ADVERTISEMENT

ಉತ್ತರ ಪ್ರದೇಶದಲ್ಲಿ: ಹೆಚ್ಚುತ್ತಿರುವ ಕುಟುಂಬ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 17 ಜನವರಿ 2012, 19:30 IST
Last Updated 17 ಜನವರಿ 2012, 19:30 IST

ಲಖನೌ (ಪಿಟಿಐ): ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ಹಿರಿಯ ನಾಯಕರು ತಮ್ಮ ರಾಜಕೀಯ ಪ್ರಭುತ್ವವನ್ನು ಮುಂದುವರಿಸುವ ನಿಟ್ಟಿನಲ್ಲಿ ಸ್ಪರ್ಧಿಸಲು ಕಾರ್ಯಕರ್ತರ ಬದಲಿಗೆ ಬಂಧುಗಳ ಮೇಲೆ ಹೆಚ್ಚು ವಿಶ್ವಾಸ ವ್ಯಕ್ತಪಡಿಸಿ, ಬೆಂಬಲ ನೀಡುತ್ತಿರುವುದು ಕಂಡುಬರುತ್ತಿದೆ.

ಈ ಬೆಳವಣಿಗೆ ಕಾಂಗ್ರೆಸ್, ಬಿಜೆಪಿ ಹಾಗೂ ಸಮಾಜವಾದಿ ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಹಿಂದೆ ತಮ್ಮದು ವರ್ಗ ಆಧಾರಿತ ಪಕ್ಷ ಮತ್ತು ವಂಶಾಡಳಿತ ಸಂಸ್ಕೃತಿಗೆ ವಿರುದ್ಧವಾಗಿರುವುದಾಗಿ ಹೇಳುತ್ತಿದ್ದ ಬಿಎಸ್‌ಪಿ ಕೂಡಾ ಈ ಬಾರಿ ಕುಟುಂಬ ರಾಜಕಾರಣದಲ್ಲಿ ಮುಳುಗಿದೆ.

ಬಿಎಸ್‌ಪಿ ರಾಜ್ಯ ಘಟಕ ಅಧ್ಯಕ್ಷ ಸ್ವಾಮಿ ಪ್ರಸಾದ್ ಮೌರ್ಯ, ತಾವು ಸ್ವತಃ ಪದ್ರವಾನಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದಲ್ಲದೆ, ತಮ್ಮ ಪುತ್ರ  ಅಶೋಕ್ ಮೌರ್ಯ ಅವರಿಗೆ ರಾಯ್ ಬರೇಲಿಯಿಂದ (ಉಂಚಾರ್ ಕ್ಷೇತ್ರ) ಮತ್ತು ಪುತ್ರಿ ಸಂಘಮಿತ್ರಾ ಅವರಿಗೆ ಆಲಿಗಂಜ್‌ನಿಂದ ಸ್ಪರ್ಧಿಸಲು ಟಿಕೆಟ್ ಕೊಡಿಸಿದ್ದಾರೆ. ಪಕ್ಷದ ವಲಯ ಸಂಘಟಕ-ಸಂಸದ ಜುಗಲ್ ಕಿಶೋರ್, ತಮ್ಮ ಪುತ್ರ ಸೌರಭ್‌ಗೆ ಲಖೀಂಪುರ ಪ್ರದೇಶದ ಕಾಸ್ಟಾ ಕ್ಷೇತ್ರದಿಂದ  ಸ್ಪರ್ಧಿಸಲು ಟಿಕೆಟ್ ಪಡೆದಿದ್ದಾರೆ.
 
ಎನ್‌ಆರ್‌ಎಚ್‌ಎಂ ಹಗರಣದಲ್ಲಿ ಹೆಸರಿಸಲ್ಪಟ್ಟ ಮಾಜಿ ಆರೋಗ್ಯ ಸಚಿವ ಅನಂತ್ ಮಿಶ್ರಾ, ತಮ್ಮ ಪತ್ನಿ ಶಿಖಾ ಮಿಶ್ರಾ ಅವರಿಗೆ ಕಾನ್ಪುರದ ಮಹಾರಾಜ್‌ಗಂಜ್ ಕ್ಷೇತ್ರದಲ್ಲಿ ನಿಲ್ಲಲು ಟಿಕೆಟ್ ಪಡೆದಿದ್ದಾರೆ. ಹೀಗೆಯೇ, ವಿದ್ಯುತ್ ಸಚಿವ ರಾಮ್‌ವೀರ್ ಉಪಾಧ್ಯಾಯ, ತಾವು ಸ್ವತಃ ಸಿಕಂದರಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದಲ್ಲದೆ,

ಬುಲಂದ್‌ಸಹಾರ್‌ನ ದಿಬಾಯಿ ಕ್ಷೇತ್ರದಿಂದ ತಮ್ಮ ಸಹೋದರ ವಿನೋದ್ ಉಪಾಧ್ಯಾರ್ ಅವರಿಗೆ ಟಿಕೆಟ್ ದೊರಕಿಸಿದ್ದಾರೆ. ಸಾರಿಗೆ ಸಚಿವ ರಾಮ್ ಅಚಲ್ ರಾಜ್‌ಭಾರ್, ತಮ್ಮ ಪುತ್ರ ಸಂಜಯ್ ರಾಜ್‌ಭಾರ್ ಅವರಿಗೆ ಅಕ್ಬರ್‌ಪುರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ದೊರಕಿಸಿದ್ದಾರೆ.

ಬಿಜೆಪಿಯಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಪಕ್ಷದ ಸಂಸದ ಲಾಲ್‌ಜಿ ಟಂಡನ್, ತಮ್ಮ ಪುತ್ರ ಗೋಪಾಲ್ ಟಂಡನ್ ಅವರಿಗೆ ಲಖನೌ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೊಡಿಸಿದ್ದು, ಇಲ್ಲಿ ಕಳೆದ ಸಲದ ಚುನಾವಣೆಯಲ್ಲಿ ಪಕ್ಷದ ಮುಖಂಡ ಅಮಿತ್ ಪುರಿ ಬಹಳ ಅಲ್ಪಮತಗಳ ಅಂತರದಿಂದ ಸೋತಿದ್ದರು. ಪಕ್ಷದ ಹಿರಿಯ ನಾಯಕ ಪ್ರೊಫೆಸರ್ ರಾಮ್‌ಜಿ ಸಿಂಗ್, ತಮ್ಮ ಪುತ್ರ ಅರಿಜಿತ್ ಸಿಂಗ್ ಅವರಿಗೆ ಮಾವು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಪಡೆದಿದ್ದಾರೆ.
 
ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಆಜಂಗಡದ ಸಂಸದ ರಮಾಕಾಂತ್ ಯಾದವ್, ತಮ್ಮ ಪತ್ನಿ, ಪುತ್ರ ಹಾಗೂ ಸೋದರಳಿಯ ಮಾತ್ರವಲ್ಲದೆ, ಇತರ ಅನೇಕ ಬೆಂಬಲಿಗರಿಗೂ ಟಿಕೆಟ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷದ ಸಂಸದ ಜಗದಾಂಬಿಕಾ ಪಾಲ್, ತಮ್ಮ ಪುತ್ರ ಅಭಿಷೇಕ್ ಪಾಲ್ ಅವರಿಗೆ ಟಿಕೆಟ್ ದೊರಕಿಸಿದ್ದಾರೆ.

ಇದೇ ರೀತಿ, ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷೆ ರೀಟಾ ಬಹುಗುಣ, ತಮ್ಮ ಸಹೋದರ ಶೇಖರ್ ಬಹುಗುಣ ಅವರಿಗೆ ಮತ್ತು ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್, ತಮ್ಮ ಪತ್ನಿ ಲೂಯಿಸ್ ಖುರ್ಷಿದ್ ಅವರಿಗೆ ಟಿಕೆಟ್ ನೀಡುವಂತೆ ನೋಡಿಕೊಂಡಿದ್ದಾರೆ.

ಪಕ್ಷದ ಸಂಸದ ಹರ್ಷವರ್ಧನ್‌ರವರ ಪುತ್ರ ರಾಜ್‌ವರ್ಧನ್, ಮುಖಂಡರಾದ ರಾಜೇಶ್‌ಪತಿ ತ್ರಿಪಾಠಿ ಪುತ್ರ ಲಲಿತೇಶ್‌ಪತಿ, ರಾಮಲ್‌ಲಾಲ್ ರಾಹಿ ಸೊಸೆ ಮಂಜರಿ ರಾಹಿ, ಮಾಜಿ ಸಂಸದ ಜಿತೇಂದ್ರ ಸಾಹಿ ಪುತ್ರ ಜೈಸಿಂಗ್ ಮತ್ತಿತರರು ತಮ್ಮ ಸಮೀಪವರ್ತಿಗಳಿಗೆ ಟಿಕೆಟ್ ಕೊಡಿಸಿದ್ದಾರೆ.

ಸಮಾಜವಾದಿ ಪಕ್ಷದಲ್ಲೂ ಕೌಟುಂಬಿಕ ರಾಜಕಾರಣ ದೈನಂದಿನ ಪ್ರಕ್ರಿಯೆಯಾಗಿದೆ. ಮಾಜಿ ಸಚಿವ ರೆವೋಟಿ ರಾಮ ಸಿಂಗ್ ಪುತ್ರ ಉಜ್ವಲ್ ರಾಮ್, ನರೇಶ್ ಅಗರವಾಲ್ ಪುತ್ರ ನಿತಿನ್ ಅಗರವಾಲ್, ಪಕ್ಷದ ಸಂಸದ ಬಾಲ್‌ಕುಮಾರ್‌ರ ಸೋದರಳಿಯ ಮತ್ತು ಕೌಶಂಬಿಯ ಸಂಸದ ಶೈಲೇಂದ್ರ ಕುಮಾರ್ ಸಹೋದರ ವೀರ್‌ಸಿಂಗ್ ಟಿಕೆಟ್ ಪಡೆದ ಅಭ್ಯರ್ಥಿಗಳಲ್ಲಿ ಪ್ರಮುಖರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.