ADVERTISEMENT

ಉತ್ತರಪ್ರದೇಶ ಉಪ ಚುನಾವಣೆ: ಬಿಜೆಪಿ ವಾಟ್ಸ್ ಆ್ಯಪ್‌ ಗ್ರೂಪ್‌ನಲ್ಲಿ ಹರಿದಾಡುತ್ತಿರುವ ಸೋಲಿನ ಕಾರಣಗಳು

ಏಜೆನ್ಸೀಸ್
Published 16 ಮಾರ್ಚ್ 2018, 4:43 IST
Last Updated 16 ಮಾರ್ಚ್ 2018, 4:43 IST
ಉತ್ತರಪ್ರದೇಶ ಉಪ ಚುನಾವಣೆ: ಬಿಜೆಪಿ ವಾಟ್ಸ್ ಆ್ಯಪ್‌ ಗ್ರೂಪ್‌ನಲ್ಲಿ ಹರಿದಾಡುತ್ತಿರುವ ಸೋಲಿನ ಕಾರಣಗಳು
ಉತ್ತರಪ್ರದೇಶ ಉಪ ಚುನಾವಣೆ: ಬಿಜೆಪಿ ವಾಟ್ಸ್ ಆ್ಯಪ್‌ ಗ್ರೂಪ್‌ನಲ್ಲಿ ಹರಿದಾಡುತ್ತಿರುವ ಸೋಲಿನ ಕಾರಣಗಳು   

ಲಖನೌ: ಉತ್ತರಪ್ರದೇಶದ ಗೋರಖಪುರ ಮತ್ತು ಫೂಲ್‌ಪುರ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಕಾರಣಗಳು ಏನೆಂಬುದನ್ನು ಬಿಜೆಪಿ ವಾಟ್ಸ್ ಆ್ಯಪ್‌ ಗ್ರೂಪ್‌ನಲ್ಲಿ ಬಿತ್ತರಿಸಲಾಗಿದೆ. ಕಾರಣಗಳ ಸಂದೇಶಗಳನ್ನು ಸಂಗ್ರಹಿಸಿ ‘ದಿ ಪ್ರಿಂಟ್ ‘ಸುದ್ದಿ ತಾಣ ವರದಿ ಪ್ರಕಟಿಸಿದೆ.

ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ’ಮಾನನಿಯ ಯೋಗಿ ಜೀ ಸಿಎಂ ಯುಪಿ’ ಎಂಬ ವಾಟ್ಸ್ ಆ್ಯಪ್‌ ಗ್ರೂಪ್‌ನಲ್ಲಿ ಬಿಜೆಪಿ ಸೋಲಿನ ಕಾರಣಗಳ ಸಂದೇಶಗಳು ಹರಿದಾಡುತ್ತಿವೆ. ಆ ಕಾರಣಗಳ ಪಟ್ಟಿ ಇಲ್ಲಿದೆ;

1) ಅಮಿತ್‌ ಶಾ ಮೇಲೆ ಅಪವಾದ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರತಿನಿಧಿಸುತ್ತಿದ್ದ ಗೋರಖಪುರ ಕ್ಷೇತ್ರದ ಸೋಲಿಗೆ ಬಿಜೆಪಿ ವರಿಷ್ಠ ಅಮಿತ್‌ ಶಾ ಕಾರಣ ಎಂಬ ಸಂದೇಶ ಹರಿದಾಡುತ್ತಿದೆ.  ಟಿಕೆಟ್‌ ನೀಡಿಕೆ ವಿಚಾರದಲ್ಲಿ ಯೋಗಿ ಆದಿತ್ಯಾನಾಥ್ ಅವರ ಮಾತನ್ನು ಬಿಜೆಪಿ ವರಿಷ್ಠರು ಕೇಳಲಿಲ್ಲ ಎಂದು ಮತ್ತೊಂದು ಸಂದೇಶ ಹರಿದಾಡುತ್ತಿದೆ! ಅಲ್ಲದೇ ಗೋರಖನಾಥ್ ಪೀಠದವರಿಗೆ ಟಿಕೆಟ್ ನೀಡಿದ್ದರೆ ಬಿಜೆಪಿ ಸೋಲು ಅನುಭವಿಸುತ್ತಿರಲಿಲ್ಲ ಎಂಬ ಸಂದೇಶಗಳೂ ಇವೆ. ಗೋರಖಪುರದಲ್ಲಿ ಬಿಜೆಪಿಗೆ ಸ್ವಂತ ಅಸ್ತಿತ್ವವಿಲ್ಲ, ಇಲ್ಲಿ ಗೋರಖನಾಥ್ ಪೀಠದ ಪ್ರಭಾವದಿಂದ ಬಿಜೆಪಿ ಬೆಳವಣಿಗೆ ಕಂಡಿದೆ. ಇದನ್ನು ಅರಿಯದೇ ಅಮಿತ್ ಶಾ ಪೀಠದ ಹೊರಗಿನವರಿಗೆ ಟಿಕೆಟ್ ನೀಡಿ ತಪ್ಪು ಮಾಡಿದರು, ಈಗ ಬಿಜೆಪಿಯವರಿಗೆ ಯೋಗಿ ಅಥವಾ ಗೋರಖನಾಥ್ ಪೀಠದ ಪ್ರಭಾವ ಏನು ಎಂಬುದು ಗೊತ್ತಾಗಿದೆ ಎಂಬ ಪೋಸ್ಟ್‌ಗಳು ಬಿತ್ತರಗೊಂಡಿವೆ.

ADVERTISEMENT

2) ಶೇ 85 ರಷ್ಟು ಇತರೆ ಹಿಂದುಳಿದವರ್ಗದವರು ಮತ್ತು ಪರಿಶಿಷ್ಠ ಜಾತಿಯವರು ಇದ್ದಾರೆ. ಆದಾಗ್ಯೂ ಹಿಂದುಳಿದ ಜಾತಿಯವರನ್ನು ಅಥವಾ ಪರಿಶಿಷ್ಠ ಜಾತಿಯವರನ್ನು ಮುಖ್ಯಮಂತ್ರಿ ಮಾಡಿಲ್ಲ. ಕನಿಷ್ಠ,  ಪಕ್ಷದ ಅಧ್ಯಕ್ಷ ಸ್ಥಾನವನ್ನು ಕೊಡದಿರುವುದು ಹಿಂದುಳಿದವರು ಮತ್ತು ಪರಿಶಿಷ್ಠ ಜಾತಿಯವರು ಸರ್ಕಾರವನ್ನು ವಿರೋಧಿಸಲು ಕಾರಣವಾಗಿದೆ. ಇದರ ಜತೆಗೆ ಯೋಗಿ ಸರ್ಕಾರ ಮೀಸಲಾತಿಯನ್ನು ರದ್ದು ಪಡಿಸಲಿದೆ ಎಂಬ ವದಂತಿಗಳು ಬಿಜೆಪಿ ಸೋಲಿಗೆ ಕಾರಣವಾಗಿದೆ ಎಂಬ ಪೋಸ್ಟ್‌ಗಳು ಹರಿದಾಡಿವೆ.

3) ಬ್ರಾಹ್ಮಣ–ಠಾಕೂರರ ನಡುವಿನ ಬಿರುಕು: ಯೋಗಿ ಆದಿತ್ಯಾನಾಥ ಸರ್ಕಾರ ಠಾಕೂರರನ್ನು ಒಲೈಕೆ ಮಾಡುತ್ತಿದೆ  ಎಂದು ಬ್ರಾಹ್ಮಣರು ಸರ್ಕಾರದ ವಿರುದ್ಧ ಕೋಪಗೊಂಡಿದ್ದರು. ಇದು ಈ ಭಾಗದಲ್ಲಿನ ಬ್ರಾಹ್ಮಣರು ಮತ್ತು ಠಾಕೂರರ ನಡುವಿನ ಬಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಇದರಿಂದಾಗಿ ಕೆಲವು ಪ್ರದೇಶಗಳ ಬ್ರಾಹ್ಮರು ಮತದಾನ ಮಾಡಿರಲಿಲ್ಲ, ಇನ್ನು ಕೆಲವರು ಸಮಾಜವಾದಿ ಪಕ್ಷಕ್ಕೆ ಮತ ಹಾಕಿದ್ದರು ಎಂಬ ಸಂದೇಶಗಳನ್ನು ಹಾಕಲಾಗಿದೆ.

4) ಸಮಾಜವಾದಿ ಪಕ್ಷದ ಜಾತಿ ಸಮೀಕರಣ: ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಜಾತಿ ಸಮೀಕರಣ ಉತ್ತಮವಾಗಿ ಕೆಲಸ ಮಾಡುವ ಮೂಲಕ ಬಿಜೆಪಿಯನ್ನು ಸೋಲಿನ ಖೆಡ್ಡಾಕ್ಕೆ ಕೆಡವಿದೆ. ಮುಸ್ಲಿಮರ ಮತ ಪಡೆಯುವುದಕ್ಕಾಗಿ ಸಮಾಜವಾದಿ ಪಕ್ಷ ನಿಶಾದ್ ಮತ್ತು ಪೀಸ್ ಪಕ್ಷದ ಬೆಂಬಲ ಪಡೆದಿದ್ದು ಅನುಕೂಲವಾಗಿದೆ.

5) ವಿದ್ಯಾರ್ಥಿಗಳ ಆಕ್ರೋಶ: ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ನಕಲು ಮಾಡಲಿದ್ದಾರೆ ಎಂದು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಆದರೆ ಶಿಕ್ಷಕರು ಸರಿಯಾಗಿ ಪಾಠ ಮಾಡಲಿದ್ದಾರೊ ಇಲ್ಲವೊ ಎಂಬುದನ್ನು ಪರೀಕ್ಷಿಸಲು ತರಗತಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರಲಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದರು! ಬಿಜೆಪಿ ನೀಡಿದ್ದ ಭರವಸೆಯಂತೆ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ಸಕಾಲಕ್ಕೆ ವಿತರಣೆ ಮಾಡದಿರುವುದು ಮತ್ತು ಸಮರ್ಪಕವಾಗಿ ವಿದ್ಯಾರ್ಥಿ ವೇತನ ನೀಡದಿರುವುದು ವಿದ್ಯಾರ್ಥಿಗಳ ಕೋಪಕ್ಕೆ ಕಾರಣವಾಗಿತ್ತು. ಇದರಿಂದ ವಿದ್ಯಾರ್ಥಿಗಳು ಬಿಜೆಪಿಗೆ ಮತ ನೀಡಲಿಲ್ಲ ಎಂಬ ಪೋಸ್ಟ್‌ಗಳು ಹರಿದಾಡಿದ್ದವು.

6) ಕಾರ್ಯಕರ್ತರ ಅಳಲು:  ಸರ್ಕಾರಿ ಅಧಿಕಾರಿಗಳು ಬಿಜೆಪಿ ಕಾರ್ಯಕತರ ಮಾತನ್ನು ಕೇಳುತ್ತಿರಲಿಲ್ಲ, ಇದರಿಂದ ಕಾರ್ಯಕರ್ತರು ಹಿರಿಯ ನಾಯಕರ ದುಂಬಾಲು ಬೀಳ ಬೇಕಾಗಿದ್ದರಿಂದ ಕಾರ್ಯಕರ್ತರಲ್ಲಿ ಪಕ್ಷದ ಮೇಲೆ ಅಸಮಾದಾನವಿತ್ತು. ಸ್ಥಳೀಯವಾಗಿ ಜನರ ಸಮಸ್ಯೆಗಳ ಕಡೆ  ಸರ್ಕಾರ ಗಮನ ನೀಡುವಲ್ಲಿ ವಿಪಲವಾಗಿತ್ತು ಎಂಬ ಆರೋಪಗಳು ಇದ್ದವು ಎಂದು ವಾಟ್ಸ್ಅಪ್ ಗ್ರೂಪ್‌ನಲ್ಲಿ ಹಾಕಲಾಗಿದೆ.

7) ಸಿದ್ದಾಂತಗಳೊಂದಿಗೆ ರಾಜಿ ಮಾಡಿಕೊಂಡಿದ್ದು: ‘ಬಿಜೆಪಿ ತತ್ವ ಸಿದ್ದಾಂತಗಳೊಂದಿಗೆ ರಾಜಿ ಮಾಡಿಕೊಂಡಿರುವುದೇ‘ ಈ ಸೋಲಿಗೆ ಕಾರಣ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹೇಳಿದೆ. ಹಿಂದಿ ಪತ್ರಿಕೆಯೊಂದಕ್ಕೆ ವಿಎಚ್‌ಪಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.  ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರ್‌ವಾಲ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವುದನ್ನು ಪೋಸ್ಟ್‌ನಲ್ಲಿ ಉದಾಹರಿಸಲಾಗಿದೆ.( ಈ ಹಿಂದೆ ನರೇಶ್ ಅಗರ್‌ವಾಲ್‌ ಶ್ರೀರಾಮನನ್ನು ಅವಮಾನಿಸಿ ಹೇಳಿಕೆ ನೀಡಿದ್ದರು)

8) ಕೊನೆಯಲ್ಲೊಂದು ತಮಾಷೆ: ಇವಿಎಂಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಸಾಬೀತುಪಡಿಸಲು ಬಿಜೆಪಿ ಉದ್ದೇಶಪೂರ್ವಕವಾಗಿ ಈ ಸ್ಥಾನಗಳನ್ನು ಕಳೆದುಕೊಂಡಿದೆ ಎಂಬ ಜೋಕ್ ಕೂಡ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.