ADVERTISEMENT

ಉತ್ತರ ರಾಜ್ಯಗಳಿಂದ ದಕ್ಷಿಣಕ್ಕೆ ವಿದ್ಯುತ್

ಗ್ರಿಡ್ ಸಂಯೋಜನೆಗೆ ಜನವರಿಯಲ್ಲಿ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2013, 19:30 IST
Last Updated 24 ಡಿಸೆಂಬರ್ 2013, 19:30 IST

ನವದೆಹಲಿ: ಸರ್ಕಾರಿ ಒಡೆತನದ ವಿದ್ಯುತ್‌ ಗ್ರಿಡ್ ನಿಗಮವು (ಪಿಜಿಸಿಎಲ್‌)ಉತ್ತರ ಮತ್ತು ದಕ್ಷಿಣ ಗ್ರಿಡ್‌ಗೆ ಸಂಪರ್ಕ ಕಲ್ಪಿಸಲು ಸಿದ್ಧತೆ ನಡೆಸುತ್ತಿರುವು­ದರಿಂದ ವಿದ್ಯುತ್‌ ಕೊರತೆಯನ್ನು ಎದುರಿಸುತ್ತಿರುವ ದಕ್ಷಿಣ ರಾಜ್ಯಗಳು ಉತ್ತರದ ವಿದ್ಯುತ್‌ ಉತ್ಪಾದಕ­ರಿಂದ ಸ್ಪರ್ಧಾತ್ಮಕ ಬೆಲೆಯಲ್ಲಿ ವಿದ್ಯುತ್‌ ಖರೀದಿಸಲು ಸಾಧ್ಯವಾಗುತ್ತದೆ.

ಜನವರಿ ಮಧ್ಯಭಾಗದಲ್ಲಿ ವಿದ್ಯುತ್‌ ಗ್ರಿಡ್‌ ನಿಗಮ ಮಹಾರಾಷ್ಟ್ರದ ಸೋಲಾಪುರ ಮತ್ತು ಕರ್ನಾಟಕದ ರಾಯಚೂರು ನಡುವೆ 765 ಕಿ. ವಾ. ಮಾರ್ಗವನ್ನು ಚಾಲನೆ­ಗೊಳಿಸಲಿದೆ. ಇದರಿಂದ ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡದಿಂದದಕ್ಷಿಣ ರಾಜ್ಯಗಳು ಕಡಿಮೆ ದರದಲ್ಲಿ  ವಿದ್ಯುತ್‌ ಖರೀದಿಸಲು ಸಾಧ್ಯವಾಗುತ್ತದೆ.

ಈಗ ಅಧಿಕ ವಾಹಕ (ಹೈ ವೋಲ್ಟೇಜ್‌) ನೇರ ಸಾಗಣೆಯ ಮೂಲಕ ದಕ್ಷಿಣದ ಗ್ರಿಡ್‌ಗಳಿಗೆ ದೇಶದ ಇತರ ಗ್ರಿಡ್‌ ಜತೆ ಸಂಪರ್ಕವಿದ್ದರೂ ಸತತವಾಗಿ ವಿದ್ಯುತ್‌ ಸರಬರಾಜು ಆಗುವುದಿಲ್ಲ. ಆದ್ದರಿಂದ ಹೆಚ್ಚು  ಬೇಡಿಕೆ ಇರುವ ಸಂದರ್ಭದಲ್ಲಿ ಉತ್ತರದ ಗ್ರಿಡ್‌­ಗಳಿಂದ ದಕ್ಷಿಣದ ಗ್ರಿಡ್‌ಗಳು ಹೆಚ್ಚಿನ ಪ್ರಮಾಣದ ವಿದ್ಯುತ್‌ ಪಡೆಯಲು ಸಾಧ್ಯವಾಗುತ್ತಿಲ್ಲ.

ಪಶ್ಚಿಮ ಮತ್ತು ದಕ್ಷಿಣ ವಲಯಗಳ  ನಡುವೆ ಸಾಗಣೆ ಮಾರ್ಗದ ಸಾಮರ್ಥ್ಯ ಈಗ 1,500 ಮೆ. ವಾ. ಇದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದ ಮಧ್ಯೆ ಹೊಸ ಸಾಗಣೆ ಮಾರ್ಗದ ಸಾಮರ್ಥ್ಯವು 5,500 ಮೆ. ವಾ.ಗೆ ಏರಲಿದೆ. ಹೊಸ ವಿದ್ಯುತ್‌ ಮಾರ್ಗವು ಕಾರ್ಯಾಚರಣೆ ಆರಂಭಿಸಿದ ನಂತರ ದಕ್ಷಿಣದ ಎಲ್ಲಾ ರಾಜ್ಯಗಳಿಗೂ ಸಮಾನ ಪ್ರಮಾಣದಲ್ಲಿ ವಿದ್ಯುತ್‌ ಪೂರೈಕೆ ಆಗಲಿದೆ. ಇದರಿಂದ ವಿದ್ಯುತ್‌ ಕೊರತೆ ನೀಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ದಕ್ಷಿಣ ರಾಜ್ಯಗಳಲ್ಲಿ ಕೃಷಿ ಚಟುವಟಿಕೆ ಚುರುಕಾಗಿ­ರುವ ಸಂದರ್ಭದಲ್ಲಿ ಪಂಜಾಬ್, ಕಾಶ್ಮೀರ ಮತ್ತು ಉತ್ತರಾಖಂಡದಲ್ಲಿ ಹೆಚ್ಚುವರಿ ವಿದ್ಯುತ್ ಲಭ್ಯ­ವಿದ್ದರೂ ವರ್ಗಾವಣೆ ಅಸಾಧ್ಯವಾಗಿತ್ತು. ಈಗ ಗ್ರಿಡ್‌­ಗಳ  ಸಂಯೋಜನೆ ನಡೆಸಿ ಸಾಗಣೆ ಮಾರ್ಗದ ಸಾಮರ್ಥ್ಯ­ವನ್ನು ಹೆಚ್ಚಿಸಿರುವುದರಿಂದ ಸಮಸ್ಯೆ ಬಗೆ­ಹರಿಯಲಿದೆ. ಗ್ರಿಡ್‌ ಸಂಯೋಜನೆ ಮತ್ತು ಮಾರ್ಗ­ಗಳ ಸಾಮರ್ಥ್ಯ ಹೆಚ್ಚುವುದರಿಂದ ಉತ್ತರ ರಾಜ್ಯಗಳಿಂದ ದಕ್ಷಿಣ ರಾಜ್ಯಗಳು ಕಡಿಮೆ ದರದಲ್ಲಿ ವಿದ್ಯುತ್‌ ಖರೀದಿಸಲು ಸಾಧ್ಯವಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಪೂರ್ವ, ಪಶ್ಚಿಮ, ಉತ್ತರ ಮತ್ತು ಈಶಾನ್ಯ ಗ್ರಿಡ್‌­ಗಳ ಮಧ್ಯೆ ಮೊದಲಿನಿಂದ ಸಂಯೋಜನೆ ಇದೆ. ದಕ್ಷಿಣದ ಗ್ರಿಡ್‌ ಮಾತ್ರ ಪ್ರತ್ಯೇಕವಾಗಿತ್ತು. ಇದ­ರಿಂದಾಗಿ ದಕ್ಷಿಣ ರಾಜ್ಯಗಳಲ್ಲಿ ವಿದ್ಯುತ್‌ ಅಭಾವ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.