ADVERTISEMENT

ಏಪ್ರಿ ಲ್‌ನಲ್ಲಿ ಮಹಾಚುನಾವಣೆ

ಮೇ 31ರೊಳಗೆ 16ನೇ ಲೋಕಸಭೆ ಅಸ್ತಿತ್ವಕ್ಕೆ * ಆಂಧ್ರ, ಒಡಿಶಾ, ಸಿಕ್ಕಿಂ ವಿಧಾನಸಭೆಗಳಿಗೂ ಚುನಾವಣೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2014, 20:00 IST
Last Updated 5 ಜನವರಿ 2014, 20:00 IST

ನವದೆಹಲಿ (ಪಿಟಿಐ):  ದೇಶದ ಜನರು  ಕುತೂಹಲದಿಂದ ಎದುರು ನೋಡುತ್ತಿರುವ ಸಾರ್ವತ್ರಿಕ ಚುನಾವಣೆಗೆ ವೇದಿಕೆ ಸಜ್ಜಾಗುತ್ತಿದ್ದು,  ಏಪ್ರಿಲ್‌ ಮಧ್ಯಾವಧಿಯಿಂದ ಶುರುವಾಗಿ ಮೇ ಆದಿವರೆಗೆ ಐದು ಅಥವಾ ಆರು ಹಂತಗಳಲ್ಲಿ ಮತದಾನ ನಡೆಯಲಿದೆ.

‘ಮತದಾನದ ವೇಳಾಪಟ್ಟಿ ಫೆಬ್ರುವರಿ ಕೊನೆ ಅಥವಾ ಮಾರ್ಚ್‌ ಆರಂಭದಲ್ಲಿ ಹೊರಬೀಳಲಿದೆ’ ಎಂದು ಚುನಾವಣಾ ಆಯೋಗದ ಉನ್ನತ ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆ ಜತೆಯ­ಲ್ಲಿಯೇ ಆಂಧ್ರಪ್ರದೇಶ, ಒಡಿಶಾ ಹಾಗೂ ಸಿಕ್ಕಿಂ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಕೂಡ ನಡೆಯಲಿವೆ.

ವೇಳಾಪಟ್ಟಿ ಹೊರಬೀಳುವ ಮುನ್ನ ಲೇಖಾನುದಾನಕ್ಕೆ ಅನು ಮೋದನೆ ನೀಡಲು ಲೋಕಸಭೆಯ ಕೊನೆಯ ಅಧಿವೇಶನ ನಡೆ ಯಲಿದೆ. ಹೊಸದಾಗಿ ಅಸ್ತಿತ್ವಕ್ಕೆ ಬರುವ ಸರ್ಕಾರವೇ ಈ ಬಾರಿಯ ಬಜೆಟ್‌ ಮಂಡಿಸಲಿದೆ. ಈ ನಡುವೆ, ಭ್ರಷ್ಟಾಚಾರ ನಿಗ್ರಹ ಕಾಯಿದೆ ಅನುಮೋದನೆಗಾಗಿ ಶೀಘ್ರವೇ ಸಂಸತ್‌ ವಿಶೇಷ ಅಧಿವೇಶ ನಡೆಯುವ ಸಂಭವ ಕೂಡ ಇದೆ.

ಸಾರ್ವತ್ರಿಕ ಚುನಾವಣೆಯನ್ನು ಐದು ಹಂತಗಳಲ್ಲಿ ನಡೆಸಬೇಕೇ ಅಥವಾ ಮತ್ತೊಂದು ಹಂತ ಬೇಕಾಗುತ್ತದೆಯೇ ಎನ್ನುವುದನ್ನು ಆಯೋಗ ಪರಿಶೀಲಿ­ಸುತ್ತಿದೆ.

‘ಹೊಸ ಮತದಾರರೂ ಸೇರಿ ಸುಮಾರು 80 ಕೋಟಿ ಜನರು ಈ ಬಾರಿ ಹಕ್ಕು ಚಲಾಯಿಸಲಿದ್ದಾರೆ. ಮತದಾರರ ಪಟ್ಟಿಯು ಪರಿಷ್ಕರಣೆ ಹಂತದಲ್ಲಿದ್ದು, ಈ ತಿಂಗಳ ಅಂತ್ಯ­ದೊಳಗೆ  ಸಿದ್ಧವಾಗುತ್ತದೆ’ ಎಂದು  ಮೂಲಗಳು ವಿವರಿಸಿವೆ.

ಘೋಷಣೆಗೆ ಸಿದ್ಧತೆ: ಈ ನಡುವೆ, ವೇಳಾಪಟ್ಟಿ ಪ್ರಕಟಿಸುವುದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ.  ಇದಕ್ಕೂ ಮುನ್ನ, ಕೇಂದ್ರ ಅರೆ ಸೇನಾ ಪಡೆ ನಿಯೋಜನೆ ಸಂಬಂಧ  ಕೇಂದ್ರ ಗೃಹ ಕಾರ್ಯದರ್ಶಿ­ಯೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾ­ಗುತ್ತದೆ.

ಚುನಾವಣೆ ಕಾರ್ಯಕ್ಕೆ, ಆಯಾ ರಾಜ್ಯಗಳಲ್ಲಿನ ಪೊಲೀಸ್‌್ ಪಡೆ ಲಭ್ಯತೆ ಪರಿಶೀಲನೆಗೆ ವಿವಿಧ ರಾಜ್ಯಗಳ  ಮುಖ್ಯ ಚುನಾವಣಾ ಅಧಿಕಾರಿಗಳು, ಪೊಲೀಸ್‌್ ಮಹಾ ನಿರ್ದೇಶಕರ ಜತೆ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ‘ಭದ್ರತಾ ಸಿಬ್ಬಂದಿ ಲಭ್ಯತೆ ಕುರಿತು ಆಯೋಗವು ಕೇಂದ್ರ ಗೃಹ ಕಾರ್ಯದರ್ಶಿ ಜತೆ ಅಂತಿಮ ಸುತ್ತಿನ ಮಾತುಕತೆ ನಡೆಸಲಿದೆ’ ಎಂದೂ ಮೂಲಗಳು ಹೇಳಿವೆ.

ಚುನಾವಣೆ ಕೆಲಸಕ್ಕೆ ನಿಯೋಜನೆ­ಗೊಳ್ಳುವ ಸರ್ಕಾರಿ ನೌಕರರ ಮಾಹಿತಿ ಕೂಡ ಸಿದ್ಧವಾಗಿದೆ. ಕನಿಷ್ಠ 55 ಲಕ್ಷ ಸಿಬ್ಬಂದಿ ಬೇಕಾಗ­ಬಹುದು. ಸೂಕ್ಷ್ಮ ಮತಗಟ್ಟೆಗಳಲ್ಲಿ ವೀಕ್ಷಕರಾಗಿ ನಿಯೋಜನೆಗೊಳ್ಳುವ ಕೇಂದ್ರ ಸರ್ಕಾರಿ ನೌಕರರ ಪಟ್ಟಿಯೂ ಅಂತಿಮ ಹಂತದಲ್ಲಿದೆ.

ಅಲ್ಲದೇ, ಎಲ್ಲೆಲ್ಲಿ ಮತಗಟ್ಟೆಗಳನ್ನು ತೆರೆಯಬೇಕು ಎನ್ನುವುದನ್ನು ಆಯೋಗ ಪರಾಮರ್ಶಿಸುತ್ತಿದೆ.  ದೇಶದಾದ್ಯಂತ ಕನಿಷ್ಠ 8 ಲಕ್ಷ ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಈ ವಿಷಯವಾಗಿ, ಚುನಾ ವಣಾ ಸಿಬ್ಬಂದಿ ಹಾಗೂ ಮತದಾರರ ಅನುಕೂಲ ನೋಡಿಕೊಂಡು ಕಡೆ ಗಳಿಗೆಯ ಬದಲಾವಣೆ ಮಾಡಲಾಗುತ್ತದೆ.

12 ಲಕ್ಷ ಮತಯಂತ್ರ: ಈ ಬಾರಿ ಚುನಾವಣೆಯಲ್ಲಿ ಸುಮಾರು 12 ಲಕ್ಷ ವಿದ್ಯುನ್ಮಾನ ಮತಯಂತ್ರಗಳನ್ನು ಅಳವಡಿಸುವ ದಿಸೆಯಲ್ಲಿ ತಯಾರಿ ನಡೆಯುತ್ತಿದೆ. ಹೊಸದಾಗಿ 2.5 ಲಕ್ಷ ಯಂತ್ರಗಳನ್ನು ಖರೀದಿಸಲಾಗುತ್ತದೆ.

ಕಳೆದ ಚುನಾವಣೆ ವಿವರ:  ಕಳೆದ ಬಾರಿ ಲೋಕಸಭೆ ಚುನಾವಣೆ ವೇಳಾಪಟ್ಟಿ 2009ರ ಮಾರ್ಚ್‌ 2ರಂದು ಪ್ರಕಟವಾಗಿತ್ತು.

2009ರ ಏಪ್ರಿಲ್‌  16ರಿಂದ ಮೇ 13ರವರೆಗೆ ಐದು ಹಂತಗಳಲ್ಲಿ ಮತದಾನ ನಡೆದಿತ್ತು. ಮೇ 16ರಂದು ಫಲಿತಾಂಶ ಹೊರಬಿದ್ದಿತ್ತು. ಆಗಿನ ಮತದಾರರ ಸಂಖ್ಯೆ ಸುಮಾರು 71 ಕೋಟಿ.  2004ರ ಲೋಕಸಭೆ ಚುನಾವಣೆಯಲ್ಲಿ 67 ಕೋಟಿ ಮತದಾರರು ಇದ್ದರು.

ಬಹುಹಂತದ ಚುನಾವಣೆ: ‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಭಾರತಕ್ಕೆ ಬಹು ಹಂತದ ಚುನಾ­ವಣೆಯೇ ಸೂಕ್ತ’ ಎನ್ನುತ್ತಾರೆ ಚುನಾವಣಾ ಅಧಿಕಾರಿಗಳು. 1971­ರಿಂದ ಈವರೆಗೆ  ಒಂದೇ ಹಂತದ ಚುನಾವಣೆ ನಡೆದಿಲ್ಲ.

ಮೂರು ತಿಂಗಳ ಪ್ರಕ್ರಿಯೆ: ಲೋಕಸಭೆ ಚುನಾವಣೆ ಪ್ರಕ್ರಿಯೆಗೆ ಸುಮಾರು ಮೂರು ತಿಂಗಳು ಬೇಕಾಗುತ್ತದೆ.  ಮೊದಲ ಹಂತದ ಮತದಾನದ ವೇಳಾಪಟ್ಟಿ ಘೋಷಣೆ­ಯಾದ ಆರು ವಾರಗಳಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.