ADVERTISEMENT

ಉಪ ರಾಷ್ಟ್ರಪತಿ ಚುನಾವಣೆ: ಅನ್ಸಾರಿ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2012, 19:30 IST
Last Updated 18 ಜುಲೈ 2012, 19:30 IST

ನವದೆಹಲಿ (ಪಿಟಿಐ): ಆಗಸ್ಟ್ 7ರಂದು ನಡೆಯಲಿರುವ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಡಳಿತಾರೂಢ ಯುಪಿಎ ಅಭ್ಯರ್ಥಿ ಹಮೀದ್ ಅನ್ಸಾರಿ ಬುಧವಾರ ನಾಮಪತ್ರ ಸಲ್ಲಿಸಿದರು.

ಪ್ರಧಾನಿ ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಯುಪಿಎ ಮೈತ್ರಿಕೂಟದ ಹಲವು ಮುಖಂಡರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸತತ ಎರಡನೇ ಅವಧಿಗೆ ಉಪ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಎರಡನೇ ವ್ಯಕ್ತಿ ಎಂಬ ದಾಖಲೆ ಬರೆಯುವ ಸಿದ್ಧತೆಯಲ್ಲಿರುವ 75ವರ್ಷದ ಅನ್ಸಾರಿ, ಉಪ ರಾಷ್ಟ್ರಪತಿ ಚುನಾವಣಾಧಿಕಾರಿಯಾಗಿರುವ ಲೋಕಸಭೆ ಮಹಾ ಕಾರ್ಯದರ್ಶಿ ಟಿ.ಕೆ ವಿಶ್ವನಾಥನ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಅನ್ಸಾರಿ ಅವರ ಉಮೇದುವಾರಿಕೆಯನ್ನು ಬೆಂಬಲಿಸಿ ಸೋನಿಯಾ ಗಾಂಧಿ, ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಕಾಂಗ್ರೆಸ್ ಸಂಸದ ಮೋತಿಲಾಲ್ ವೋರಾ ಮತ್ತು ಬಿಎಸ್‌ಪಿ ಮುಖಂಡ ಸತೀಶ್ ಚಂದ್ರ ಮಿಶ್ರಾ ಅವರು ತಲಾ ಒಂದು ಪ್ರತಿ ದಾಖಲೆಗಳನ್ನು ವಿಶ್ವನಾಥನ್ ಅವರಿಗೆ ಸಲ್ಲಿಸಿದರು.

 ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಮೈತ್ರಿಕೂಟದ ಇತರ ಮುಖಂಡರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆದರೆ  ತೃಣಮೂಲ ಕಾಂಗ್ರೆಸ್‌ನ ಯಾವೊಬ್ಬ ಮುಖಂಡನೂ ಇರಲಿಲ್ಲ.

ನಾಮಪತ್ರ ಸಲ್ಲಿಸಿದ ಬಳಿಕ ಹಮೀದ್ ಅನ್ಸಾರಿ ಅವರು ತಮ್ಮ ಉಮೇದುವಾರಿಕೆಯನ್ನು ಬೆಂಬಲಿಸಿದ ಯುಪಿಎ ಮತ್ತು ಅದರ ಮಿತ್ರ ಪಕ್ಷಗಳಿಗೆ ಕೃತಜ್ಞತೆ ಸಲ್ಲಿಸಿದರು.

`ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುತ್ತಿರುವ ಎಲ್ಲಾ ಪಕ್ಷಗಳ ಮುಖಂಡರಿಗೆ ನಾನು ಆಭಾರಿಯಾಗಿದ್ದೇನೆ~ ಎಂದು ಅನ್ಸಾರಿ ಸುದ್ದಿಗಾರರಿಗೆ ತಿಳಿಸಿದರು.

`ಉಪ ರಾಷ್ಟ್ರಪತಿಯಾಗಿ ಮತ್ತೆ ಆಯ್ಕೆಯಾಗಲು ಬಯಸಿರುವ ಹಮೀದ್ ಅನ್ಸಾರಿಗೆ ಭಾರಿ ಪ್ರಮಾಣದಲ್ಲಿ ಬೆಂಬಲ ಸಿಕ್ಕಿರುವುದು ಸಂತಸ ತಂದಿದೆ~ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.