ADVERTISEMENT

ಎಎಪಿ ಶಾಸಕರ ಜಾಮೀನು ಅರ್ಜಿ ವಜಾ

ಪಿಟಿಐ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST

ನವದೆಹಲಿ : ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಎಎಪಿ ಶಾಸಕರಾದ ಅಮಾನತ್ ಉಲ್ಲಾ ಖಾನ್‌ ಮತ್ತು ಪ್ರಕಾಶ್‌ ಜರ್ವಾಲ್‌ ಅವರ ಜಾಮೀನು ಅರ್ಜಿಯನ್ನು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಈ ಆರೋಪಿಗಳು ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅದನ್ನು ಮಾನ್ಯ ಮಾಡಲಾಗದು ಎಂದು ಕೋರ್ಟ್‌ ಹೇಳಿದೆ.

ಇದೇ ವೇಳೆ, ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಯನ್ನೂ ತಿರಸ್ಕರಿಸಿದ ನ್ಯಾಯಾಧೀಶರು, ‘ವಶಕ್ಕೆ ಪಡೆದು ಹೊಸದಾಗಿ ವಿಚಾರಣೆ ನಡೆಸುವ ಅಗತ್ಯವಿಲ್ಲ’ ಎಂದರು.

ADVERTISEMENT

’ಅಂಶು ಪ್ರಕಾಶ್‌ ಅಂಥವರಿಗೆ ಹೊಡೆಯಬೇಕು’: ಅಂಶು ಪ್ರಕಾಶ್ ಅವರಂಥ ಅಧಿಕಾರಿಗಳಿಗೆ ಹೊಡೆಯಬೇಕು ಎಂದು ಆಮ್ ಆದ್ಮಿ ಪಕ್ಷದ ಶಾಸಕ ನರೇಶ್ ಬಲ್ಯಾನ್ ಅವರು ಶುಕ್ರವಾರ ಹೇಳಿಕೆ ನೀಡಿದ್ದಾರೆ.

ಇಲ್ಲಿಯ ಉತ್ತಮ ನಗರದಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ಅಂಶು ಪ್ರಕಾಶ್ ಏಕೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಅವರಿಗೆ ಏನಾಗಿದೆ?’ ಎಂದು ಪ್ರಶ್ನಿಸಿರುವ ಬಲ್ಯಾನ್‌, ‘ಜನ ಸಾಮಾನ್ಯರ ಕೆಲಸಗಳಿಗೆ ಅಡ್ಡಿಪಡಿಸುವ ಇಂತಹ ಅಧಿಕಾರಿಗಳಿಗೆ ಹೊಡೆದು ಪಾಠ ಕಲಿಸಬೇಕು’ ಎಂದು ಕಿಡಿ ಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.