ADVERTISEMENT

ಎನ್‌ಡಿಎ ಅವಧಿಯ 2ಜಿ ಸ್ಪೆಕ್ಟ್ರಂ ಹಂಚಿಕೆ:ತನಿಖೆ ತೀವ್ರಗೊಳಿಸಿದ ಸಿಬಿಐ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಎನ್‌ಡಿಎ ಅಧಿಕಾರಾವಧಿಯಲ್ಲಿ ದಿವಂಗತ ಪ್ರಮೋದ್ ಮಹಾಜನ್ ದೂರಸಂಪರ್ಕ ಸಚಿವರಾಗಿದ್ದಾಗ ಅನುಮತಿ ನೀಡಿದ್ದ 2ಜಿ ತರಂಗಾಂತರ ಹಂಚಿಕೆಯ ವಿವರಗಳನ್ನು ಸಿಬಿಐ ಈಗ ಕೆದಕತೊಡಗಿದೆ.

ಈ ಸಂಬಂಧ ತನಿಖೆ ತೀವ್ರಗೊಳಿಸಿರುವ ಸಿಬಿಐ, 2001ರಿಂದ 2007ರ ಅವಧಿಯಲ್ಲಿ ಮಾಡಿಕೊಳ್ಳಲಾದ ಎಲ್ಲ ಪರವಾನಗಿ ಒಪ್ಪಂದಗಳ ವಿವರ ನೀಡುವಂತೆ ದೂರಸಂಪರ್ಕ ಇಲಾಖೆಗೆ ಪತ್ರ ಬರೆದಿದೆ.

ಸಿಬಿಐ ಮನವಿಗೆ ಸ್ಪಂದಿಸಿರುವ ದೂರಸಂಪರ್ಕ ಇಲಾಖೆ, ದೆಹಲಿ ನಗರಕ್ಕಾಗಿ ಭಾರ್ತಿ ಟೆಲಿನೆಟ್ ಲಿಮಿಟೆಡ್, ದೆಹಲಿ ಮತ್ತು ಮುಂಬೈಗಾಗಿ ಏರ್‌ಸೆಲ್ ಜತೆ ಮಾಡಿಕೊಂಡ ಒಪ್ಪಂದದ ವಿವರಗಳನ್ನು ತನಿಖಾ ಸಂಸ್ಥೆಗೆ ನೀಡಿದೆ.
ಆದರೆ, ಹಚಿಸನ್ ಮತ್ತು ಸ್ಟರ್ಲಿಂಗ್ ಸೆಲ್ಯುಲರ್ (ಈಗ ವೊಡಾಫೋನ್- ಎಸ್ಸಾರ್), ಬಿಪಿಎಲ್ ಮತ್ತು ಐಡಿಯಾ ಜತೆ ಮಾಡಿಕೊಂಡ ಒಪ್ಪಂದದ ವಿವರ ಲಭ್ಯವಾಗಿಲ್ಲ. ಅದನ್ನು ಹುಡುಕುವ ಯತ್ನ ನಡೆಯುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಕುರಿತು ಸಿಬಿಐ ಡಿವೈಎಸ್‌ಪಿ ಆರ್.ಎ. ಯಾದವ್ ಅವರಿಗೆ ಪತ್ರ ಬರೆದಿರುವ ದೂರಸಂಪರ್ಕ ಇಲಾಖೆಯ ಅಧೀನ ಕಾರ್ಯದರ್ಶಿ, ಇತರ ಪರವಾನಗಿ ಒಪ್ಪಂದದ ವಿವರ ಹುಡುಕುವ ಯತ್ನ ಜಾರಿಯಲ್ಲಿದೆ. ಶೀಘ್ರವೇ ಈ ವಿವರಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಹಿನ್ನೆಲೆ: 2 ಜಿ ಸ್ಪೆಕ್ಟ್ರ್‌ಂ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ದೂರಸಂಪರ್ಕ ಸಚಿವರಾದ ಎ. ರಾಜಾ ಮತ್ತು ದಯಾನಿಧಿ ಮಾರನ್ ಅವರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದ ಸಿಬಿಐ, ಹೆಚ್ಚುವರಿ ತರಂಗಾಂತರ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿ ಕಳೆದ ವರ್ಷದ ನವೆಂಬರ್‌ನಲ್ಲಿ ಮಾಜಿ ಟೆಲಿಕಾಂ ಕಾರ್ಯದರ್ಶಿ ಶ್ಯಾಮಲ್ ಘೋಷ್, ಟೆಲಿಕಾಂ ಇಲಾಖೆಯ ಆಗಿನ ಉಪ ಮಹಾ ನಿರ್ದೇಶಕ ಜೆ. ಆರ್. ಗುಪ್ತಾ ಮತ್ತು ಏರ್‌ಟೆಲ್ ಹಾಗೂ ವೊಡಾಫೋನ್ ಕಂಪೆನಿಗಳ ವಿರುದ್ಧವೂ ಪ್ರಕರಣ ದಾಖಲಿಸಿತ್ತು.

ಈ ಹೆಚ್ಚುವರಿ ಹೆಚ್ಚುವರಿ ತರಂಗಾಂತರ ಹಂಚಿಕೆಯಿಂದಾಗಿ 2001ರಿಂದ 2007ರ ಅವಧಿಯಲ್ಲಿ ಸರ್ಕಾರದ ಬೊಕ್ಕಸಕ್ಕೆ 508 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಿಬಿಐ `ಎಫ್‌ಐಆರ್~ನಲ್ಲೇ ಹೇಳಿತ್ತು.

2001ರಿಂದ 2003ರವರೆಗೆ ಎನ್‌ಡಿಎ ಅವಧಿಯಲ್ಲಿ ಪ್ರಮೋದ್ ಮಹಾಜನ್ ದೂರಸಂಪರ್ಕ ಸಚಿವರಾಗಿದ್ದರು. 2004ರಿಂದ 2007ರವರೆಗೆ ದಯಾನಿಧಿ ಮಾರನ್ ಹಾಗೂ 2008ರಿಂದ ಎ.ರಾಜಾ ಆ ಹುದ್ದೆಯಲ್ಲಿದ್ದರು.
2001ರಿಂದ 2003ರ ಅವಧಿಯಲ್ಲಿ ದೂರಸಂಪರ್ಕ ಸಚಿವರಾಗಿದ್ದ ಪ್ರಮೋದ ಮಹಾಜನ್ ಮೃತರಾದ ಕಾರಣ ಅವರ ಹೆಸರನ್ನು `ಎಫ್‌ಐಆರ್~ನಿಂದ ಕೈಬಿಟ್ಟಿತ್ತು. ಆದರೆ, ಹೆಚ್ಚುವರಿ ತರಂಗಾಂತರವನ್ನು ತರಾತುರಿಯಲ್ಲಿ ಹಂಚಿಕೆ ಮಾಡುವಲ್ಲಿ ಮಹಾಜನ್ ಅವರ ಪಾತ್ರವೂ ಇದೆ ತನಿಖಾ ಸಂಸ್ಥೆ ಆರೋಪಿಸಿತ್ತು.

ಪ್ರಕರಣದ ವಿವರ: ಶ್ಯಾಮಲ್ ಘೋಷ್, ಜೆ. ಆರ್. ಗುಪ್ತಾ, ಏರ್‌ಟೆಲ್ ಹಾಗೂ ವೊಡಾಫೋನ್ ಕಂಪೆನಿಗಳ ವಿರುದ್ಧ ಕ್ರಿಮಿನಲ್ ಸಂಚು ರೂಪಿಸಿದ ಆರೋಪ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವಿವಿಧ ಕಲಂ ಅಡಿ, ಸಿಬಿಐ ಪ್ರಕರಣ ದಾಖಲಿಸಿದೆ.

`ಪ್ರಮೋದ್ ಮಹಾಜನ್ ಸಚಿವರಾಗಿದ್ದಾಗ ಟೆಲಿಕಾಂ ಕಂಪೆನಿಗಳ ಮೂಲ ತರಂಗಾಂತರವನ್ನು 4.4 ಮೆಗಾ ಹರ್ಟ್ಸ್‌ನಿಂದ 6.3 ಮೆಗಾಹರ್ಟ್ಸ್‌ಗೆ ಏರಿಸಲಾಗಿದೆ. ಅಲ್ಲದೇ ಚಂದಾದಾರರ ಸಂಖ್ಯೆಯನ್ನು ಆಧರಿಸಿ ಹೆಚ್ಚುವರಿ ತರಂಗಾಂತರ ಹಂಚಿಕೆ ಮಾಡಲಾಗಿದೆ.~

`ಆಗಿನ ಟೆಲಿಕಾಂ ಕಾರ್ಯದರ್ಶಿ ಹಾಗೂ ಟೆಲಿಕಾಂ ಇಲಾಖೆಯ ಉಪ ಮಹಾ ನಿರ್ದೇಶಕರು ತಮ್ಮ ಸ್ಥಾನಮಾನದ ದುರ್ಬಳಕೆ ಮಾಡಿಕೊಂಡು, ದೆಹಲಿ ಮತ್ತು ಮುಂಬೈನ ಮೂರು ಫಲಾನುಭವಿ ಟೆಲಿಕಾಂ ಕಂಪೆನಿಗಳೊಂದಿಗೆ ಕ್ರಿಮಿನಲ್ ಸಂಚು ರೂಪಿಸಿದ್ದಾರೆ.~

`ತಾಂತ್ರಿಕ ಸಮಿತಿ ವರದಿಯನ್ನು ಬದಿಗಿಟ್ಟು, ಆಗಿನ ದೂರಸಂಪರ್ಕ ಸಚಿವರ ಅನುಮತಿಯೊಂದಿಗೆ 2002ರ ಜನವರಿ 31ರಂದು ಈ ಕಂಪೆನಿಗಳಿಗೆ ಹೆಚ್ಚುವರಿ ತರಂಗಾಂತರ ಹಂಚಿಕೆ ಮಾಡಲು ಅವಸರದ ನಿರ್ಧಾರ ಕೈಗೊಂಡಿದ್ದಾರೆ~ ಎಂದು ಸಿಬಿಐ ಆರೋಪಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.