ADVERTISEMENT

ಎನ್‌ಎಸ್‌ಜಿಗೆ ಮುಖ್ಯಸ್ಥರಿಲ್ಲ!

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 19:30 IST
Last Updated 1 ಜನವರಿ 2012, 19:30 IST

ನವದೆಹಲಿ (ಪಿಟಿಐ): ರಾಷ್ಟ್ರದ ಅತ್ಯುನ್ನತ ಮತ್ತು ಪ್ರತಿಷ್ಠಿತ ಭಯೋತ್ಪಾದಕ ನಿಗ್ರಹ ಪಡೆಯಾದ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಕಳೆದ ಆರು ತಿಂಗಳಿನಿಂದ ಮುಖ್ಯಸ್ಥರಿಲ್ಲದೆ ಕಾರ್ಯ ನಿರ್ವಹಿಸುತ್ತಿದೆ.

ಎನ್‌ಎಸ್‌ಜಿಯ ಮಹಾ ನಿರೀಕ್ಷಕರಾಗಿದ್ದ ಮೇಜರ್ ಜನರಲ್ ಆರ್. ಎಸ್.ಪ್ರಧಾನ್ ಜುಲೈನಲ್ಲಿ ನಿವೃತ್ತರಾದ ನಂತರ ಮುಖ್ಯಸ್ಥರ ಹುದ್ದೆ ಖಾಲಿ ಉಳಿದಿದೆ. ವಿಪರ್ಯಾಸ ಎಂದರೆ ಈ ಹುದ್ದೆಗೆ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿರುವ ರಕ್ಷಣಾ ಮತ್ತು ಗೃಹ ಇಲಾಖೆಗೆ ಇದುವರೆಗೂ ಅಭ್ಯರ್ಥಿ ದೊರೆತಿಲ್ಲ.

ರಕ್ಷಣಾ ಇಲಾಖೆಯ ಸಹಯೋಗದಲ್ಲಿ ಗೃಹ ಇಲಾಖೆ ಖಾಲಿ ಬಿದ್ದಿರುವ ಈ ಹುದ್ದೆಯ ಭರ್ತಿಗಾಗಿ ಇದುವರೆಗೂ ಎರಡು ಬಾರಿ ಭೂ ಸೇನೆಯ ಮೇಜರ್ ಜನರಲ್ ದರ್ಜೆಯ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಿತ್ತು. ಆದರೆ, ಅದೇಕೊ ಅಭ್ಯರ್ಥಿಯ ಆಯ್ಕೆ ನೆನೆಗುದಿಗೆ ಬಿದ್ದಿದೆ. ಆರು ತಿಂಗಳು ಮುಗಿದರೂ ಅಭ್ಯರ್ಥಿಯ ಆಯ್ಕೆಯಾಗಿಲ್ಲ.

ಗೃಹ ಇಲಾಖೆಯ ಮೂಲಗಳ ಪ್ರಕಾರ ಗೃಹ ಸಚಿವ ಪಿ.ಚಿದಂಬರಂ ಭೂ ಸೇನೆಯ ಹಿರಿಯ ಮೇಜರ್ ಜನರಲ್ ಹೆಸರನ್ನು ಹುದ್ದೆಗೆ ಅಂತಿಮಗೊಳಿಸಿದ್ದಾರೆ. ಆದರೆ, ಇದಕ್ಕೆ ಇನ್ನೂ ರಕ್ಷಣಾ ಇಲಾಖೆಯ ಸಮ್ಮತಿ ದೊರೆಯದ ಕಾರಣ ನೇಮಕಾತಿ ವಿಳಂಬವಾಗಿದೆ.

ಆರು ತಿಂಗಳಿನಿಂದ ಡಿಐಜಿ ದರ್ಜೆಯ ಅಧಿಕಾರಿಯೇ ಎನ್‌ಎಸ್‌ಜಿ ಉಸ್ತುವಾರಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಮುಂಬೈ ದಾಳಿಯ ನಂತರ ಎಚ್ಚೆತ್ತುಕೊಂಡಿರುವ ಸರ್ಕಾರ ತುರ್ತು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಕೋಲ್ಕತ್ತಗಳಲ್ಲಿ ಎನ್‌ಎಸ್‌ಜಿ ಕೇಂದ್ರ ತೆರೆದಿದೆ. 

ಭಯೋತ್ಪಾದಕರ ದಾಳಿಯಂತಹ ಕ್ಲಿಷ್ಟ ಸನ್ನಿವೇಶಗಳನ್ನು ಸಮರ್ಪಕವಾಗಿ ನಿರ್ವಹಿಸಲು ಎನ್‌ಎಸ್‌ಜಿ ಕೇಂದ್ರಗಳಲ್ಲಿ `ಬ್ಲ್ಯಾಕ್ ಕ್ಯಾಟ್~ಗಳು ಸದಾ ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ಅವರನ್ನು ಮುನ್ನಡೆಸಬೇಕಾದ ಮುಖ್ಯಸ್ಥರಿಲ್ಲದೇ ಇರುವುದು ಕಾರ್ಯವೈಖರಿಯ ಮೇಲೆ ಪರಿಣಾಮ ಬೀರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.