ADVERTISEMENT

ಉತ್ತರಾಖಂಡ: 900 ಯಾತ್ರಾರ್ಥಿಗಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 19:59 IST
Last Updated 1 ಜುಲೈ 2013, 19:59 IST
ಬದರಿನಾಥದಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಮಗುವನ್ನು ಭಾರತ-ಟಿಬೆಟ್ ಗಡಿ ಪೊಲೀಸ್ ಸಿಬ್ಬಂದಿ ರಕ್ಷಿಸಿದರು		-ಪಿಟಿಐ ಚಿತ್ರ
ಬದರಿನಾಥದಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಮಗುವನ್ನು ಭಾರತ-ಟಿಬೆಟ್ ಗಡಿ ಪೊಲೀಸ್ ಸಿಬ್ಬಂದಿ ರಕ್ಷಿಸಿದರು -ಪಿಟಿಐ ಚಿತ್ರ   

ಡೆಹ್ರಾಡೂನ್ (ಪಿಟಿಐ): ಬದರಿನಾಥದಲ್ಲಿ ತೊಂದರೆಗೊಳಗಾಗಿದ್ದ 900ಯಾತ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಪ್ರಯತ್ನ ಸೋಮವಾರ ಮುಂದುವರಿದಿತ್ತು. ಕೇದಾರ್‌ಘಾಟಿ ಮತ್ತಿತರ ಪ್ರದೇಶಗಳಲ್ಲಿ ಮಣ್ಣಿನಡಿ ಸಿಲುಕಿದ್ದ ಮೃತದೇಹಗಳನ್ನು ತೆಗೆಯಲಾಯಿತು.

ಡೆಹ್ರಾಡೂನ್ ಸೇರಿದಂತೆ ಹಲವೆಡೆ ಮೋಡಕವಿದ ವಾತಾವರಣದ ನಡುವೆಯೂ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಚಮೋಲಿಯಲ್ಲಿದ್ದ 300 ಹಾಗೂ ಬದರಿನಾಥದಲ್ಲಿದ್ದ 600 ಯಾತ್ರಾರ್ಥಿಗಳನ್ನು ರಕ್ಷಿಸಿ ಜೋಶಿಮಠದಲ್ಲಿ ಬಿಡಲಾಯಿತು. ಅಲ್ಲಿಂದ  ಅವರೆಲ್ಲರನ್ನೂ ರಸ್ತೆ ಮಾರ್ಗವಾಗಿ ಕರೆದೊಯ್ಯಲಾಗುತ್ತಿದೆ.

ಅಧಿಕೃತ ಮೂಲಗಳ ಪ್ರಕಾರ, ಸರಿಸುಮಾರು 3000 ಜನ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ.  ಒಂದು ವೇಳೆ ತಿಂಗಳಾದರೂ ಪತ್ತೆಯಾಗದಿದ್ದರೆ ಇವರೆಲ್ಲ ಮೃತಪಟ್ಟಿರುವುದಾಗಿ ಘೋಷಿಸಲಾಗುತ್ತದೆ.

ರಾಜ್ಯ ಸರ್ಕಾರ ದುರಂತ ಸಂಭವಿಸಿದ ಸ್ಥಳಕ್ಕೆ 200 ಜನರ ವೈದ್ಯಕೀಯ ಪರಿಣತರ ತಂಡವನ್ನು ಕಳುಹಿಸಿಕೊಟ್ಟಿದೆ. ಇವರೊಂದಿಗೆ ತರಬೇತಿ ಹೊಂದಿದ ಪೊಲೀಸರು ಹಾಗೂ ಸ್ಥಳೀಯಾಡಳಿತದ ಹೆಚ್ಚುವರಿ ಸಿಬ್ಬಂದಿ ಸಹ ಭೇಟಿ ನೀಡಿ ಮೃತದೇಹ ತೆಗೆಯಲು ಕ್ರಮ ಕೈಗೊಳ್ಳಲಿದ್ದಾರೆ.

ಡಿಎನ್‌ಎ ಮಾದರಿ ಸಂಗ್ರಹಿಸಲು ಕೇದಾರನಾಥಕ್ಕೆ ಭೇಟಿ ನೀಡಿದ್ದ ವೈದ್ಯಕೀಯ ತಂಡಗಳು ಅನಾರೋಗ್ಯಕ್ಕೊಳಗಾಗಿ ವಾಪಸ್ ಬಂದಿವೆ.

ಕೇದಾರನಾಥದಲ್ಲಿ ಎಲ್ಲೆಡೆ ಬಿದ್ದಿರುವ ಮೃತದೇಹಗಳು ಕೆಟ್ಟ ವಾಸನೆ ಬೀರುತ್ತಿದ್ದು, ಅವುಗಳನ್ನು ಅಲ್ಲಿಂದ ತೆರವುಗೊಳಿಸಲು ಹರಸಾಹಸಪಡುವಂತಾಗಿದೆ.

ಅಲ್ಲದೆ ಪದೇ ಪದೇ ಬದಲಾಗುತ್ತಿರುವ ವಾತಾವರಣ ಹಾಗೂ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಶವಗಳ ಅಂತಿಮ ಸಂಸ್ಕಾರ ನಡೆಸುವುದಕ್ಕೂ ಕಷ್ಟವಾಗುತ್ತಿದೆ.

ಕಾಂಗ್ರೆಸ್-ಬಿಜೆಪಿ ಜಟಾಪಟಿ
ನವದೆಹಲಿ(ಐಎಎನ್‌ಎಸ್):  ಉತ್ತರಾಖಂಡದಲ್ಲಿನ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಪರಸ್ಪರ ಕೆಸರೆರಚಾಟ ನಡೆಸಿದ್ದಾರೆ.

ಉತ್ತರಾಖಂಡಕ್ಕೆ ಬಿಜೆಪಿ ಮುಖಂಡರು ಯಾಕೆ ಭೇಟಿ ನೀಡಲಿಲ್ಲ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮನೀಷ್ ತಿವಾರಿ ಟ್ವಿಟರ್‌ನಲ್ಲಿ ಕೇಳಿದ್ದಾರೆ. ಸಿಬಿಐಗೆ ಸ್ವಾಯುತ್ತತೆ ನೀಡುವ ಸರ್ಕಾರದ ಪ್ರಸ್ತಾವಕ್ಕೆ ಟೀಕೆ ಮಾಡಲು ಬಿಜೆಪಿ ಮುಖಂಡರಿಗೆ ಸಮಯವಿದೆ. ಆದರೆ ಉತ್ತರಾಖಂಡದ ಜನರಿಗೆ ಸಹಾನುಭೂತಿ ತೋರಲು ವ್ಯವಧಾನವಿಲ್ಲ ಎಂದು ಅವರು ಟೀಕಿಸಿದ್ದಾರೆ.

ಮನೀಷ್ ತಿವಾರಿ ಟೀಕೆಗೆ ಪ್ರತಿಕ್ರಿಯಿಸಿರುವ ಲೋಕಸಭೆವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ಉತ್ತರಾಖಂಡಕ್ಕೆ ಗಣ್ಯವ್ಯಕ್ತಿಗಳು ಭೇಟಿ ನೀಡಿದರೆ ಪರಿಹಾರ ಕಾರ್ಯಾಚರಣೆಗೆ ತೊಂದರೆಯಾಗಲಿದೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದರಿಂದ ನಾವು ಅಲ್ಲಿಗೆ ಹೋಗಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ  ವಿಫಲವಾಗಿರುವ ಉತ್ತರಾಖಂಡದ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT