ADVERTISEMENT

ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ: ಮಾಯಾವತಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2013, 19:59 IST
Last Updated 19 ಏಪ್ರಿಲ್ 2013, 19:59 IST

ಲಖನೌ (ಪಿಟಿಐ): ರಾಜ್ಯಪಾಲ ಬಿ.ಎಲ್. ಜೋಷಿ ಅವರನ್ನು ಶುಕ್ರವಾರ ಭೇಟಿ ಮಾಡಿದ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಉತ್ತರ ಪ್ರದೇಶದಲ್ಲಿ ಕಾನೂನು ವ್ಯವಸ್ಥೆ ಅಧಃಪತನಕ್ಕೆ ಇಳಿದಿದ್ದು, ಸಂವಿಧಾನಿಕ ಬಿಕ್ಕಟ್ಟು ಉಲ್ಬಣಗೊಂಡಿದೆ. ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

`ಸಮಾಜವಾದಿ ಪಕ್ಷದ ಆಡಳಿತವಿರುವ ರಾಜ್ಯದಲ್ಲಿ ಡಕಾಯಿತಿ, ಅಪಹರಣ, ಮಹಿಳೆಯರ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಿವೆ. ಅಪರಾಧಿಗಳ ವಿರುದ್ಧ  ಕ್ರಮ ಕೈಗೊಳ್ಳುವಲ್ಲಿ  ಪೊಲೀಸರು ವಿಫಲರಾಗಿದ್ದಾರೆ. ಅಧಿಕಾರಿಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸದಂತೆ ಸರ್ಕಾರ ಕಡಿವಾಣ ಹಾಕಿದೆ' ಎಂದು ದೂರಿದರು.

ಸಚಿವರ ಹಾಗೂ ಎಸ್‌ಪಿ ಕಾರ್ಯಕರ್ತರ ಅಪರಾಧಗಳ ಬಗ್ಗೆ ಸರ್ಕಾರ ಜಾಣ ಕುರುಡುತನ ತೋರುತ್ತದೆ. ಸರ್ಕಾರದ ಪ್ರಮುಖ ಹುದ್ದೆಗಳನ್ನು ಸಚಿವರು ಮಾರಿಕೊಂಡಿದ್ದಾರೆ. ಸಂಪುಟದಲ್ಲಿರುವ ಬಹುಪಾಲು ಸಮಾಜವಾದಿ ಪಕ್ಷದ ಸದಸ್ಯರು ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಾ, ಈಗಲೂ ಸಮಾಜಘಾತುಕ ಕೆಲಸಗಳಲ್ಲೇ ತೊಡಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.