ADVERTISEMENT

ಉತ್ತರ ಭಾರತದಲ್ಲಿ ಕವಿದ ಮಂಜು; ವಿಮಾನಗಳ ಹಾರಾಟ ವಿಳಂಬ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 19:30 IST
Last Updated 20 ಜನವರಿ 2012, 19:30 IST

ನವದೆಹಲಿ (ಪಿಟಿಐ): ಉತ್ತರ ಭಾರತದಲ್ಲಿ ಮಂಜು ಕವಿದ ವಾತಾವರಣ ಶುಕ್ರವಾರವೂ ಮುಂದುವರಿದಿದ್ದು, ರಸ್ತೆ, ರೈಲು ಹಾಗೂ ವಿಮಾನ ಸಂಚಾರಕ್ಕೆ ಅಡಚಣೆಯಾಗಿದೆ.

ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟವಾಗಿ ಮಂಜು ಕವಿದಿದ್ದು, ಸತತ ಮೂರನೇ ದಿನವೂ ವಿಮಾನ ಹಾರಾಟ ಏರುಪೇರು ಗೊಂಡಿತ್ತು.

ಈ ನಿಲ್ದಾಣದಿಂದ ಹೊರಡಬೇಕಿದ್ದ 200ಕ್ಕೂ ಹೆಚ್ಚು ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ವಿಳಂಬಗೊಂಡಿತು. ಬೆಂಗಳೂರು, ಕೊಚ್ಚಿ, ಲಖನೌ,  ಚಂಡೀಗಡ ಸೇರಿದಂತೆ ಕೆಲವು ಕಡೆ ತೆರಳಬೇಕಿದ್ದ 28  ವಿಮಾನಗಳ ಹಾರಾಟ ರದ್ದುಗೊಳಿಸಲಾಯಿತು.

ದೆಹಲಿಯಲ್ಲಿ ಇಳಿಯಬೇಕಿದ್ದ 5 ಅಂತರರಾಷ್ಟ್ರೀಯ ವಿಮಾನಗಳನ್ನು ಸಮೀಪದ ನಗರಗಳ ವಿಮಾನ ನಿಲ್ದಾಣಗಳಲ್ಲಿ ಇಳಿಸಲಾಯಿತು. ಮಂಜಿನಿಂದಾಗಿ ರೈಲು ಸಂಚಾರವೂ ಅಸ್ತವ್ಯಸ್ತಗೊಂಡಿದ್ದು, 30ಕ್ಕೂ ಹೆಚ್ಚು ರೈಲುಗಳು ತಡವಾಗಿ ಪ್ರಯಾಣ ಆರಂಭಿಸಿದವು.

ಮಂಜಿನ ಚಾದರ (ಚಂಡೀಗಡ ವರದಿ): ಪಂಜಾಬ್, ಹರಿಯಾಣ ಹಾಗೂ ಚಂಡೀಗಡಗಳಲ್ಲಿ ಬಿಸಿಲು ಅಪರೂಪವಾಗಿದ್ದು, ಮಂಜಿನ ಚಾದರ ಹೊದಿಸಿದಂತೆ ಕಂಡುಬರುತ್ತಿತ್ತು.

ದಟ್ಟ ಮಂಜಿನಿಂದಾಗಿ ರಸ್ತೆ ಸರಿಯಾಗಿ ಕಾಣದ್ದರಿಂದ, ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಚಳಿ ಹೊಡೆತ (ಶ್ರೀನಗರ ವರದಿ): ಕಾಶ್ಮೀರ ಕಣಿವೆಯಲ್ಲಿ  ಜನರು ಚಳಿಯ ಹೊಡೆತದಿಂದ ತತ್ತರಿಸಿದ್ದಾರೆ.
ಲಡಾಕ್ ಪ್ರಾಂತ್ಯದ ಲೇಹ್ ಪಟ್ಟಣದಲ್ಲಿ ಮೈನಸ್ 15.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಕಾರ್ಗಿಲ್‌ನಲ್ಲಿ ಮೈನಸ್ 16.8 ಡಿಗ್ರಿಯಷ್ಟು ಉಷ್ಣಾಂಶವಿದೆ. ಕಾಶ್ಮೀರ ಕಣಿವೆಯ ಹಲವೆಡೆ ಹಿಮಪಾತ ಹಾಗೂ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.

ಮೋಟಾರ್ ಬೋಟ್  ನೆರವು

ಶ್ರೀನಗರ (ಪಿಟಿಐ): ಅತಿ ಕಡಿಮೆ ತಾಪಮಾನದಿಂದ ಕಾಶ್ಮೀರದ ಸುಪ್ರಸಿದ್ಧ ದಲ್ ಸರೋವರ ಹೆಪ್ಪುಗಟ್ಟಿದ್ದು, ಮಂಜುಡ್ಡೆಯ ಪದರ ಭೇದಿಸಲು ಸ್ಥಳೀಯ ಪೊಲೀಸರು ಮೋಟಾರ್‌ಬೋಟ್ ಬಳಸುತ್ತಿದ್ದಾರೆ.
ದಲ್ ಸರೋವರದ ಸುತ್ತಲಿನ ನೂರಾರು ಕುಟುಂಬಗಳು ಪ್ರವಾಸಿಗಳಿಂದ ಬರುವ ಆದಾಯದಿಂದ ಜೀವನ ಸಾಗಿಸುತ್ತಾರೆ. ಸರೋವರ ಹೆಪ್ಪುಗಟ್ಟಿದ್ದರಿಂದ ಪ್ರವಾಸಿಗರು ನಿರಾಸೆಗೊಳ್ಳುವಂತಾಗಿತ್ತು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.