ADVERTISEMENT

ಉನ್ನತ ಶ್ರೇಣಿ ರೈಲು ಪ್ರಯಾಣ ದರ ಏರಿಕೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ):  ಆರ್ಥಿಕ ಸಮಸ್ಯೆ ನಿಯಂತ್ರಣ ಮತ್ತು ಸುರಕ್ಷತೆಗೆ ಸಂಬಂಧಿಸಿದ ಮೂಲಭೂತ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ರೈಲು ಪ್ರಯಾಣ ದರಗಳನ್ನು ಪರಿಷ್ಕರಿಸುವ ಕುರಿತು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.

ಒಂದು ವೇಳೆ ರೈಲ್ವೆ ಸಚಿವಾಲಯವು ದರ ಪರಿಷ್ಕರಿಸುವ ನಿರ್ಧಾರ ಕೈಗೊಂಡರೆ ಉನ್ನತ ಶ್ರೇಣಿಗಳ ಪ್ರಯಾಣ ದರಗಳಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ಎಂಟು ವರ್ಷಗಳಿಂದ ರೈಲು ಪ್ರಯಾಣ ದರಗಳನ್ನು ಪರಿಷ್ಕರಣೆ ಮಾಡದಿರುವ ಹಿನ್ನೆಲೆಯಲ್ಲಿ ಯೋಜನಾ ಆಯೋಗ ಮತ್ತು ರೈಲ್ವೆ ಕಾರ್ಮಿಕರ ಒಕ್ಕೂಟಗಳು ದರ ಏರಿಸುವಂತೆ ತೀವ್ರ ಒತ್ತಡ ಹಾಕುತ್ತಿರುವುದರಿಂದ ರೈಲ್ವೆ ಸಚಿವಾಲಯ ಈ ನಿಟ್ಟಿನಲ್ಲಿ ಯೋಚನೆ ನಡೆಸುತ್ತಿದೆ.

ಏರುತ್ತಿರುವ ಹಣದುಬ್ಬರವನ್ನು ಸರಿತೂಗಿಸಲು ಪ್ರಯಾಣ ದರ ಏರಿಸುವಂತೆ ಇತ್ತೀಚೆಗಷ್ಟೇ ಸಂಸದೀಯ ಸಮಿತಿ ರೈಲ್ವೆಗೆ ಸಲಹೆ ನೀಡಿತ್ತು. ಇಲಾಖೆಯ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಗೊಳಿಸುವುದಕ್ಕಾಗಿ ದರಗಳನ್ನು ನ್ಯಾಯಸಮ್ಮತವಾಗಿ ಪರಿಷ್ಕರಿಸುವಂತೆ `ಸಿಎಜಿ~ ಕೂಡಾ ತನ್ನ ವರದಿಯಲ್ಲಿ ಹೇಳಿತ್ತು.

`ಈ ಸಂಬಂಧ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಆ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಅಷ್ಟೇ~ ಎಂದು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಹೇಳಿದ್ದಾರೆ.

ಎಷ್ಟು ಪ್ರಮಾಣದಲ್ಲಿ ದರವನ್ನು ಏರಿಸಲಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ತ್ರಿವೇದಿ, `ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ~ ಎಂದು ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.