ADVERTISEMENT

ಎಟಿಎಂ: ವಿಳಂಬಕ್ಕೆ ಎಲ್ಲೆಡೆಯೂ ಅಸಮಾಧಾನ

ಪಿಟಿಐ
Published 13 ನವೆಂಬರ್ 2016, 20:08 IST
Last Updated 13 ನವೆಂಬರ್ 2016, 20:08 IST
ಚಂಡೀಗಡದಲ್ಲಿ ಹಳೆಯ ನೋಟುಗಳ ವಿನಿಮಯಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಯುವತಿಯೊಬ್ಬಳು ಆತಂಕ ಬ್ಯಾಂಕ್‌ನ ಒಳಭಾಗವನ್ನು ವೀಕ್ಷಿಸುತ್ತಿರುವುದು    ಚಿತ್ರ: ರಾಯಿಟರ್ಸ್‌
ಚಂಡೀಗಡದಲ್ಲಿ ಹಳೆಯ ನೋಟುಗಳ ವಿನಿಮಯಕ್ಕೆ ಸರತಿ ಸಾಲಿನಲ್ಲಿ ನಿಂತಿದ್ದ ಯುವತಿಯೊಬ್ಬಳು ಆತಂಕ ಬ್ಯಾಂಕ್‌ನ ಒಳಭಾಗವನ್ನು ವೀಕ್ಷಿಸುತ್ತಿರುವುದು ಚಿತ್ರ: ರಾಯಿಟರ್ಸ್‌   

ಮುಂಬೈ/ತಿರುವನಂತಪುರ : ಅಗತ್ಯ ಸಿದ್ಧತೆ ಮಾಡಿಕೊಳ್ಳದೆ ₹ 500 ಮತ್ತು ₹ 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದು ಆತುರದ ನಿರ್ಧಾರ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುವವರೆಗೂ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದರ ನಡುವೆಯೇ ಭಾನುವಾರವೂ ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳು ಕಾರ್ಯನಿರ್ವಹಿಸಿವೆ. ಜನರು ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಹಣ ಜಮಾ ಮಾಡಿದ್ದಾರೆ. ಜತೆಗೆ ರದ್ದಾದ ನೋಟುಗಳನ್ನು ಹೊಸ ನೋಟುಗಳಿಗೆ ಬದಲಿಸಿ ಕೊಂಡಿದ್ದಾರೆ.

ಆದರೆ ಎಲ್ಲಾ ಎಟಿಎಂಗಳು ಕಾರ್ಯ ನಿರ್ವಹಸಿದ ಕಾರಣ ತೆರೆದಿರುವ ಕೆಲವೇ ಎಟಿಎಂಗಳ ಮುಂದೆ ಜನರು ಭಾನುವಾರವೂ ಸರತಿಯಲ್ಲಿ ನಿಂತಿದ್ದರು. ₹ 2000 ಮುಖಬೆಲೆಯ ನೋಟುಗಳು ಇದ್ದರೂ ಚಿಲ್ಲರೆ ಕೊರತೆ ಇರುವುದರಿಂದ ಆ ನೋಟುಗಳನ್ನು ಪಡೆಯಲು ಅಂಗಡಿಯವರು ನಿರಾಕರಿಸುತ್ತಿರುವುದು ದೆಹಲಿ, ಮುಂಬೈ, ಕೋಲ್ಕತ್ತ, ಬೆಂಗಳೂರು ನಗರಗಳಿಂದ ವರದಿಯಾಗಿದೆ.

ದೇಶದ ಎಲ್ಲಾ ಎಟಿಎಂಗಳಲ್ಲಿ ಹೊಸ ನೋಟುಗಳನ್ನು ವಿತರಿಸಲು ಇನ್ನೂ ಮೂರು ವಾರ ಬೇಕಾಗುತ್ತದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು  ಶನಿವಾರ ತಿಳಿಸಿದ್ದರು. ಈ ಮಾಹಿತಿ ಲಭ್ಯವಾದ ನಂತರ ಸರ್ಕಾರದ ಈ ನಿರ್ಧಾರದ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಸರ್ಕಾರದ ಈ ನಿರ್ಧಾರವನ್ನು ನಾನು ಮೊದಲಲ್ಲಿ ಸ್ವಾಗತಿಸಿದ್ದೆ. ಆದರೆ ಸುಮಾರು 2 ಲಕ್ಷ ಎಟಿಎಂ ಯಂತ್ರಗಳಲ್ಲಿ ಹೊಸ ನೋಟುಗಳನ್ನು ವಿತರಿಸಲು ಇನ್ನೂ ಎರಡು ವಾರ ಬೇಕು ಎಂಬುದು ಒಂದು ದೊಡ್ಡ  ಜೋಕ್’ ಎಂದು ಬಾಲಿವುಡ್ ಸಂಗೀತ ನಿರ್ದೇಶಕ ವಿಶಾಲ್ ದದ್ಲಾನಿ ಟ್ವೀಟ್ ಮಾಡಿದ್ದಾರೆ.

‘ಎಷ್ಟೋ ಜನಕ್ಕೆ ರೈಲು ಟಿಕೆಟ್‌ ಖರೀದಿಸಲು ಆಗುತ್ತಿಲ್ಲ. ಹಲವರ ಬಳಿ ಈಗ ದುಡ್ಡಿಲ್ಲ. ₹ 2000 ನೋಟು ಇದ್ದವರಿಗೆ ಚಿಲ್ಲರೆ ಸಿಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್‌ 30ರವರೆಗೆ ಚಲಾವಣೆಗೆ ಅನುಮತಿ ನೀಡಿ: ‘ಈ ನಿರ್ಧಾರ ಜಾರಿ ಮಾಡುವ ಮುನ್ನವೇ ಕೇಂದ್ರ ಸರ್ಕಾರ ಇನ್ನಷ್ಟು ಸಿದ್ಧತೆ ಮಾಡಿಕೊಳ್ಳಬೇಕಿತ್ತು.

ಜನರ ದಿನನಿತ್ಯದ ಖರ್ಚಿಗೂ ಹಣದ ಕೊರತೆ ಉಂಟಾಗಿದೆ. ಕನಿಷ್ಠ ಡಿಸೆಂಬರ್‌ 30ರವರೆಗೆ ರದ್ದಾದ ನೋಟುಗಳ ಚಲಾವಣೆಗೆ ಅನುಮತಿ ನೀಡಬೇಕು. ಇದನ್ನು ಅರುಣ್ ಜೇಟ್ಲಿ ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇನೆ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ತಿಪ್ಪೆಗಳಲ್ಲಿ ₹1.6 ಕೋಟಿ ಪತ್ತೆ
ರದ್ದಾದ ನೋಟುಗಳಿರುವ ಚೀಲಗಳನ್ನು ಕಸದ ತೊಟ್ಟಿ ಮತ್ತು ತಿಪ್ಪೆಗಳಿಗೆ ಎಸೆದಿರುವ ಎರಡು ಘಟನೆಗಳು ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಎರಡೂ ಪ್ರಕರಣಗಳಲ್ಲಿ ಒಟ್ಟು ₹ 1.6 ಕೋಟಿ ಮೊತ್ತದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ₹ 500 ಮತ್ತು ₹ 1000 ಮುಖಬೆಲೆಯ ನೋಟುಗಳನ್ನು ಹರಿದು ಚೀಲಗಳಲ್ಲಿ ತುಂಬಿ, ಕಸದ ತೊಟ್ಟಿಗೆ ಎಸೆಯಲಾಗಿತ್ತು.

ಸರತಿಯಲ್ಲಿ ನಿಂತಿದ್ದ ನಾಲ್ವರ ಸಾವು
ಉತ್ತರ ಪ್ರದೇಶದ ವಿವಿಧೆಡೆ ಬ್ಯಾಂಕ್‌ಗಳಿಗೆ ಹಣ ಜಮಾ ಮಾಡಲು ಮತ್ತು ಎಟಿಎಂ ಘಟಕಗಳಲ್ಲಿ ಹಣ ತೆಗೆಯಲು ಸರತಿಯಲ್ಲಿ ನಿಂತಿದ್ದ ನಾಲ್ಕು ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮೃತರಲ್ಲಿ ಇಬ್ಬರು ಮಹಿಳೆಯರು ಮತ್ತು ಇನ್ನಿಬ್ಬರು ವೃದ್ಧರು.

ವಧು ತಂದೆ ಸಾವು
ಮಗಳ ಮದುವೆ ಖರ್ಚಿಗೆ ಅಗತ್ಯವಿದ್ದ ಹಣವನ್ನು ಬ್ಯಾಂಕ್‌ನಿಂದ ಪಡೆಯಲು ವಿಫಲವಾದ ವ್ಯಕ್ತಿಯೊಬ್ಬರು ಮದುವೆ ಮನೆಯಲ್ಲೇ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಬಿಹಾರದ ವಾರಾಣಸಿಯ ಕೈಮೂರ್‌ನಲ್ಲಿ ನಡೆದಿದೆ. ‘ಮದುವೆ ಖರ್ಚಿಗೆಂದು ಕೂಡಿಟ್ಟಿದ್ದ ಹಣವನ್ನು ನನ್ನ ಪತಿ ಮೂರು ದಿನದ ಹಿಂದಷ್ಟೇ ಬ್ಯಾಂಕ್‌ಗೆ ಜಮಾ ಮಾಡಿದ್ದರು’ ಎಂದು ಮೃತ ವ್ಯಕ್ತಿಯ ಪತ್ನಿ ತಿಳಿಸಿದ್ದಾರೆ.

ಹುಂಡಿಗೆ ಕಪ್ಪು ಹಣ ಹಾಕಬೇಡಿ
‘ಭಕ್ತರು ಧಯವಿಟ್ಟು ಹುಂಡಿಗೆ ಕಪ್ಪುಹಣವನ್ನು ಹಾಕಬೇಡಿ. ಕಪ್ಪು ಹಣ ಹಾಕಿದರೆ ನಿಮಗೂ ನಿಮ್ಮ ಕುಟುಂಬಕ್ಕೂ ಶಾಪ ತಟ್ಟುತ್ತದೆ. ದೇವರು ಪ್ರಾಮಾಣಿಕರನ್ನು ಮಾತ್ರ ಪ್ರೀತಿಸುತ್ತಾನೆ’ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ  ಹನುಮಾನ್‌ ದೇವಾಲಯದ ಹೊರಗೆ ಈ ಬರಹ ಇರುವ ಫಲಕವನ್ನು ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT