ಲಖನೌ (ಐಎಎನ್‌ಎಸ್): ಉತ್ತರ ಪ್ರದೇಶದ ಕಾನ್ಪುರದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ನಡೆಸುತ್ತಿದ್ದ ಮುಷ್ಕರವನ್ನು ವೈದ್ಯರು ಗುರುವಾರ ಬೆಳಿಗ್ಗೆ ವಾಪಸ್ ಪಡೆದಿದ್ದಾರೆ. ಮುಷ್ಕರ ನಿಲ್ಲಿಸಿ ಕೆಲಸಕ್ಕೆ ಮರಳುವಂತೆ ಬುಧವಾರ ಅಲಹಾಬಾದ್ ಹೈಕೋರ್ಟ್ ತಾಕೀತು ಮಾಡಿದ್ದರಿಂದ ವೈದ್ಯರು ಮುಷ್ಕರ ಹಿಂಪಡೆದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವೈದ್ಯರ ಕುಂದುಕೊರತೆ ಮತ್ತು ಪೊಲೀಸರು ನಡೆಸಿರುವ ಲಾಠಿ ಪ್ರಹಾರ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಬುಧವಾರ ಅಲಹಾಬಾದ್ ಹೈಕೋರ್ಟಿನ ಲಖನೌ ಪೀಠ ಸೂಚಿಸಿತ್ತು.
ರಾಜ್ಯ ಸರ್ಕಾರದ ‘ಎಸ್ಮಾ’ ಕಾಯ್ದೆ ಜಾರಿ ಖಂಡಿಸಿ, ಮುಷ್ಕರನಿರತ ವೈದ್ಯರು ಆರಂಭದಲ್ಲಿ ತಮ್ಮ ನಿಲುವಿನಿಂದ ಹಿಂದೆ ಸರಿಯಲು ನಿರಾಕರಿಸಿದ್ದರು. ಆದರೆ, ದೀರ್ಘ ಸಭೆಯ ನಂತರ ವೈದ್ಯರು ಕೋರ್ಟ್ ಆದೇಶಕ್ಕೆ ಬದ್ಧರಾಗಿ ಮುಷ್ಕರ ಕೈಬಿಡಲು ನಿರ್ಧರಿಸಿದರು ಎಂದು ಭಾರತೀಯ ವೈದ್ಯಕೀಯ ಸಂಘದ ಕ್ರಿಯಾ ಸಮಿತಿಯ ಅಧ್ಯಕ್ಷ ದೇವೇಂದ್ರ ಲಾಲ್‌ಚಂದಾನಿ ತಿಳಿಸಿದ್ದಾರೆ. ಸಭೆಯ ನಂತರ ಲಾಲ್‌ಚಂದಾನಿ ನೇತೃತ್ವದ ನಿಯೋಗ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರನ್ನು ಲಖನೌದಲ್ಲಿ ಬುಧವಾರ ರಾತ್ರಿ ಭೇಟಿ ಮಾಡಿತು.
ಭೇಟಿಯ ಸಮಯದಲ್ಲಿ ವೈದ್ಯರ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಕುರಿತು ಮುಲಾಯಂ ಸಿಂಗ್ ಯಾದವ್ ಅವರು ನಿಯೋಗಕ್ಕೆ ಭರವಸೆ ನೀಡಿದ್ದರು.
ಆಸ್ಪತ್ರೆ ಆವರಣದಲ್ಲೇ ವೈದ್ಯರ ಮೇಲೆ ಲಾಠಿ ಪ್ರಹಾರ ಮಾಡಿದ್ದ ಪೊಲೀಸರ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ಮೂರು ವಾರಗಳಲ್ಲಿ ಸರ್ಕಾರ ವರದಿ ಸಲ್ಲಿಸಬೇಕೆಂದು ಕೋರ್ಟ್ ಸೂಚಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಯಶಸ್ವಿ ಯಾದವ್ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಜೈಲಿನಲ್ಲಿರುವ 24 ವೈದ್ಯರನ್ನು ಬೇಷರತ್ ಆಗಿ ಬಿಡುಗಡೆ ಮಾಡಿ, ಅವರ ವಿರುದ್ಧದ ದಾಖಲಿಸಿಕೊಂಡಿರುವ ಪ್ರಕರಣಗಳನ್ನು ಕೈಬಿಡಬೇಕು ಹಾಗೂ ಎಸ್‌ಪಿ ಶಾಸಕ ಇರ್ಫಾನ್ ಸೋಲಂಕಿ ಹಾಗೂ ಕಾನ್ಪುರದ ಎಸ್‌ಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವೈದ್ಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.