ADVERTISEMENT

ಎಂಜಿನಿಯರುಗಳನ್ನು ನೇಮಿಸಲು ಸಲಹೆ

ಅನಿರ್ಬನ್ ಭೌಮಿಕ್
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ನವದೆಹಲಿ: ಯುಪಿಎ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಪಿ) ಅನುಷ್ಠಾನದಲ್ಲಿರುವ ತಾಂತ್ರಿಕ ನ್ಯೂನತೆಗಳನ್ನು ಹೋಗಲಾಡಿಸುವ ಸಲುವಾಗಿ ತಳಮಟ್ಟದಲ್ಲಿ ಎಂಜಿನಿಯರುಗಳನ್ನು ನೇಮಕ ಮಾಡುವಂತೆ ಯೋಜನಾ ಆಯೋಗ ಸಲಹೆ ಮಾಡಿದೆ.

ಪ್ರಸ್ತುತ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಎಂಜಿಎನ್‌ಆರ್‌ಇಜಿಪಿ ಯೋಜನೆ ಕಾಮಗಾರಿಗಳ ಗುಣಮಟ್ಟ ತೃಪ್ತಿದಾಯಕವಾಗಿಲ್ಲ. ತಾಂತ್ರಿಕ ನ್ಯೂನತೆ ಎದ್ದು ಕಾಣುತ್ತಿದ್ದು, ಈ ನ್ಯೂನತೆಯನ್ನು ಸರಿಪಡಿಸುವ ಸಲುವಾಗಿ 12ನೇ ಪಂಚವಾರ್ಷಿಕ ಯೋಜನೆ ವೇಳೆ ತಳಮಟ್ಟದಲ್ಲಿ ಎಂಜಿನಿಯರುಗಳನ್ನು ನೇಮಕ ಮಾಡಿಕೊಳ್ಳುವ ಅಗತ್ಯ ಇದೆ ಎಂದು ಯೋಜನಾ ಆಯೋಗ ಹೇಳಿದೆ.

ಎಂಜಿಎನ್‌ಆರ್‌ಇಜಿಪಿ ಯೋಜನೆಯಡಿ ಎಂಜಿನಿಯರುಗಳನ್ನು ನೇಮಕ ಮಾಡಿಕೊಳ್ಳುವುದರಿಂದ ಅವರು, ಸ್ಥಳೀಯರಿಗೆ ತಾಂತ್ರಿಕ ವಿಷಯಗಳನ್ನು ಕುರಿತು ಮನವರಿಕೆ ಹಾಗೂ ತರಬೇತಿ ನೀಡುವರು. ಇದರಿಂದ ಯೋಜನೆಯ ಗುಣಮಟ್ಟ ಹೆಚ್ಚಲಿದೆ ಎನ್ನುವ ಅಭಿಪ್ರಾಯವನ್ನು ಆಯೋಗ 12ನೇ ಪಂಚವಾರ್ಷಿಕ ಯೋಜನೆಯ ಕರಡಿನಲ್ಲಿ ತಿಳಿಸಿದೆ.

ಲಕ್ಷಾಂತರ ಮಂದಿ ಗ್ರಾಮೀಣ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ 2006ರಲ್ಲಿ ಯುಪಿಎ ಸರ್ಕಾರ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದಿತು. ನಂತರ ಈ ಯೋಜನೆಯನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಎಂದು ಮರುನಾಮಕರಣ ಮಾಡಿದೆ.

2010-11ರಲ್ಲಿ ಸುಮಾರು 5.47 ಕೋಟಿ ಕುಟುಂಬಗಳ ನಿರುದ್ಯೋಗಿಗಳಿಗೆ ಈ ಯೋಜನೆಯಡಿ ಉದ್ಯೋಗ ಕಲ್ಪಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 39 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯ ಮಾಡಿತ್ತು. 2011-12ನೇ ಸಾಲಿಗೆ ಈ ಯೋಜನೆಗೆ ಸರ್ಕಾರ 40 ಸಾವಿರ ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಮೀಸಲು ಇಡಲು ನಿರ್ಧರಿಸಿದೆ.

ಯೋಜನೆ ಜಾರಿಯಿಂದ ರಾಜಕೀಯವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ 2009ರ ಚುನಾವಣೆಯಲ್ಲಿ ಉಪಯೋಗ ಆಗಲಿಲ್ಲ. ಆದರೂ ಸಹ ಯೋಜನೆಯ ಅನುಷ್ಠಾನದ ಬಗ್ಗೆ ಸರ್ಕಾರಕ್ಕೆ ಕಳವಳ ಇದ್ದೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.