವಿಷಯವನ್ನು ತಿಳಿಸಿದ್ದು, ಇಟಲಿ ಸರ್ಕಾರದ ಕೋರಿಕೆಯಂತೆ ಆ ದೇಶದ ಇಬ್ಬರು ಶಸ್ತ್ರಾಸ್ತ್ರ ತಜ್ಞರ ಸಮ್ಮುಖದಲ್ಲಿ ಆಯುಧ ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಇಟಲಿಯ ಬಂಧಿತ ಇಬ್ಬರು ಹಡಗಿನ ಸಿಬ್ಬಂದಿಯನ್ನೂ ಶೋಧನಾ ಕಾರ್ಯದ ವೇಳೆ ಹಡಗಿಗೆ ಕರೆದೊಯ್ಯಲಾಗುತ್ತದೆಯೇ ಎಂದು ಕೇಳಿದಾಗ, ಅಂತಹ ವಿವರಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಎಂದರು.

ಶಸ್ತ್ರಾಸ್ತ್ರ ವಶ ಮತ್ತು ಪರಿಶೀಲನೆ ಸಂದರ್ಭದಲ್ಲಿ ತಮ್ಮ ದೇಶದ ತಜ್ಞರು ಹಾಜರಿರಲು ಅವಕಾಶ ಮಾಡಿಕೊಡಬೇಕು ಎಂಬ ಇಟಲಿ ಸರ್ಕಾರದ ಮನವಿಯನ್ನು ಕೊಲ್ಲಂ ನ್ಯಾಯಾಲಯ ಒಪ್ಪಿಕೊಂಡಿದೆ.

ಬಂಧಿತರನ್ನು ಪೊಲೀಸರು ಸರಿಯಾಗಿ ನೋಡಿಕೊಳ್ಳುತ್ತಿರುವ ಬಗ್ಗೆ ಇಟಲಿಗೆ ತೃಪ್ತಿ ಇದ್ದು, ತನಿಖೆಗೆ ಸಹಕರಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬಂದರಿನಲ್ಲೇ ಇರಲಿ: ಮುಂದಿನ ಆದೇಶದವರೆಗೆ ಇಟಲಿಯ ಹಡಗನ್ನು ಕೊಚ್ಚಿ ಬಂದರಿನಿಂದ ಕದಲದಂತೆ ನೋಡಿಕೊಳ್ಳಬೇಕು ಎಂದು ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ ಬಂದರು ಅಧಿಕಾರಿಗಳಿಗೆ ಆದೇಶಿಸಿದೆ.

25 ಲಕ್ಷ ರೂಪಾಯಿಗಳ ಭದ್ರತಾ ಠೇವಣಿ ಪಡೆದು ಹಡಗನ್ನು ಬಿಡುಗಡೆ ಮಾಡಬಹುದು ಎಂಬ ಏಕ ನ್ಯಾಯಮೂರ್ತಿ ಪೀಠದ ಆದೇಶವನ್ನು ಪ್ರಶ್ನಿಸಿ ದೊರಮ್ಮಾ ಎಂಬುವರು ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಲಾಗುತ್ತದೆ ಎಂದು ವಿಭಾಗೀಯ ಪೀಠ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.