ADVERTISEMENT

ಎಎಪಿ ಶಾಸಕನಿಗೆ ಬಿಜೆಪಿಯಿಂದ ರೂ. 4 ಕೋಟಿ ಆಮಿಷ

ಕುಟುಕು ಕಾರ್ಯಾಚರಣೆ ಸಿ.ಡಿಯಲ್ಲಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2014, 19:30 IST
Last Updated 8 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ದೆಹಲಿಯಲ್ಲಿ ವಾಮಮಾರ್ಗದ ಮೂಲಕ ಸರ್ಕಾರ ರಚಿಸಲು ಬಿಜೆಪಿಯು ಪಕ್ಷದ ಶಾಸಕರ ಖರೀದಿಯಲ್ಲಿ ತೊಡಗಿದೆ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರ­ವಿಂದ್‌ ಕೇಜ್ರಿವಾಲ್‌ ಆರೋಪಿಸಿದರು.

‘ದೆಹಲಿ ಬಿಜೆಪಿ ಘಟಕದ ಉಪಾಧ್ಯಕ್ಷ ಷೇರ್‌­ಸಿಂಗ್ ದಾಗರ್‌ ಅವರು ನಮ್ಮ ಪಕ್ಷದ ಶಾಸಕ ದಿನೇಶ್‌ ಮೊಹಾನಿ ಅವರಿಗೆ ರೂ. 4 ಕೋಟಿ ಲಂಚದ ಆಮಿಷ­ವೊಡ್ಡಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ದಾಗರ್‌ ಅವರು ಲಂಚದ ಆಮಿಷ­ವೊಡ್ಡಿ­­ರುವ ಕುಟುಕು ಕಾರ್ಯಾಚರಣೆ ಸಿ.ಡಿ.ಯನ್ನು ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಮತ್ತು ಚುನಾವಣಾ ಆಯೋಗಕ್ಕೆ ನೀಡಲಾಗುವುದು ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ. ಒಂದು ವೇಳೆ ಸೋತರೆ ಸರ್ಕಾರಿ ಸ್ವಾಮ್ಯದ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುವುದು ಎಂಬ ಆಮಿಷವನ್ನು ದಿನೇಶ್‌ ಅವರಿಗೆ ಒಡ್ಡಲಾಗಿದೆ ಎಂದು ದೂರಿ­ದರು.

‘ಬಿಜೆಪಿ ನಾಯಕರು ಒಂದು ತಿಂಗಳಿನಿಂದ ನನ್ನ ಸಂಪರ್ಕದಲ್ಲಿ­ದ್ದಾರೆ. ಸಭೆಗಳ­ಲ್ಲಿನ ಸಂಭಾಷಣೆ­ಯನ್ನು ಧ್ವನಿ­ಮುದ್ರಿಸಿ­ಕೊಳ್ಳ­­ಲಾಗಿದೆ. ದಾಗರ್‌ ಆಹ್ವಾನದ ಮೇಲೆ ಅವರ ಮನೆಯಲ್ಲೇ ಅವರನ್ನು ಭೇಟಿ ಮಾಡಿದ್ದೆ’ ಎಂದು ದಿನೇಶ್‌ ತಿಳಿಸಿದ್ದಾರೆ.

ಬಿಜೆಪಿ ಸೇರಲು ಉತ್ಸುಕ: ‘ಒಂದೂವರೆ ತಿಂಗಳ ಹಿಂದೆ ನನ್ನನ್ನು ಭೇಟಿ ಮಾಡಿದ್ದ ಎಎಪಿ ಶಾಸಕರೊಬ್ಬರು ಬಿಜೆಪಿ ಸೇರುವ  ಇಂಗಿತ ವ್ಯಕ್ತಪಡಿಸಿದ್ದರು. ರೂ. 4 ಕೋಟಿ ನೀಡುವುದಾಗಿ ನಾನು ಆಮಿಷವೊಡ್ಡಿಲ್ಲ’ ಎಂದು ದಾಗರ್‌ ಸ್ಪಷ್ಟಪಡಿಸಿದ್ದಾರೆ.

‘ಇದೊಂದು ಕೃತಕ ಸೃಷ್ಟಿ. ಆರೋಪ ಸಾಬೀತುಪಡಿಸಿದರೆ ರಾಜ­ಕೀಯ ತೊರೆ­ಯುತ್ತೇನೆ’ ಎಂದು ಸವಾಲು ಹಾಕಿ­ದ್ದಾರೆ. ಕುಟುಕು ಕಾರ್ಯಾಚರಣೆಗೆ ಯಾವುದೇ ಮಹತ್ವ ಇಲ್ಲ. ಅದ­ರಲ್ಲಿ­ರುವ ಅಂಶಗಳು ಸ್ಪಷ್ಟವಾಗಿಲ್ಲ.  ಸತ್ಯಾ­ಸತ್ಯತೆ ಬಗ್ಗೆ ಪರಿಶೀಲನೆ ಆಗಬೇಕು ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.
ಆಹ್ವಾನ ನಿರೀಕ್ಷೆಯಲ್ಲಿ ಬಿಜೆಪಿ: ದೆಹಲಿಯಲ್ಲಿ ಸರ್ಕಾರ ರಚಿಸಲು ಉತ್ಸುಕವಾಗಿರುವ ಬಿಜೆಪಿ, ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌ ಅವರ ಆಹ್ವಾನದ ನಿರೀಕ್ಷೆಯಲ್ಲಿದೆ.

ಲೆಫ್ಟಿನೆಂಟ್‌ ಗವರ್ನರ್‌ ಅವರ ಆಹ್ವಾನಕ್ಕಾಗಿ ಬಿಜೆಪಿ ಕಾಯುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಚುನಾವಣೆ ತಪ್ಪಿಸುವ ಉದ್ದೇಶದಿಂದ ಸರ್ಕಾರ ರಚಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಹೊಸ ಸರ್ಕಾರ ರಚನೆಗೆ ಇರುವ ಸಾಧ್ಯತೆಗಳನ್ನು ಪ್ರಸ್ತಾಪಿಸಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಪತ್ರ ಬರೆದಿರುವ ಲೆ.ಗವರ್ನರ್‌ ಅವರು, ಸರ್ಕಾರ ರಚನೆಗೆ ಅನುಮತಿ ನೀಡಲು ಅವಕಾಶ ಕೋರಿದ್ದಾರೆ.

ದೆಹಲಿಯ ರಾಜಕೀಯ ಬೆಳವಣಿಗೆ­ಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರಗೃಹ ಸಚಿವ ರಾಜನಾಥ ಸಿಂಗ್‌, ‘ಈ ವಿಷಯದಲ್ಲಿ ನಾನು ಹೇಳುವಂಥಹದು ಏನೂ ಇಲ್ಲ. ಇದು ಲೆಫ್ಟಿನೆಂಟ್‌ ಗವ­ರ್ನರ್‌ ಮತ್ತು ರಾಷ್ಟ್ರಪತಿ ಅವರಿಗೆ ಸಂಬಂಧ­ಪಟ್ಟ ವಿಷಯ’ ಎಂದಿದ್ದಾರೆ.

ಅಕಾಲಿದಳದ ಒಬ್ಬ ಶಾಸಕರು ಸೇರಿದಂತೆ ಬಿಜೆಪಿ 29 ಸದಸ್ಯ ಬಲವನ್ನು ಹೊಂದಿದ್ದು ಸರ್ಕಾರ ರಚನೆಗೆ ಇನ್ನೂ 5 ಸದಸ್ಯರ ಕೊರತೆ ಇದೆ. ಬಿಜೆಪಿಯಿಂದ ಉಚ್ಛಾಟಿತರಾಗಿರುವ ವಿನೋದ್‌­ಕುಮಾರ್‌ ಬಿನ್ನಿ ಮತ್ತು ಒಬ್ಬ ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ನೀಡಲು ಸಿದ್ಧರಾಗಿದ್ದಾರೆ. ಆದರೆ, ಬಹುಮತಕ್ಕೆ ಇನ್ನು ಮೂವರು ಸದಸ್ಯರ ಅಗತ್ಯವಿದೆ.

ಚುನಾವಣೆಗೆ ಆದೇಶಿಸಲಿ: ಕಾಂಗ್ರೆಸ್‌
ಬಿಜೆಪಿಯು ಎಎಪಿ ಶಾಸಕರನ್ನು ಖರೀದಿಸಲು ಮುಂದಾಗಿರುವುದು ಜನತೆಗೆ ಮಾಡುವ ದ್ರೋಹ ಎಂದು ಆರೋಪಿಸಿರುವ ಕಾಂಗ್ರೆಸ್‌, ಹೊಸದಾಗಿ ಚುನಾವಣೆ ನಡೆಸಲು ಆದೇಶಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಅಧಿಕಾರಕ್ಕಾಗಿ ಹಪಹಪಿಸುತ್ತಿ­ರುವ ಬಿಜೆಪಿ ಹೇಗಾದರೂ ಮಾಡಿ ಸರ್ಕಾರ ರಚಿಸಬೇಕು ಎಂದು ಹೊರಟಿದೆ. ಸರ್ಕಾರ ರಚನೆಗೆ ಶಾಸಕರನ್ನು ಖರೀದಿಸಲು ಮುಂದಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದು ತಿಳಿಸಿದೆ.

ಈ ವಿಷಯದ ಗಂಭೀರತೆಯನ್ನು ಅರಿತು, ಹೊಸದಾಗಿ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್‌ ಆದೇಶಿಸಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಜಯ್‌ ಮಾಕನ್‌ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಚುನಾವಣೆ ನಡೆಸುವಂತೆ ಆದೇಶಿಸಬೇಕು ಎಂದು ಕೋರಿ ಎಎಪಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ನಡೆಸಲಿದೆ.

ನೋಟಿಸ್‌: ಈ ಮಧ್ಯೆ ಎಎಪಿ ಶಾಸಕರಿಗೆ ಲಂಚದ ಆಮಿಷ ಒಡ್ಡಿದ್ದಾರೆ ಎನ್ನಲಾದ ಷೇರ್‌ಸಿಂಗ್‌ ದಾಗರ್‌ ಅವರಿಗೆ ಬಿಜೆ­ಪಿ ದೆಹಲಿ ಘಟಕವು ವಿವರಣೆ ಕೇಳಿ ನೋಟಿಸ್‌ ಜಾರಿ ಮಾಡಿದೆ. ಎಎಪಿ ಶಾಸ­ಕರ ಜತೆ ಮಾತುಕತೆಯಲ್ಲಿ ಭಾಗಿ­ಯಾ­ಗಿ­ದ್ದಾರೆಂಬ ಮಾಧ್ಯಮ ವರದಿಗಳ ಆಧಾರದ ಮೇಲೆ ನೋಟಿಸ್‌ ಜಾರಿ ಮಾಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.