ADVERTISEMENT

ಉಗ್ರರ ದಾಳಿ: ವಿದೇಶಿ ಶಕ್ತಿಗಳ ಕೈವಾಡ

ಪಿಟಿಐ
Published 15 ಜುಲೈ 2017, 19:30 IST
Last Updated 15 ಜುಲೈ 2017, 19:30 IST
ಉಗ್ರರ ದಾಳಿ: ವಿದೇಶಿ ಶಕ್ತಿಗಳ ಕೈವಾಡ
ಉಗ್ರರ ದಾಳಿ: ವಿದೇಶಿ ಶಕ್ತಿಗಳ ಕೈವಾಡ   

ನವದೆಹಲಿ: ಕಾಶ್ಮೀರ ವಿಚಾರದಲ್ಲಿ ಚೀನಾ ಹಸ್ತಕ್ಷೇಪ ಮಾಡುತ್ತಿದೆ. ಅಮರನಾಥ ಯಾತ್ರಿಕರ ಮೇಲೆ ನಡೆದ ದಾಳಿಯಲ್ಲಿ ವಿದೇಶಿ ಶಕ್ತಿಗಳ ಕೈವಾಡ ಇದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
ಭಯೋತ್ಪಾದಕ ದಾಳಿಗಳ ವಿಚಾರದಲ್ಲಿ, ಮುಫ್ತಿ ಅವರು ಚೀನಾದ ಹೆಸರನ್ನು ಪ್ರಸ್ತಾಪಿಸಿದ್ದು ಇದೇ ಮೊದಲು.

ಚೀನಾವು ಈಚೆಗೆ, ‘ಕಾಶ್ಮೀರ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸುತ್ತೇವೆ’ ಎಂದು ಹೇಳಿತ್ತು. ಇದನ್ನು ಭಾರತ ನಿರಾಕರಿಸಿತ್ತು.

‘ಭೂತಾನ್‌ನ ದೊಕಾಲಾ ಪಾಸ್‌ನಲ್ಲಿ ಚೀನಾ ಆರಂಭಿಸಿದ್ದ ರಸ್ತೆ ಕಾಮಗಾರಿಯನ್ನು ಭಾರತೀಯ ಸೇನೆ ಸ್ಥಗಿತಗೊಳಿಸಿದಂತೆ, ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನದ ಪರವಾಗಿ ಚೀನಾ ತನ್ನ ಸೇನೆಯನ್ನು ಬಳಸುತ್ತದೆ’ ಎಂದು ಚೀನಾ ಹೇಳಿಕೆ ನೀಡಿತ್ತು.

ADVERTISEMENT

ಈ ಎರಡೂ ಬೆಳವಣಿಗೆಗಳ ಕಾರಣ ಮುಫ್ತಿ ಅವರ ಈ ಆರೋಪ ಮಹತ್ವ ಪಡೆದುಕೊಂಡಿದೆ. ಅಮರನಾಥ ಯಾತ್ರಿಕರಿಗೆ ಒದಗಿಸುವ ಭದ್ರತೆ ಕುರಿತು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್ ಅವರ ಜತೆ ಚರ್ಚೆ ನಡೆಸಿದ ನಂತರ ಅವರು ಪತ್ರಕರ್ತರ ಜತೆ ಮಾತನಾಡಿದರು.
‘ಕಾಶ್ಮೀರದಲ್ಲಿನ ಗಲಭೆ ಮತ್ತು ಸಮಸ್ಯೆಗಳು ಕೇವಲ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ್ದಲ್ಲ’ ಎಂದರು.

‘ದುರದೃಷ್ಟವಶಾತ್ ಚೀನಾ ಸಹ ಈಗ ನಮ್ಮ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಲು ಆರಂಭಿಸಿದೆ. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಇಡೀ ದೇಶ ನಮ್ಮ ಬೆಂಬಲಕ್ಕೆ ಬರದಿದ್ದಲ್ಲಿ, ಈ ಯುದ್ಧವನ್ನು ಗೆಲ್ಲುವುದು ಅಸಾಧ್ಯ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
‘ರಾಜ್ಯದಲ್ಲಿ ಕೋಮುಗಲಭೆ ಹುಟ್ಟುಹಾಕುವ  ಉದ್ದೇಶದಿಂದಲೇ ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಸಲಾಗಿದೆ. ಆದರೆ, ಇಡೀ ದೇಶ ರಾಜ್ಯ ಸರ್ಕಾರದ ನೆರವಿಗೆ ಬಂತು. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಯಿತು’ ಎಂದರು.

‘ಕಾಶ್ಮೀರದಲ್ಲಿ ಈವರೆಗೆ ನಡೆದಿರುವ ಉಗ್ರರ ದಾಳಿ ಮತ್ತು ಗಲಭೆಗಳಿಗೆ ಪಾಕಿಸ್ತಾನವೇ ಕುಮ್ಮಕ್ಕು ನೀಡುತ್ತಿದೆ ಎಂಬುದು ಮುಫ್ತಿ ಅವರ ನಿಲುವು ಆಗಿತ್ತು. ಆದರೆ ಅಮರನಾಥ ಯಾತ್ರಿಕರ ಮೇಲೆ ಉಗ್ರರ ದಾಳಿ ನಡೆದ ನಂತರ ಅವರ ನಿಲುವು ಬದಲಾಗಿದೆ’ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.