ಬೋಧಗಯಾ/ಪಟ್ನಾ/ನವದೆಹಲಿ (ಪಿಟಿಐ): ಬೋಧಗಯಾದಲ್ಲಿ ಭಾನುವಾರ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣದ ತನಿಖಾ ತಂಡಕ್ಕೆ ವಿಧ್ವಂಸಕರ ಜಾಡು ಪತ್ತೆ ಹಚ್ಚುವಂತಹ ಮಹತ್ವದ ಸುಳಿವು ಬುಧವಾರ ಕೂಡ ದೊರಕಿಲ್ಲ.
ಈ ಮಧ್ಯೆ, ಘಟನಾ ಸ್ಥಳಕ್ಕೆ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ನಾಯಕಿ ಅಂಬಿಕಾ ಸೋನಿ ಬುಧವಾರ ಭೇಟಿ ನೀಡಿದ್ದರು.
ಈ ಘಟನೆಯ ಹಿಂದೆ ನಕ್ಸಲರ ಅಥವಾ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಕೈವಾಡ ಇದೆಯೇ ಎಂಬುದನ್ನು ತಿಳಿಯಲು ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಿದೆ ಎಂದು ಶಿಂಧೆ ಹೇಳಿದ್ದಾರೆ.
ಮಹಾಬೋಧಿ ದೇವಾಲಯಕ್ಕೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಭದ್ರತೆ ಒದಗಿಸಬೇಕು ಎಂಬ ಬಿಹಾರ ಸರ್ಕಾರ ಕೋರಿಕೆಯನ್ನು ಪರಿಶೀಲಿಸುವ ಭರವಸೆಯನ್ನು ಅವರು ನೀಡಿದ್ದಾರೆ.
`ಮಾಹಿತಿ ಸಂಗ್ರಹಿಸುತ್ತಿದ್ದೇನೆ': ಮುಂಬೈ ಹುಡುಗಿ ಇಶ್ರತ್ ಜಹಾನ್ ಉಗ್ರರ ಗುಂಪಿಗೆ ಸೇರಿದವಳೇ ಅಲ್ಲವೇ ಎಂಬ ಪ್ರಶ್ನೆಗೆ, `ಈ ಬಗ್ಗೆ ನಾನು ಮಾಹಿತಿ ಸಂಗ್ರಹಸುತ್ತ್ದ್ದಿದೇವೆ' ಎಂದರು.
ಪ್ರತ್ಯೇಕ ತೆಲಂಗಾಣ ರಚನೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಇನ್ನಷ್ಟು ಕಾಲಾವಕಾಶ ಬೇಕು ಎಂದು ಹೇಳಿದರು. ಮತ್ತೊಬ್ಬ ಸ್ಥಳೀಯ ವಶಕ್ಕೆ: ಪ್ರಕರಣದ ಸಂಬಂಧ ಯಾರನ್ನೂ ಬಂಧಿಸಿಲ್ಲ. ಆದರೆ, ಬಾರಾಚಟ್ಟಿ ಗ್ರಾಮದ ದಶರಥ್ ಎಂಬವರನ್ನು ಪೊಲೀಸರು ಬುಧವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಇದೇ ಗ್ರಾಮದ ವಿನೋದ್ ಕುಮಾರ್ ಮಿಸ್ತ್ರಿಯನ್ನು ಸೋಮವಾರ ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ಎನ್‌ಐಎ ತಂಡ ಮಂಗಳವಾರ ವಶಕ್ಕೆ ತೆಗೆದುಕೊಂಡಿದ್ದ ಒಬ್ಬರು ಮಹಿಳೆಯೂ ಸೇರಿದಂತೆ ನಾಲ್ವರನ್ನು ಬಿಡುಗಡೆ ಮಾಡಿದೆ. ಸ್ಫೋಟ ಪ್ರಕರಣದಲ್ಲಿ ಇವರ ಪಾತ್ರ ಇದೆ ಎನ್ನುವಂತಹ ಯಾವುದೇ ಸಾಕ್ಷ್ಯಗಳು ದೊರಕಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಸಂಬಂಧ ಅಪರಿಚಿತರ ವಿರುದ್ಧ ಮೂರು ಎಫ್‌ಐಆರ್‌ಗಳನ್ನು ಗಯಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
ಸ್ಫೋಟಕ್ಕೆ ಉಗ್ರರ ಹೊಸ ಸಾಧನ
ಉಗ್ರರು ಬೋಧಗಯಾ ದೇಗುಲ ಸ್ಫೋಟಕ್ಕೆ ಹೊಸ ಮಾದರಿಯ ಸಾಧನವನ್ನು ಬಳಸಿದ್ದು, ಈ ಹಿಂದೆ ದೇಶದೆಲ್ಲೆಡೆ ಭಯೋತ್ಪಾದನಾ ದಾಳಿಗಳಿಗೆ ಬಳಸಲಾಗಿರುವ ಸಾಧನಗಳಿಗಿಂತ ಭಿನ್ನವಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸಿದ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.