ADVERTISEMENT

ಎಲ್‌ಪಿಜಿ ವಿತರಕರನ್ನೂ ಬದಲಿಸಲು ಅವಕಾಶ

​ಪ್ರಜಾವಾಣಿ ವಾರ್ತೆ
Published 11 ಜನವರಿ 2013, 19:59 IST
Last Updated 11 ಜನವರಿ 2013, 19:59 IST
ಎಲ್‌ಪಿಜಿ ವಿತರಕರನ್ನೂ ಬದಲಿಸಲು ಅವಕಾಶ
ಎಲ್‌ಪಿಜಿ ವಿತರಕರನ್ನೂ ಬದಲಿಸಲು ಅವಕಾಶ   

ನವದೆಹಲಿ (ಪಿಟಿಐ): ಮೊಬೈಲ್ ಸೇವಾ ಸಂಸ್ಥೆಯನ್ನು ಬದಲಿಸಿದಂತೆ (ಪೊರ್ಟೆಬಿಲಿಟಿ) ಇದೀಗ ಗ್ರಾಹಕರು ತಮ್ಮ ಅಡುಗೆ ಅನಿಲ (ಎಲ್‌ಪಿಜಿ) ಪೂರೈಸುವ ವಿತರಕರನ್ನೂ ಸುಲಭವಾಗಿ ಬದಲಿಸಬಹುದಾಗಿದೆ.

ತಮಗಿಷ್ಟವಾದ ಸೇವೆ ಒದಗಿಸುವ ಮೊಬೈಲ್ ಕಂಪೆನಿಯನ್ನು ಗ್ರಾಹಕರು ಬದಲಿಸುವ ಮಾದರಿಯ್ಲ್ಲಲೇ ಎಲ್‌ಪಿಜಿ ವಿತರಕರನ್ನೂ ಬದಲಾಯಿಸಿಕೊಳ್ಳುವ ಅವಕಾಶವನ್ನು ಸರ್ಕಾರ ಒದಗಿಸಿದೆ. ಆದರೆ ಗ್ರಾಹಕರು ತಮಗೆ ಅಡುಗೆ ಅನಿಲ ಪೂರೈಸುವ ವಿತರಕರನ್ನು ಮಾತ್ರ ಬದಲಾಯಿಸಿಕೊಳ್ಳಬಹುದಾಗಿದ್ದು ಅಡುಗೆ ಅನಿಲ ಕಂಪೆನಿಯನ್ನು ಅಲ್ಲ ಎಂದು ಸರ್ಕಾರ ಇದೇ ವೇಳೆ ಸ್ಪಷ್ಟಪಡಿಸಿದೆ.

ನೀವು ಒಂದುವೇಳೆ `ಇಂಡೇನ್' ಗ್ರಾಹಕರಾಗಿದ್ದರೆ ಸಂಬಂಧಿಸಿದ ಬಡಾವಣೆಯಲ್ಲಿರುವ `ಇಂಡೇನ್' ವಿತರಕರಲ್ಲಿ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಆದರೆ `ಇಂಡೇನ್' ಬದಲಿಗೆ `ಭಾರತ್ ಗ್ಯಾಸ್' ಇಲ್ಲವೆ `ಎಚ್‌ಪಿ' ಕಂಪೆನಿಗೆ ವರ್ಗಾವಣೆಯಾಗುವಂತಿಲ್ಲ. ವಿತರಕರನ್ನು ಬದಲಾಯಿಸಿಕೊಂಡಾಗ ಒಂದು ಬಾರಿ ಮಾತ್ರ ಅಲ್ಪಮೊತ್ತದ ಶುಲ್ಕವನ್ನು ನೀಡಬೇಕಾಗುತ್ತದೆ. ವಿತರಕ ಬದಲಾದರೂ ಗ್ರಾಹಕರ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.

ಕೇಂದ್ರ ಇಂಧನ ಸಚಿವ ವೀರಪ್ಪ ಮೊಯಿಲಿ ಶುಕ್ರವಾರ ಇಂತಹ ವ್ಯವಸ್ಥೆಗೆ ಚಂಡೀಗಡದಲ್ಲಿ ಚಾಲನೆ ನೀಡಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ಕನಿಷ್ಠ 25 ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. ಹಂತ ಹಂತವಾಗಿ ದೇಶದ ಎಲ್ಲೆಡೆ ಈ ಯೋಜನೆ ಅನುಷ್ಠಾನಕ್ಕೆ ತರಲಾಗುವುದು. ಅಂತರ್‌ಜಾಲದ ಮೂಲಕ ಇಂತಹ ವ್ಯವಸ್ಥೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೊಸ ಸಂಪರ್ಕಕ್ಕೂ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ಜಿಲ್ಲೆಯ ಪ್ರತಿ ಬಡಾವಣೆಯಲ್ಲಿ ಎರಡರಿಂದ ಮೂವರು ವಿತರಕರ ಗುಂಪನ್ನು ಮಾಡಲಾಗುತ್ತಿದ್ದು, ಗ್ರಾಹಕರು ಇವರಲ್ಲಿ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳುವ ಅವಕಾಶ ಒದಗಿಸಲಾಗುವುದು. ಇಂತಹ ಯೋಜನೆಯಿಂದ 13.5 ಕೋಟಿ ಗ್ರಾಹಕರಿಗೆ ಅನುಕೂಲವಾಗುತ್ತಿದ್ದು, ಅಡುಗೆ ಅನಿಲ ವಿತರಕರ ಅಸರ್ಮಕ ಸೇವೆಗೆ ಕಡಿವಾಣ ಹಾಕಲು ಸಹಕಾರಿ ಎಂದರು.

ಅತ್ಯುತ್ತಮ ಸೇವೆ ಒದಗಿಸುವ ವಿತರಕರ ಸೇವೆ ಬಳಸಿಕೊಳ್ಳಲು ಇದರಿಂದ ಗ್ರಾಹಕರಿಗೆ ಸಾಧ್ಯ. ಅತ್ಯುತ್ತಮ ವಿತರಕರಿಗೆ `5 ಸ್ಟಾರ್' ಕಳಪೆ ವಿತರಕರಿಗೆ ಸ್ಟಾರ್‌ರಹಿತ ದರ್ಜೆ ನೀಡಲಾಗುವುದು. ಗ್ರಾಹಕರು ಸಿಲಿಂಡರ್ ಬುಕ್ ಮಾಡಿದ ಎರಡು ದಿನಗಳ ಒಳಗಾಗಿ ವಿತರಣೆ ಮಾಡಿದಲ್ಲಿ ಅಂತಹ ವಿತರಕರನ್ನು `5 ಸ್ಟಾರ್' ಗುಂಪಿಗೆ ಸೇರಿಸಲಾಗುತ್ತದೆ. ಹತ್ತು ದಿನಗಳಾದರೂ ಸಿಲಿಂಡರ್ ವಿತರಣೆ ಮಾಡದ ವಿತರಕರಿಗೆ ಯಾವುದೇ ಸ್ಟಾರ್ ನೀಡಲಾಗುವುದಿಲ್ಲ. ಹೀಗಾಗಿ ಕಳಪೆ ಸೇವೆ ಒದಗಿಸುವ ವಿತರಕರನ್ನು ಇಂತಹ ವ್ಯವಸ್ಥೆಯಿಂದ ಸುಲಭವಾಗಿ ಪತ್ತೆ ಮಾಡಬಹುದು. ನಿರಂತರವಾಗಿ ಕಳಪೆ ಸೇವೆ ಒದಗಿಸುವ ವಿತರಕರ ಲೈಸನ್ಸ್ ಅನ್ನು ರದ್ದುಗೊಳಿಸಲಾಗುವುದು ಎಂದು ಮೊಯಿಲಿ ಎಚ್ಚರಿಕೆ ನೀಡಿದರು. ನೇಮಕಾತಿ ನಿಯಮಗಳ ಪಾಲನೆ ಪ್ರಕ್ರಿಯೆ ನಂತರ 2,500 ಹೊಸ ಎಲ್‌ಪಿಜಿ ವಿತರಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದೂ ಮೊಯಿಲಿ ತಿಳಿಸಿದರು.

ಕಂಪೆನಿ ಬದಲಾವಣೆಗೂ ಚಿಂತನೆ

ಗ್ರಾಹಕರು ತಮಗೆ ಅನುಕೂಲಕರ ಸೇವೆ ನೀಡುವ ವಿತರಕರ ಸೇವೆಯನ್ನು ಆಯ್ಕೆ ಮಾಡಿಕೊಳ್ಳಲು ಹೇಗೆ ಅವಕಾಶ ನೀಡಲಾಗಿದೆಯೋ ಅದೇ ಮಾದರಿಯಲ್ಲಿ ಎಲ್‌ಪಿಜಿ ಕಂಪೆನಿಗಳನ್ನೂ ಬದಲಾಯಿಸಿಕೊಳ್ಳಲು ಸದ್ಯಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ, ಸಿಲಿಂಡರ್‌ಗಳ ಸಮೇತ ಗ್ರಾಹಕ ತಾನು ಬಳಸುತ್ತಿರುವ ಎಲ್‌ಪಿಜಿ ಸಂಪರ್ಕ ರದ್ದತಿಗೆ ಕೋರಿ ಅರ್ಜಿ ಸಲ್ಲಿಸಿದರೆ ಅಂತಹ ಸಂದರ್ಭದಲ್ಲಿ ಆತ ಬಯಸಿದಲ್ಲಿ ಅವರಿಗೆ ಬೇರೆ ಕಂಪೆನಿಯ ಎಲ್‌ಪಿಜಿ ಸಂಪರ್ಕ ಒದಗಿಸಲು ಕ್ರಮ ಕೈಗೊಳ್ಳಬಹುದು, ಇಂತಹ ಕ್ರಮಕ್ಕೂ ಈಗಿರುವ ಕಾನೂನನ್ನು ಬದಲಾಯಿಸಬೇಕಾಗಿದ್ದು, ಈ ಬಗ್ಗೆ ಚಿಂತನೆ ನಡೆದಿದೆ ಎಂದು ಇಂಧನ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.