ADVERTISEMENT

ಇಸ್ರೇಲ್‍ನ ಹೂವಿಗೆ ಮೋದಿ ಹೆಸರು; ಹೂವಿಗೆ ಗಣ್ಯರ ಹೆಸರಿಡುವುದು ಇದೇ ಮೊದಲೇನೂ ಅಲ್ಲ !

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 13:57 IST
Last Updated 5 ಜುಲೈ 2017, 13:57 IST
ಇಸ್ರೇಲ್‍ನ ಹೂವಿಗೆ ಮೋದಿ ಹೆಸರು; ಹೂವಿಗೆ ಗಣ್ಯರ ಹೆಸರಿಡುವುದು ಇದೇ ಮೊದಲೇನೂ ಅಲ್ಲ !
ಇಸ್ರೇಲ್‍ನ ಹೂವಿಗೆ ಮೋದಿ ಹೆಸರು; ಹೂವಿಗೆ ಗಣ್ಯರ ಹೆಸರಿಡುವುದು ಇದೇ ಮೊದಲೇನೂ ಅಲ್ಲ !   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಸ್ಮರಣಾರ್ಥಕಾಗಿ ಇಸ್ರೇಲ್‍ನ ಹೂವೊಂದಕ್ಕೆ 'ಮೋದಿ' ಎಂದು ಹೆಸರಿಡಲಾಗಿದೆ. ಇಸ್ರೇಲ್‍ನ ಕ್ರಿಸಾಂತುಮಮ್ ಎಂಬ ಹೂವಿಗೆ ಮೋದಿ ಹೆಸರಿಟ್ಟಿದ್ದು, ಮೋದಿಯವರ ಐತಿಹಾಸಿಕ ಭೇಟಿಗೆ ಸ್ಮರಣಾರ್ಥ ಈ ಹೆಸರಿಡಲಾಗಿದೆ ಎಂದು ಇಸ್ರೇಲ್ ಸರ್ಕಾರ ಹೇಳಿದೆ. 

ಅಂದಹಾಗೆ ಹೂವಿಗೆ ಗಣ್ಯರ ಹೆಸರಿಡುವುದು ಇದೇ ಮೊದಲೇನೂ ಅಲ್ಲ. ಹಲವಾರು ವರ್ಷಗಳಿಂದಲೇ ಈ ಸಂಪ್ರದಾಯ  ಬೆಳೆದು ಕೊಂಡು ಬಂದಿದೆ. 

ಗುಲಾಬಿಗೆ ಪ್ರಣವ್ ಹೆಸರು
ಫೆಬ್ರುವರಿ ತಿಂಗಳಲ್ಲಿ ಹಳದಿ ಬಣ್ಣದ ಗುಲಾಬಿ ಹೂವಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಹೆಸರು ಮತ್ತು ಪಿಂಕ್- ನೇರಳೆ ಮಿಶ್ರಿತ ಬಣ್ಣದ ಗುಲಾಬಿಗೆ ಪ್ರಣವ್ ಪತ್ನಿ ಸುವ್ರಾ ಮುಖರ್ಜಿಯವರ ಹೆಸರನ್ನಿಡಲಾಗಿದೆ. ಪಶ್ಚಿಮ ಬಂಗಾಳದ ಜಾಕ್ಪುರ್‍‍ನಲ್ಲಿರುವ ಪುಷ್ಪಾಂಜಲಿ ರೋಸ್ ನರ್ಸರಿಯಲ್ಲಿದ್ದ ಗುಲಾಬಿ ಹೂಗಳಿಗೆ ಈ ಹೆಸರನ್ನಿಡಲಾಗಿದ್ದು. ಈ ಹೂ ಗಿಡಗಳು ಈಗ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಮೊಘಲ್ ಉದ್ಯಾನವನದಲ್ಲಿವೆ.

ADVERTISEMENT

ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ದೀನ್ ದಯಾಳ್ ಉಪಾಧ್ಯಾಯ್
ಜನವರಿ 2016ರಂದು ಮೋದಿಯವರು ರಾಜಕೀಯ ಪ್ರಚಾರ ಕಾರ್ಯಕ್ರಮದಂಗವಾಗಿ ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಸಿಕ್ಕಿಂಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಗಾಂಗ್‍ಟಾಕ್‍ನಲ್ಲಿರುವ ಆರ್ಕಿಡ್ ಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದ್ದರು. ಈ ಪುಷ್ಪ ಪ್ರದರ್ಶನದಲ್ಲಿದ್ದ ಆರ್ಕಿಡ್‍ಗಳ ಪೈಕಿ ಒಂದು ಪ್ರಭೇದದ ಆರ್ಕಿಡ್‍‍ಗೆ ಸೈಬಿಡಿಯಂ ಸರ್ದಾರ್  (ಸರ್ದಾರ್ ವಲ್ಲಭಭಾಯಿ ಪಟೇಲ್ ಹೆಸರು)ಮತ್ತು ಇನ್ನೊಂದು ಪ್ರಭೇದದ ಆರ್ಕಿಡ್‍ಗೆ  ಲಿಕಾಸ್ಟೆ ದೀನ್ ದಯಾಳ್  (ಬಿಜೆಪಿ ನೇತಾರ ದೀನ್ ದಯಾಳ್ ಉಪಾಧ್ಯಾಯ್) ಎಂದು ಮೋದಿ ಹೆಸರಿಟ್ಟಿದ್ದರು. ಅದೇ ಕಾರ್ಯಕ್ರಮದಲ್ಲಿ ಸಿಕ್ಕಿಂ ಮುಖ್ಯಮಂತ್ರಿ ಪವನ್ ಚಾಂಮ್ಲಿಂಗ್ ಅವರು ಇನ್ನೊಂದು ಆರ್ಕಿಡ್‍ಗೆ ಸೈಬಿಡಿಯಂ ನಮೋ ಎಂದು ಹೆಸರಿಟ್ಟಿದ್ದರು. 

ಮೊಘಲ್ ಉದ್ಯಾನದಲ್ಲಿದೆ ಹಲವು ನಾಯಕರ ಹೆಸರಿರುವ ಹೂವುಗಳು
ರಾಷ್ಟ್ರಪತಿ ಭವನದ ಮುಂಭಾಗದಲ್ಲಿರುವ ಪರ್ಷಿಯನ್ ಶೈಲಿಯ ಉದ್ಯಾನವನದಲ್ಲಿ ಹಲವಾರು ಹೂವುಗಳಿಗೆ ರಾಷ್ಟ್ರ ನಾಯಕರ ಹೆಸರಿದೆ.   ಹೈಬ್ರಿಡ್ ಹಳದಿ ಮತ್ತು  ಕೆಂಪು ಗುಲಾಬಿಗೆ ರಾಜಾ ರಾಂ ಮೋಹನ್ ರಾಯ್, ಇನ್ನು ಕೆಲವು ಗುಲಾಬಿ ಹೂಗಳಿಗೆ ಮದರ್ ತೆರೆಸಾ, ಲಾಲ್ ಬಹದ್ದೂರ್ ಶಾಸ್ತ್ರಿ, ರಾಜೇಂದ್ರ ಪ್ರಸಾದ್ ಮತ್ತು ಜವಾಹರ್ ಲಾಲ್ ನೆಹರೂ ಅವರ ಹೆಸರನ್ನಿಡಲಾಗಿದೆ.

ಬ್ರಿಟಿಷ್ ರಾಜ ಮನೆತನದವರ ಹೆಸರು
ಬ್ರಿಟಿಷ್ ರಾಜ ಕುಟುಂಬದ ಪ್ರತಿಯೊಂದು ಸದಸ್ಯರ ಹೆಸರಿರುವ ಹೂವುಗಳಿವೆ. ಈ ಕುಟುಂಬದ ಅತೀ ಕಿರಿಯ ಸದಸ್ಯೆ ರಾಜಕುಮಾರಿ ಶಾರ್ಲೆಟ್ ಅವರ ಹೆಸರಿರುವ ಪಿಂಕ್- ಹಸಿರು ಕ್ರಿಸಾಂತೆಮಂಮ್, ನೇರಳೆ ಕ್ಲೆಮಟಿಸ್ ಮತ್ತು ಹಳದಿ ಅರಿಕುಲಾ ಹೂಗಳಿವೆ. ಕ್ವೀನ್ ವಿಕ್ಟೋರಿಯಾ ಅವರ ಹೆಸರನ್ನು ಕಾರ್ಡಿನಲ್ ಕೆಂಪು ಪೆರೆನ್ನಿಯಲ್ ಎಂಬ ಹೂವಿಗಿಟ್ಟಿದ್ದು, ಅದನ್ನು ಕ್ವೀನ್ ವಿಕ್ಟೋರಿಯಾ ಲೊಬೆಲಿಯಾ ಎಂದು ಕರೆಯಲಾಗುತ್ತದೆ. ಸಿಲ್ವರ್ ಪಿಂಕ್ ಗುಲಾಬಿ ಹೂವಿಗೆ ಕ್ವೀನ್ ಎಲಿಜಬೆತ್-II ಅವರ ಹೆಸರನ್ನಿಡಲಾಗಿದೆ. ಪ್ರಿನ್ಸೆಸ್ ಡಯಾನಾ ಮತ್ತು ಅವರ ಮಗ -ಸೊಸೆಯವರ ಹೆಸರಿರುವ ಹೂಗಳೂ ಇವೆ.

[related]

ಅಮೆರಿಕದ ಅಧ್ಯಕ್ಷರ ಹೆಸರು
ಗುಲಾಬಿಗಳಲ್ಲಿ  ಹೆಚ್ಚಿನವುಗಳಿಗೆ ಅಮೆರಿಕದ ಅಧ್ಯಕ್ಷ ಮತ್ತು ಮೊದಲ ಮಹಿಳೆಯ ಹೆಸರನ್ನಿಡಲಾಗಿದೆ. ಜಾಕ್ಸನ್ ಅಂಡ್ ಪರ್ಕಿನ್ಸ್  ಕಂಪನಿ ಪರಿಚಯಿಸಿದ ಕೊರಾಲ್ ಪಿಂಕ್ ಮಿಶ್ರಿತ ಗುಲಾಬಿಗೆ ಆಗಿನ ಮೊದಲ ಮಹಿಳೆ ಬರ್ಬರಾ ಬುಷ್ ಅವರ ಹೆಸರಿಡಲಾಗಿತ್ತು. ಜಾನ್. ಎಫ್. ಕೆನಡಿ ಅವರ ಹೆಸರಿನಲ್ಲಿ ಬಿಳಿ ಗುಲಾಬಿ, ಇಂಥದ್ದೇ ಗುಲಾಬಿಯೊಂದಕ್ಕೆ ಹಿಲರಿ ಕ್ಲಿಂಟನ್‍ ಅವರ ಹೆಸರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.