ADVERTISEMENT

ಎನ್‌ಡಿಎ ಬಲಗೊಳಿಸಲು ಪ್ರಾದೇಶಿಕ ಪಕ್ಷಗಳಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 24 ಮೇ 2012, 19:30 IST
Last Updated 24 ಮೇ 2012, 19:30 IST

ಮುಂಬೈ (ಪಿಟಿಐ): ಯುಪಿಎ ಅಂತ್ಯ ಸನ್ನಿಹಿತವಾಗುತ್ತಿದೆ ಎಂದಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಎನ್‌ಡಿಎ ಬೇರು ಬಲಗೊಳಿಸುವಂತೆ ಪ್ರಾದೇಶಿಕ ಪಕ್ಷಗಳಿಗೆ ಆಹ್ವಾನ ನೀಡಿದ್ದಾರೆ.

ಮುಂಬೈನಲ್ಲಿ ಗುರುವಾರ ಆರಂಭವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡಿದ ಬಿಜೆಪಿ ಅಧ್ಯಕ್ಷರು, ನರೇಂದ್ರ ಮೋದಿ ಅವರೊಂದಿಗಿನ ಸಂಘರ್ಷದ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಒಗ್ಗಟ್ಟು ಹಾಗೂ ಶಿಸ್ತು ಕಾಯ್ದುಕೊಳ್ಳುವಂತೆಯೂ ಸಲಹೆ ನೀಡಿದರು.

`ಪ್ರಾದೇಶಿಕ ಪಕ್ಷಗಳ ಕುರಿತ ನಮ್ಮ ನಿಲುವು ಸ್ಪಷ್ಟವಾಗಿದೆ. ಅವರೂ ಸಹ ರಾಷ್ಟ್ರೀಯ ದೃಷ್ಟಿಕೋನ ಹೊಂದಿದ್ದಾರೆ ಎಂದು ನಾವು ನಂಬಿದ್ದೇವೆ. ಅವರೆಲ್ಲ ಎನ್‌ಡಿಎಯಲ್ಲಿ ಬಿಜೆಪಿಯ ಮಹತ್ವದ ಪಾಲುದಾರರಾಗಿದ್ದರು. ಬಿಜೆಪಿಯಂತಹ ರಾಷ್ಟ್ರೀಯ ಹಾಗೂ ರಾಷ್ಟ್ರೀಯವಾದಿ ಪಕ್ಷ ಕೇಂದ್ರದಲ್ಲಿದ್ದಾಗ ಮಾತ್ರ ಸ್ಥಿರ ಸರ್ಕಾರ ನೀಡಲು ಸಾಧ್ಯ ಎಂಬುದು ಎನ್‌ಡಿಎ ಆಡಳಿತದಿಂದ ಸಾಬೀತಾಗಿದೆ~ ಎಂದು ಹೇಳಿದರು.

ಕೇಂದ್ರದ ಯುಪಿಎ ಸರ್ಕಾರಕ್ಕೆ ಚುರುಕು ಮುಟ್ಟಿಸುವಂತೆ, `ನಿಮ್ಮ ಅಂತ್ಯ ಸಮೀಪಿಸುತ್ತಿದೆ. ದೇಶದ ಜನ ಇಂತಹ ದುರಾಡಳಿತ ಸಹಿಸಲು ಸಾಧ್ಯವಿಲ್ಲ. ನಿಮ್ಮನ್ನು ಅಧಿಕಾರದಿಂದ ಕಿತ್ತೊಗೆಯಲು ಅವರು ನಿರ್ಧರಿಸಿದ್ದಾರೆ.
ನೀವು ಸೃಷ್ಟಿಸಿದ ಗೊಂದಲ ನಿವಾರಿಸಿ ದೇಶವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬರುವ ಕಾಲ ಸನ್ನಿಹಿತವಾಗಿದೆ. ಇದು ಮುಂಬೈನಿಂದ ನೀಡುತ್ತಿರುವ ಸಂದೇಶ~ ಎಂದು ಗಡ್ಕರಿ ಗುಡುಗಿದರು.

`ಕಾಂಗ್ರೆಸ್ ಸಮಸ್ಯೆ ಸೃಷ್ಟಿಸಿದೆ. ಬಿಜೆಪಿ ಪರಿಹಾರ ನೀಡುತ್ತದೆ. ಭಾರತದ ಸಮಸ್ಯೆಗಳಿಗೆ ಮೂಲಕಾರಣ ಯುರೋಜೋನ್ ಅಲ್ಲ, ಯುಪಿಎ ಜೋನ್~ ಎಂದು ವ್ಯಂಗ್ಯವಾಡಿದರು.

ಎಐಎಡಿಎಂಕೆಯಂತಹ ಪ್ರಾದೇಶಿಕ ಪಕ್ಷಗಳನ್ನು ಹತ್ತಿರಕ್ಕೆ ಸೆಳೆದುಕೊಳ್ಳುವ ನಿಟ್ಟಿನಲ್ಲಿ, ಅತಿಯಾಗಿ ಹದಗೆಟ್ಟ ಕೇಂದ್ರ-ರಾಜ್ಯಗಳ ಸಂಬಂಧ ಸಹ ಯುಪಿಎ ದುರಾಡಳಿತಕ್ಕೆ ಕನ್ನಡಿ ಹಿಡಿಯುತ್ತಿದೆ ಎಂದರು.

`ಹಲವು ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರಗಳನ್ನು ನಗರಸಭೆಗಳ ಮಟ್ಟಕ್ಕೆ ಇಳಿಸಿದ್ದಾರೆ. ಇದನ್ನು ಬಿಜೆಪಿ ಸಹಿಸುವುದಿಲ್ಲ~ ಎಂದರು.

ಪಕ್ಷದೊಳಗಿನ ಭಿನ್ನಮತಕ್ಕೆ ತೆರೆ ಎಳೆಯುವಂತೆ ಪಕ್ಷದ ಯಾವುದೇ ನಾಯಕರ ಹೆಸರು ಉಲ್ಲೇಖಿಸದೇ, `ನಾನು ಯಶಸ್ಸಿಗೆ ಸುಲಭವಾದ ಸೂತ್ರ ಮುಂದಿಡುತ್ತಿದ್ದೇನೆ. ಎಲ್ಲ ಹಂತಗಳಲ್ಲೂ ಶಿಸ್ತು, ಒಗ್ಗಟ್ಟು ಹಾಗೂ ಬದ್ಧತೆಯನ್ನು ಕಾಪಾಡಬೇಕಿದೆ~ ಎಂದು ಕರೆ ನೀಡಿದರು.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ವೈಮನಸ್ಸು ದೂರವಾಗಿಸಿಕೊಳ್ಳಲು ನಿತಿನ್, ಮೋದಿ ಅವರ ಬದ್ಧವೈರಿ ಸಂಜಯ್ ಜೋಷಿ ಅವರ ರಾಜೀನಾಮೆ ಪತ್ರವನ್ನು ಗುರುವಾರ ಮಧ್ಯಾಹ್ನ ಪಡೆದರು. ಆನಂತರವಷ್ಟೇ ಮೋದಿ ಕಾರ್ಯಕಾರಿಣಿಗೆ ಹಾಜರಾಗಲು ಸಮ್ಮತಿಸಿದರು. ರಾಷ್ಟ್ರೀಯ ಕಾರ್ಯಕಾರಿಣಿಗೆ ಸಂಜಯ್ ಜೋಷಿ ಅವರಿಗೆ ವಿಶೇಷ ಆಹ್ವಾನ ನೀಡಲಾಗಿತ್ತು.

ತಮ್ಮ ಭಾಷಣದಲ್ಲಿ ಬಿಜೆಪಿ ಆಡಳಿತವಿರುವ ಗುಜರಾತ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಈ ವರ್ಷ ನಡೆಯಲಿರುವ ಚುನಾವಣೆಯ ಬಗ್ಗೆ ಪ್ರಸ್ತಾಪಿಸಿದ ಗಡ್ಕರಿ, ಮೋದಿ ಸರ್ಕಾರದ ಸಾಧನೆಯನ್ನು ಶ್ಲಾಘಿಸಿದರು.
ಉತ್ತರ ಪ್ರದೇಶದಲ್ಲಿನ ಸೋಲಿನ ಕುರಿತು ಮಾತನಾಡಿದ ಅವರು, ಪಕ್ಷದೊಳಗೆ ಎಲ್ಲ ಹಂತಗಳಲ್ಲೂ ಯುವಕರಿಗೆ ಉತ್ತೇಜನ ನೀಡಬೇಕು ಎಂದರು.

ಗೋವಾದಲ್ಲಿ ತಮ್ಮ ಪಕ್ಷಕ್ಕೆ ಅಲ್ಪಸಂಖ್ಯಾತರು ಮತ ಹಾಕಿದ್ದನ್ನು ನೆನಪಿಸಿದ ನಿತಿನ್, ಬಿಜೆಪಿ ಅಲ್ಪಸಂಖ್ಯಾತ ವಿರೋಧಿ ಎಂದು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಮಾಡುತ್ತಿರುವ ಅಪಪ್ರಚಾರಕ್ಕೆ ಕಿವಿಗೊಡದಂತೆ ಅಲ್ಪಸಂಖ್ಯಾತರಿಗೆ ಸಲಹೆ ನೀಡಿದರು. ಎಲ್ಲ ಭಾರತೀಯರಿಗೂ ಭದ್ರತೆ ಹಾಗೂ ನ್ಯಾಯ ಒದಗಿಸಲು ಬಿಜೆಪಿ ಬದ್ಧವಾಗಿದೆ ಎಂದರು.

ರಾಷ್ಟ್ರಪತಿ ಅಭ್ಯರ್ಥಿ ಕುರಿತು ಮಾತನಾಡಿದ ಬಿಜೆಪಿ ಅಧ್ಯಕ್ಷರು, ಆ ಸ್ಥಾನಕ್ಕೆ ಘನತೆ ತರುವ ವ್ಯಕ್ತಿಯನ್ನು ಆಯ್ಕೆ ಮಾಡಲು ಬಿಜೆಪಿ ಕಾಂಗ್ರೆಸ್ಸೇತರ ಪಕ್ಷಗಳಲ್ಲಿ ಒಮ್ಮತ ಮೂಡಿಸಲು ಯತ್ನಿಸುತ್ತಿದೆ ಎಂದರು.

ಕಾಂಗ್ರೆಸ್, ಸಂವಿಧಾನಕ್ಕೆ ನಿಷ್ಠರಾಗಿರುವವರಿಗಿಂತ ಗಾಂಧಿ ವಂಶಕ್ಕೆ ನಿಷ್ಠರಾಗಿರುವವರನ್ನು ರಾಷ್ಟ್ರಪತಿ ಭವನಕ್ಕೆ ತರಲು ಯೋಜಿಸುತ್ತಿದೆ. ಇತರ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಅಪಮೌಲ್ಯಗೊಳಿಸಿದಂತೆ, ರಾಷ್ಟ್ರಪತಿ ಕಚೇರಿಯನ್ನೂ ಅಪಮೌಲ್ಯಗೊಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶಗಳಲ್ಲಿ ಬರ ತಲೆದೋರಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕೃಷಿಗೆ ಸಂಬಂಧಿಸಿ ಗೊತ್ತುವಳಿ ಮಂಡಿಸಲಾಯಿತು.

ಪಕ್ಷದ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್ ಈ ಗೊತ್ತುವಳಿ ಮಂಡಿಸಿದರು. ಕರ್ನಾಟಕ ಮುಖ್ಯಮಂತ್ರಿ ಸದಾನಂದಗೌಡ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅದನ್ನು ಅನುಮೋದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.