ADVERTISEMENT

ಎಚ್‌-1ಬಿ ವೀಸಾ ನೀತಿ ಬದಲಿಸಬೇಡಿ

ಪಿಟಿಐ
Published 25 ಅಕ್ಟೋಬರ್ 2017, 19:30 IST
Last Updated 25 ಅಕ್ಟೋಬರ್ 2017, 19:30 IST
ಪತ್ರಿಕಾಗೋಷ್ಠಿಗೂ ಮುನ್ನ ರೆಕ್ಸ್ ಟಿಲ್ಲರ್‌ಸನ್ ಮತ್ತು ಸುಷ್ಮಾ ಸ್ವರಾಜ್ ಅವರು ಸಮಾಲೋಚನೆ ನಡೆಸಿದರು –ಪಿಟಿಐ ಚಿತ್ರ
ಪತ್ರಿಕಾಗೋಷ್ಠಿಗೂ ಮುನ್ನ ರೆಕ್ಸ್ ಟಿಲ್ಲರ್‌ಸನ್ ಮತ್ತು ಸುಷ್ಮಾ ಸ್ವರಾಜ್ ಅವರು ಸಮಾಲೋಚನೆ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ‘ಎಚ್‌–1ಬಿ ಮತ್ತು ಎಲ್‌–1 ವೀಸಾ ನೀತಿಗಳಲ್ಲಿ ಬದಲಾವಣೆ ತಂದರೆ ಅಮೆರಿಕದಲ್ಲಿ ದುಡಿಯುತ್ತಿರುವ ಭಾರತದ ಮಾಹಿತಿ ತಂತ್ರಜ್ಞರಿಗೆ ತೊಂದರೆಯಾಗುತ್ತದೆ. ಹೀಗಾಗಿ ಈ ವೀಸಾಗಳ ನೀತಿಯಲ್ಲಿ ಬದಲಾವಣೆ ತರಬಾರದು’ ಎಂದು ಅಮೆರಿಕಕ್ಕೆ ಭಾರತ ಮನವಿ ಮಾಡಿಕೊಂಡಿದೆ.

ಭಾರತ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟಿಲ್ಲರ್‌ಸನ್ ಅವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಬುಧವಾರ ದೆಹಲಿಯಲ್ಲಿ ಭೇಟಿ ಮಾಡಿದರು. ಭೇಟಿ ವೇಳೆ ವೀಸಾ ವಿಚಾರವನ್ನು ಚರ್ಚಿಸಲಾಗಿದೆ.

ಭೇಟಿಯ ನಂತರ ಜವಾಹರ ಲಾಲ್ ನೆಹರೂ ಭವನದಲ್ಲಿ ಜಂಟಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.

ADVERTISEMENT

‘ಅಮೆರಿಕದ ಆರ್ಥಿಕತೆಗೆ ಅಲ್ಲೇ ದುಡಿಯುತ್ತಿರುವ ಭಾರತೀಯ ಮಾಹಿತಿ ತಂತ್ರಜ್ಞರ ಕೊಡುಗೆ ಬಹಳ ದೊಡ್ಡದು. ಎಚ್‌–1ಬಿ ಮತ್ತು ಎಲ್‌–1 ವೀಸಾ ನೀತಿಗಳಲ್ಲಿ ಬದಲಾವಣೆ ತಂದರೆ ಅವರಿಗೆ ತೊಂದರೆಯಾಗುತ್ತದೆ. ಅದು ಭಾರತದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಅಮೆರಿಕಕ್ಕೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗಿದೆ’ ಎಂದು ಸುಷ್ಮಾ ಸ್ವರಾಜ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅಮೆರಿಕದಲ್ಲಿ ದುಡಿಯುತ್ತಿರುವ ಭಾರತೀಯರು ಅಮೆರಿಕ ಮತ್ತು ಭಾರತ ಎರಡೂ ಕಡೆ ಸಾಮಾಜಿಕ ಭದ್ರತೆಗೆ ಸಂಬಂಧಿಸಿದ ತೆರಿಗೆಯನ್ನು ಪಾವತಿಸುವುದನ್ನು ಅಮೆರಿಕದ ‘ಜಾಗತಿಕ ಸಾಮಾಜಿಕ ಭದ್ರತಾ ಒಪ್ಪಂದ’ ತಡೆಯುತ್ತದೆ. ಭಾರತವೂ ಈ ಒಪ್ಪಂದದ ಭಾಗವಾಗುವ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಸಾಧ್ಯವಾಗಿಲ್ಲ. ಈ ಸಂಬಂಧ ತಲೆದೋರಿರುವ ಬಿಕ್ಕಟ್ಟುಗಳಿಗೆ ಅಮೆರಿಕ ಕೊನೆ ಹಾಡಬೇಕು. ಆಗ ಅಮೆರಿಕದಲ್ಲಿ ದುಡಿಯುತ್ತಿರುವ ಸುಮಾರು 5 ಲಕ್ಷ ಭಾರತೀಯರಿಗೆ ಅನುಕೂಲವಾಗಲಿದೆ ಎಂದು ರೆಕ್ಸ್ ಅವರಿಗೆ ಮಾಹಿತಿ ನೀಡಲಾಗಿದೆ’ ಎಂದು ಸುಷ್ಮಾ ವಿವರಿಸಿದರು.

ಎಚ್1ಬಿ ವೀಸಾ ನವೀಕರಣ ಪ್ರಕ್ರಿಯೆ ಕಠಿಣ

ವಾಷಿಂಗ್ಟನ್ (ಪಿಟಿಐ): ಭಾರತೀಯ ಐಟಿ ಉದ್ಯೋಗಿಗಳು ಹೆಚ್ಚಾಗಿ ಬಳಸುವ ಎಚ್‌1ಬಿ ಹಾಗೂ ಎಲ್-1 ವೀಸಾ ನವೀಕರಣ ಪ್ರಕ್ರಿಯೆಯನ್ನು ಮತ್ತಷ್ಟು ಕಠಿಣಗೊಳಿಸಿ ಟ್ರಂಪ್ ಆಡಳಿತ ಆದೇಶ ಹೊರಡಿಸಿದೆ.

13 ವರ್ಷ ಹಳೆಯದಾದ ವೀಸಾ ನಿಯಮವನ್ನು ರದ್ದುಗೊಳಿಸಿರುವ ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆ (ಯುಎಸ್‌ಸಿಐಎಸ್), ವೀಸಾ ನವೀಕರಣ ಅರ್ಹತೆಗೆ ಸಾಕ್ಷ್ಯ ಒದಗಿಸುವ ಜವಾಬ್ದಾರಿ ಎಲ್ಲಾ ಸಮಯದಲ್ಲಿಯೂ ಅರ್ಜಿದಾರನದ್ದೇ ಆಗಿರುತ್ತದೆ ಎಂದು ಹೇಳಿದೆ.

ಈ ಹಿಂದಿನ ನಿಯಮದಲ್ಲಿ ಮೊದಲ ಬಾರಿಗೆ ಉದ್ಯೋಗ ವೀಸಾ ಪಡೆಯಲು ಅರ್ಹತೆ ಹೊಂದಿದ್ದರೆ, ನಂತರ ಸಾಮಾನ್ಯವಾಗಿ ವೀಸಾ ನವೀಕರಣಗೊಳಿಸಲಾಗುತ್ತಿತ್ತು. ಆದರೆ ನೂತನ ನಿಯಮದ ಅನುಸಾರ ಇನ್ನು ಪ್ರತಿಬಾರಿ ವೀಸಾ ನವೀಕರಣಕ್ಕೆ ಕೋರಿದಾಗಲೂ ಅರ್ಹತೆ ಸಾಬೀತುಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.