ADVERTISEMENT

ಉತ್ತರಾಖಂಡದ ಸತ್‌ಪುಲಿ ಪಟ್ಟಣದಲ್ಲಿ ಭಜರಂಗದಳದ ಕಾರ್ಯಕರ್ತರಿಂದ ಅಂಗಡಿ ಧ್ವಂಸ

ಏಜೆನ್ಸೀಸ್
Published 9 ಜುಲೈ 2017, 11:34 IST
Last Updated 9 ಜುಲೈ 2017, 11:34 IST
ಭಜರಂಗದಳದ ಕಾರ್ಯಕರ್ತರು ಅಂಗಡಿ ಧ್ವಂಸಗೊಳಿಸಿರುವುದು
ಭಜರಂಗದಳದ ಕಾರ್ಯಕರ್ತರು ಅಂಗಡಿ ಧ್ವಂಸಗೊಳಿಸಿರುವುದು   

ಡೆಹ್ರಾಡೂನ್: ಕೇದಾರನಾಥ ದೇಗುಲದ ಬಗ್ಗೆ  ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಚಿತ್ರ ಪ್ರಕಟಿಸಿರುವುದು ಉತ್ತರಾಖಂಡದ ಸತ್‌ಪುಲಿ ಪಟ್ಟಣದಲ್ಲಿ ಕೋಮು ಗಲಭೆಗೆ ಕಾರಣವಾಗಿದೆ. ಆಕ್ಷೇಪಾರ್ಹ ಚಿತ್ರ ಪ್ರಕಟಿಸಿದ್ದಾನೆ ಎನ್ನಲಾಗಿರುವ ಬಾಲಕನೊಬ್ಬನ ಕುಟುಂಬದವರಿಗೆ ಸೇರಿದ ತರಕಾರಿ ಅಂಗಡಿಯನ್ನು ಭಜರಂಗದಳದ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಮೀಪದ ಕೊಟ್‌ದ್ವಾರ್ ನಗರ, ಜಿಲ್ಲಾ ಕೇಂದ್ರವಾದ ಪೌರಿ ಪ್ರದೇಶಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಜಗತ್‌ರಾಮ್ ಜೋಷಿ ತಿಳಿಸಿದ್ದಾರೆ.

‘ಕೇದಾರನಾಥದ ಬಗ್ಗೆ ಆಕ್ಷೇಪಾರ್ಹ ಚಿತ್ರ ಪ್ರಕಟಿಸಿರುವ ನೈಜ ಆರೋಪಿಯ ಪತ್ತೆಗೆ ಹಾಗೂ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲಾ ಮ್ಯಾಜಿಸ್ಟ್ರೇಟರು ಸ್ಥಳಕ್ಕೆ ಧಾವಿಸಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ.

ADVERTISEMENT

‘ಭಜರಂಗದಳದ ಕಾರ್ಯಕರ್ತರು ಅಂಗಡಿಯನ್ನು ಧ್ವಂಸಗೊಳಿಸಿದ್ದಲ್ಲದೆ, ಹಿಂದು ಪರ ಘೋಷಣೆಗಳನ್ನು ಕೂಗುತ್ತಾ ತರಕಾರಿ ಪೆಟ್ಟಿಗೆಗಳಿಗೆ ಬೆಂಕಿ ಹಚ್ಚಿದ್ದಾರೆ. ಅವರು ಅಂಗಡಿ ಮಾಲೀಕನಿಗಾಗಿ ಹುಡುಕಾಟ ನಡೆಸುತ್ತಿದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ತಪ್ಪಿತಸ್ಥರನ್ನು ಬಂಧಿಸುವವರೆಗೂ ಹೋರಾಟ ನಡೆಸುವುದಾಗಿ ಭಜರಂಗದಳದ ಕಾರ್ಯಕರ್ತರೊಬ್ಬರು ಹೇಳುತ್ತಿರುವುದನ್ನು ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೊ ಮಾಡಿದ್ದಾರೆ.

ಡೆಹ್ರಾಡೂನ್‌ನಿಂದ 150 ಕಿಲೋಮೀಟರ್ ದೂರದಲ್ಲಿರುವ ಸತ್‌ಪುಲಿ ಪಟ್ಟಣದಲ್ಲಿ ಈ ಹಿಂದೆ ಕೋಮುಗಲಭೆ ನಡೆದ ಉದಾಹರಣೆ ಇಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.