ಹೋಶಿಯಾರ್ ಪುರ (ಪಂಜಾಬ್) (ಐಎಎನ್ ಎಸ್): ಇರಾಕ್ ನಲ್ಲಿ ಸುನ್ನಿ ಬಂಡುಕೋರರು ಅಪಹರಿಸಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿರುವ ಪಂಜಾಬಿ ಯುವಕನೊಬ್ಬನ ಸಹೋದರನ ಪ್ರಕಾರ ಉತ್ತರ ಭಾರತದ ಯುವಕರನ್ನು ಗಲಭೆ ಗ್ರಸ್ತ ರಾಷ್ಟ್ರದಲ್ಲಿನ ಏಜೆಂಟರಿಗೆ ಕೇವಲ 400 ಡಾಲರ್ ಗಳಿಗೆ ಮಾರಾಟ ಮಾಡಲಾಗಿದೆ ಎನ್ನಲಾಗಿದೆ.
ಹೋಶಿಯಾರ್ ಪುರದ ಯುವಕ ಕಮಲ್ ಜಿತ್ ಸಿಂಗ್ ಅವರನ್ನು ಬಂಡುಕೋರರು ಅಪಹರಿಸಿದ್ದು ಇವರ ಸಹೋದರ ಪರಮಜಿತ್ ಸಿಂಗ್ ಯುವಕರ ಮಾರಾಟ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದಾರೆ.
ಎಂಟು ತಿಂಗಳ ಹಿಂದೆ ಇರಾಕಿನಿಂದ ವಾಪಸಾಗಿರುವ ಪರಮಜಿತ್ ಸಿಂಗ್ ಅವರಿಗೆ ಇರಾಕ್ ಗೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ.
ಭಾರತೀಯ ಒತ್ತೆಯಾಳುಗಳ ಕುರಿತು ಬರುತ್ತಿರುವ ವಿರೋಧಾಭಾಸದ ವರದಿಗಳ ಕಾರಣ ತಮ್ಮ ಕುಟುಂಬ ಹಾಗೂ ಅಪಹರಣಗೊಂಡಿರುವ ಇತರ ಯುವಕರ ಕುಟುಂಬಗಳು ಕಳವಳಗೊಂಡಿವೆ ಎಂದು ಪರಮಜಿತ್ ಸಿಂಗ್ ಹೇಳಿದರು.
ಪಂಜಾಬಿನಿಂದ ತೆರಳಿದ್ದ 40 ಮಂದಿ ಕಟ್ಟಡ ಕಾರ್ಮಿಕರನ್ನು 2014ರ ಜೂನ್ 19ರಂದು ಇರಾಕಿನಲ್ಲಿ ಅಪಹರಿಸಲಾಗಿದ್ದು ಅವರು ಎಲ್ಲಿದ್ದಾರೆಂಬ ಬಗ್ಗೆ ಈವರೆಗೂ ಸ್ಪಷ್ಟ ವರದಿಗಳು ಬಂದಿಲ್ಲ.
'ಕಮಲ್ ಜಿತ್ ಸಿಂಗ್ ಮತ್ತು ಇತರರು ಜೂನ್ 11 ರಂದು ಮೊಸುಲ್ ಪಟ್ಟಣದಿಂದ ಕಣ್ಮರೆಯಾಗಿದ್ದಾರೆ. ಜೂನ್ 15ರಂದು ನಾವು ಕಡೆಯದಾಗಿ ಕಮಲ್ ಜೊತೆ ಮಾತನಾಡಿದ್ದೆವು. ಆ ಬಳಿಕ ಅಲ್ಲಿಂದ ಯಾವುದೇ ಸಂದೇಶವೂ ಬಂದಿಲ್ಲ. ನಿರ್ಮಾಣ ಕಂಪೆನಿಯ ಅಧಿಕಾರಿಯೊಬ್ಬರು ಕಳೆದ ರಾತ್ರಿ ನಮ್ಮನ್ನು ಸಂಪರ್ಕಿಸಿ ಹಾಲಿ ಪರಿಸ್ಥಿತಿಯಲ್ಲಿ ಕಂಪೆನಿಗೆ ಹೆಚ್ಚೇನೂ ಮಾಡಲು ಸಾಧ್ಯವಾಗುತ್ತಿಲ್ಲ. ಅಪಹೃತ ಯುವಕರ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ತಿಳಿಸಿರುವುದಾಗಿ ಪರಮಜಿತ್ ಸಿಂಗ್ ಇಲ್ಲಿ ಶುಕ್ರವಾರ ಐಎಎನ್ ಎಸ್ ಗೆ ತಿಳಿಸಿದರು.
ಪರಮಜಿತ್ ಸಿಂಗ್ ಅವರ ಸಹೋದರ 18 ತಿಂಗಳ ಹಿಂದೆ ಇರಾಕ್ ಗೆ ಹೋಗಿದ್ದರು. ಅವರು ತೆಹ್ರಕ್ ನೂರ್ ಅಲ್ ಹುದಾ ನಿರ್ಮಾಣ ಕಂಪೆನಿಯಡಿಯಲ್ಲಿ ಕೆಲಸ ಮಾಡುತ್ತಿದ್ದರು.
ಚಿತ್ರ: ಇರಾಕಿನಲ್ಲಿ ಅಪಹೃತನಾದ ತನ್ನ ಸಹೋದರ ಕುಲಜಿತ್ ಸಿಂಗ್ ಭಾವಚಿತ್ರವನ್ನು ತೋರಿಸುತ್ತಿರುವ ಸಹೋದರಿ ಪರಮಜಿತ್ ಕೌರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.