
ನವದೆಹಲಿ (ಪಿಟಿಐ): ಕಾಂಗ್ರೆಸ್ ಸಂಸದ ವಿಜಯ್ ಬಹುಗುಣ ಅವರು ಉತ್ತರಾಖಂಡದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಪ್ರಕಟಿಸಿದ್ದಾರೆ.
ಆಜಾದ್ ಹೇಳಿಕೆ ಪ್ರಕಟಗೊಂಡ ಬಳಿಕ ಮಾತನಾಡಿದ ವಿಜಯ್ ಅವರು, ಪಕ್ಷದ ಎಲ್ಲ ವರ್ಗಗಳ ಮುಖಂಡರನ್ನು ಒಗ್ಗೂಡಿಸುವುದಾಗಿ ಮತ್ತು ಯಾವುದೇ ಭಿನ್ನಮತಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕೇಂದ್ರ ಸಚಿವ ಹರೀಶ್ ರಾವತ್ ಮತ್ತು ಸಂಸದ ವಿಜಯ್ ಬಹುಗುಣ ಅವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಚೌಧರಿ ಬೀರೇಂದರ್ ಸಿಂಗ್ ಮಾತುಕತೆ ನಡೆಸಿದ ಬಳಿಕ ಆಜಾದ್ ವಿಜಯ್ ಹೆಸರು ಪ್ರಕಟಿಸಿದ್ದಾರೆ.
ಈ ಮುಂಚೆ ನಡೆದ ಸಭೆಯಲ್ಲಿ ಸಿಎಂ ಆಯ್ಕೆ ನಿರ್ಧಾರವನ್ನು ಮಂಗಳವಾರ ಪ್ರಕಟಿಸಲಾಗುವುದು ಎಂದು ಆಜಾದ್ ತಿಳಿಸಿದ್ದರು. ಸಿಎಂ ಆಯ್ಕೆಗೆ ಶಾಸಕ ಅಥವಾ ಸಂಸದರಲ್ಲಿ ಯಾವ ಮಾನದಂಡ ನಿಗದಿಪಡಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಆಜಾದ್, `ಇಲ್ಲ, ಇಂಥ ಯಾವ ಮಾನದಂಡವೂ ಇಲ್ಲ. ಇದನ್ನು ಮಾಧ್ಯಮಗಳ ಸೃಷ್ಟಿ. ಸರ್ಕಾರಕ್ಕೆ ಬಿಎಸ್‌ಪಿ ಸಹ ಬೆಂಬಲ ನೀಡಿದೆ~ ಎಂದರು.
ಮುಖ್ಯಮಂತ್ರಿ ಆಯ್ಕೆ ಕುರಿತು ಕಾಂಗ್ರೆಸ್ ಮುಖಂಡ ಬೀರೇಂದ್ರ ಸಿಂಗ್, ಆಜಾದ್ ಮತ್ತು ಅಹ್ಮದ್ ಪಟೇಲ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೂ ಸಭೆ ನಡೆಸಿದರು.
ಪ್ರಮಾಣ ವಚನಕ್ಕೆ ಸಿದ್ಧತೆ
ಡೆಹ್ರಾಡೂನ್ ವರದಿ: ಉತ್ತರಾಖಂಡದ ಹೊಸ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಇಲ್ಲಿನ ಪರೇಡ್ ಗ್ರೌಂಡ್ ಆಯ್ಕೆ ಮಾಡಲಾಗಿದೆ.
ಈ ಸ್ಥಳದಲ್ಲಿ ಈಗಾಗಲೇ ಟೆಂಟ್ ಮತ್ತು ಕುರ್ಚಿಗಳನ್ನು ಹಾಕಲಾಗಿದ್ದು, ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದಾಗ್ಯೂ, ಒಂದೊಮ್ಮೆ ಹವಾಮಾನ ಪರಿಸ್ಥಿತಿಯಲ್ಲಿ ಬದಲಾವಣೆಯಾದರೆ ಸಮಾರಂಭವನ್ನು ಒಳಾಂಗಣ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದಿದ್ದಾರೆ.
ಸಮಾರಂಭದಲ್ಲಿ ಹೆಚ್ಚು ಜನ ಪಾಲ್ಗೊಳ್ಳುವುದರಿಂದ ಪರೇಡ್ ಗ್ರೌಂಡ್ ಆಯ್ಕೆ ಮಾಡಿಕೊಳ್ಳಲಾಗಿದೆ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಮಾರ ಹೇಳಿದ್ದಾರೆ.
2000ರಲ್ಲಿ ಬಿಜೆಪಿ ಮಧ್ಯಂತರ ಸರ್ಕಾರದ ಪ್ರಮಾಣ ವಚನ ಸಮಾರಂಭ ಪರೇಡ್ ಗ್ರೌಂಡ್‌ನಲ್ಲಿ ಜರುಗಿತ್ತು. ಉಳಿದಂತೆ ಎಲ್ಲ ಪ್ರಮಾಣ ವಚನ ಸಮಾರಂಭಪೆವಿಲಿಯನ್ ಗ್ರೌಂಡ್ ಮತ್ತು ಒಎನ್‌ಜಿಸಿ ಸಭಾಂಗಣದಲ್ಲಿ ನಡೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.