ADVERTISEMENT

ಉಳ್ಳಾಲ: 80 ಕುಟುಂಬಗಳ ಸ್ಥಳಾಂತರ

ಹಾನಿ ಪ್ರದೇಶಗಳಿಗೆ ಸಚಿವ ಖಾದರ್‌ ಭೇಟಿ

ಪಿಟಿಐ
Published 3 ಡಿಸೆಂಬರ್ 2017, 19:30 IST
Last Updated 3 ಡಿಸೆಂಬರ್ 2017, 19:30 IST
ಸಚಿವ ಯು.ಟಿ. ಖಾದರ್‌ ಅವರು ಭಾನುವಾರ ಉಳ್ಳಾಲದ ಸೀಗ್ರೌಂಡ್‌ನಲ್ಲಿ ನಾಶವಾದ ಮನೆಯನ್ನು ವೀಕ್ಷಿಸಿದರು.
ಸಚಿವ ಯು.ಟಿ. ಖಾದರ್‌ ಅವರು ಭಾನುವಾರ ಉಳ್ಳಾಲದ ಸೀಗ್ರೌಂಡ್‌ನಲ್ಲಿ ನಾಶವಾದ ಮನೆಯನ್ನು ವೀಕ್ಷಿಸಿದರು.   

ಉಳ್ಳಾಲ: ಒಖಿ ಚಂಡಮಾರುತದ ಪ್ರಭಾವದಿಂದಾಗಿ ಕಡಲಿನ ಅಬ್ಬರ ಜೋರಾಗಿದ್ದು, ಉಳ್ಳಾಲ ಸೀಗ್ರೌಂಡ್‌ನಲ್ಲಿ ಎರಡು ಮನೆಗಳು ಸಂಪೂರ್ಣವಾಗಿ ಸಮುದ್ರಪಾಲಾಗಿವೆ. 8 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಕೇರಳ ಗಡಿ ಪ್ರದೇಶ ತಲಪಾಡಿಯಿಂದ ಉಳ್ಳಾಲದವರೆಗೆ ಸಮುದ್ರ ತೀರದಲ್ಲಿ ನೆಲೆಸಿರುವ ಸುಮಾರು 80 ಕುಟುಂಬಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ.

ಸೋಮೇಶ್ವರ, ಉಳ್ಳಾಲ, ಉಚ್ಚಿಲ, ಮೊಗವೀರಪಟ್ನ, ಖಿಲಿರಿಯಾನಗರ ಮುಂತಾದ ಪ್ರದೇಶಗಳಲ್ಲಿ ಶನಿವಾರ ರಾತ್ರಿ 9 ರಿಂದ ಭಾನುವಾರ ನಸುಕಿನ 3 ಗಂಟೆಯವರೆಗೆ ಅಲೆಗಳ ಅಬ್ಬರ ಹೆಚ್ಚಾಗಿತ್ತು.

ADVERTISEMENT

ಸಚಿವ ಖಾದರ್‌ ಭೇಟಿ: ಅಪಾಯದಂಚಿನಲ್ಲಿರುವ ಮನೆಗಳ ಸಂರಕ್ಷಣೆಗೆ ತಾತ್ಕಾಲಿಕ ಕಾಮಗಾರಿ ಶೀಘ್ರವೇ ನಡೆಸಲಾಗುವುದು ಎಂದು ಸಚಿವ ಖಾದರ್ ಹೇಳಿದ್ದಾರೆ.

ಅವರು ಒಖಿ ಚಂಡಾಮಾರುತದ ಪರಿಣಾಮ ಉಳ್ಳಾಲ, ಸೋಮೇಶ್ವರ ವ್ಯಾಪ್ತಿಯಲ್ಲಿ ಹಾನಿಗೀಡಾದ ಪ್ರದೇಶಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿದರು.

‘ತಮಿಳುನಾಡು, ಕೇರಳ ಸೇರಿದಂತೆ ದೇಶದ  ಕರಾವಳಿ ಭಾಗದಲ್ಲಿ ಹಾನಿ ಮಾಡಿದ ಒಖಿ ಚಂಡಾಮಾರುತದ ದುಷ್ಪರಿಣಾಮ ಉಳ್ಳಾಲ ವ್ಯಾಪ್ತಿಯಲ್ಲಿಯೂ ಹಲವು ಮನೆಗಳಿಗೆ ಹಾಗೂ ಸ್ವತ್ತುಗಳಿಗೆ ಹಾನಿಯಾಗಿದೆ. ದೇವರ ದಯೆಯಿಂದ ಕಡಿಮೆ ಪ್ರಮಾಣದಲ್ಲಿ ಆಗಿದೆ. ಹವಾಮಾನ ಇಲಾಖೆಯ ವರದಿಯಂತೆ ಚಂಡಾಮಾರುತದ ಪ್ರಭಾವ ಇನ್ನಷ್ಟು ಕಡಿಮೆಯಾಗಲಿದೆ ಎನ್ನುವ ಮಾಹಿತಿ ದೊರೆತಿದೆ. ಉಳ್ಳಾಲ ಭಾಗದಲ್ಲಿ ಆತಂಕಿತರಾದ ಜನತೆಗೆ ಜಿಲ್ಲಾಡಳಿತ ಶನಿವಾರ ರಾತ್ರಿಯಿಂದ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ. ಅಲ್ಲದೆ ಸ್ಥಳಾಂತರಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ’ ಎಂದರು.

(ಸಚಿವ ಯು.ಟಿ. ಖಾದರ್‌ ಅವರು ಭಾನುವಾರ ಉಳ್ಳಾಲದ ಸೀಗ್ರೌಂಡ್‌ನಲ್ಲಿ ನಾಶವಾದ ಮನೆಯನ್ನು ವೀಕ್ಷಿಸಿದರು.)

ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್, ಉಪವಿಭಾಗಾಧಿಕಾರಿ ಕುಮಾರನ್, ತಹಶೀಲ್ದಾರ್ ಗುರುಪ್ರಸಾದ್, ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ ಆಳ್ವ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಗರಸಭೆ ಸದಸ್ಯರು ಇದ್ದರು.

ಹೈಅಲರ್ಟ್‌ (ಕಾರವಾರ): ‘ಒಖಿ’ ಚಂಡಮಾರುತದ ಪರಿಣಾಮ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲೂ ಹೈಅಲರ್ಟ್‌ ಇದ್ದು, ಮೀನುಗಾರರು ಕಡಲಿಗಿಳಿಯದಂತೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಯಾಂತ್ರೀಕೃತ ದೋಣಿಗಳು ಮತ್ಸ್ಯಶಿಕಾರಿಗೆ ತೆರಳದೇ ಕಳೆದ ಎರಡು ದಿನಗಳಿಂದ ಬಂದರಿನಲ್ಲಿಯೇ ಉಳಿದಿದ್ದು, ಭಾನುವಾರ ಕೂಡ ಬಂದರು ಬಿಟ್ಟು ಕದಲಲಿಲ್ಲ.

ಆತಂಕವಿಲ್ಲ: ‘ಭಾನುವಾರ ರಾತ್ರಿಯಿಂದ ಸೋಮವಾರ ರಾತ್ರಿ 11.30ರವರೆಗೆ ಜಿಲ್ಲೆಯ ಕರಾವಳಿಯಿಂದ ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಹಾದು ಹೋಗಲಿದೆ. ಇದರ ವೇಗ ಗಂಟೆಗೆ 10 ಮೈಲ್ಸ್‌ ಇದ್ದರೆ, ಅದರಲ್ಲಿನ ಗಾಳಿಯ ವೇಗ ಗಂಟೆಗೆ 115 ಮೈಲ್ಸ್‌ ಇದೆ. ಆದರೆ ಇದು ಜಿಲ್ಲೆಯ ಕರಾವಳಿಗೆ ಅಪ್ಪಳಿಸುವುದಿಲ್ಲ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಆದರೂ ಚಂಡಮಾರುತದ ಚಲನೆ ಬಗ್ಗೆ ನಿಗಾ ವಹಿಸಿದ್ದೇವೆ. ಅಲ್ಲದೇ ಸೋಮವಾರ ಕೂಡ ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದ್ದೇವೆ’ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಸಂತೋಷ ಕೊಪ್ಪದ ‘ಪ್ರಜಾವಾಣಿ’ಗೆ ತಿಳಿಸಿದರು.

ಏಳು ದೋಣಿಗಳಿಗೆ ಹಾನಿ: ಚಂಡಮಾರುತದ ಪ್ರಭಾವ ಜಿಲ್ಲೆಯ ಭಟ್ಕಳ ತಾಲ್ಲೂಕಿಗೂ ತಟ್ಟಿದೆ. ಇಲ್ಲಿನ ತೆಂಗಿನಗುಂಡಿ ಸಮುದ್ರದಲ್ಲಿ ಶನಿವಾರ ರಾತ್ರಿ ಭಾರಿ ಅಲೆಗಳ ರಭಸಕ್ಕೆ, ದಡದಲ್ಲಿ ನಿಲ್ಲಿಸಿದ್ದ 5 ದೊಡ್ಡ ಹಾಗೂ 2 ಸಣ್ಣ ಮೀನುಗಾರಿಕಾ ದೋಣಿಗಳಿಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.