ADVERTISEMENT

ಏರ್ ಇಂಡಿಯಾ ಬಿಕ್ಕಟ್ಟು: ಸಂಘಟನೆ ಜತೆ ಇಂದು ಮಾತುಕತೆ

​ಪ್ರಜಾವಾಣಿ ವಾರ್ತೆ
Published 20 ಮೇ 2012, 19:30 IST
Last Updated 20 ಮೇ 2012, 19:30 IST

ನವದೆಹಲಿ (ಪಿಟಿಐ): ಏರ್ ಇಂಡಿಯಾ ಪೈಲಟ್‌ಗಳ ಮುಷ್ಕರ ಭಾನುವಾರ 13ನೇ ದಿನಕ್ಕೆ ಕಾಲಿಟ್ಟಿದ್ದು, ಬಿಕ್ಕಟ್ಟು ಪರಿಹಾರಕ್ಕೆ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಸೋಮವಾರ ಏರ್ ಇಂಡಿಯಾ ಕಾರ್ಮಿಕ ಸಂಘಟನೆಗಳ ನಾಯಕರ ಜತೆ ಮಾತುಕತೆ ನಡೆಸಲಿದ್ದಾರೆ.

ಏರ್ ಇಂಡಿಯಾದಿಂದ ಮಾನ್ಯತೆ ಪಡೆದ 13 ಕಾರ್ಮಿಕ ಸಂಘಟನೆಗಳ ಜತೆ ಸಿಂಗ್ ಚರ್ಚೆ ನಡೆಸಲಿದ್ದು, `ಕಾರ್ಮಿಕ ಸಂಘಟನೆಗಳು ತಮ್ಮ ಸಂಸ್ಥೆಯ ಸ್ಥಿತಿಗತಿಯನ್ನು ಸಹ ಗಮನಿಸಬೇಕು. ಇದು ಸ್ಪರ್ಧೆಯ ಯುಗ~ ಎಂದು ಹೇಳಿದ್ದಾರೆ.

ಏರ್ ಇಂಡಿಯಾದ 200ಕ್ಕೂ ಹೆಚ್ಚು ಪೈಲಟ್‌ಗಳು ಪ್ರಸ್ತುತ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.
ಕೆಲಸಕ್ಕೆ ವಾಪಸಾಗುವಂತೆ ಇಂಡಿಯನ್ ಪೈಲಟ್ ಗಿಲ್ಡ್ (ಐಪಿಜಿ)ಗೆ ಸೇರಿದ ಪೈಲಟ್‌ಗಳಿಗೆ ಸಚಿವರು ಮಾಡಿಕೊಂಡ ಮನವಿಗೆ ಆ ಒಕ್ಕೂಟ ಕಿವಿಗೊಟ್ಟಿಲ್ಲ.
 
71 ಪೈಲಟ್‌ಗಳ ವಿರುದ್ಧದ ವಜಾ ಆದೇಶ ಹಿಂದಕ್ಕೆ ಪಡೆಯಬೇಕು ಹಾಗೂ ಬಡ್ತಿಗೆ ಸಂಬಂಧಿಸಿದ ವಿಷಯಗಳನ್ನು ಕೂಡಲೇ ಇತ್ಯರ್ಥಗೊಳಿಸಬೇಕು ಎಂದು ಮುಷ್ಕರನಿರತರು ಪಟ್ಟು ಹಿಡಿದಿದ್ದಾರೆ.
 
`ಐಪಿಜಿ~ಗೆ ನೀಡಿರುವ ಮಾನ್ಯತೆಯನ್ನು ಏರ್ ಇಂಡಿಯಾ ರದ್ದುಗೊಳಿಸಿದ್ದು, ಸೋಮವಾರದ ಸಭೆಗೆ ಈ ಸಂಘಟನೆಯನ್ನು ಆಹ್ವಾನಿಸಿಲ್ಲ. ಕಮರ್ಷಿಯಲ್ ಪೈಲಟ್‌ಗಳ ಸಂಘಟನೆ, ಕ್ಯಾಬಿನ್ ಸಿಬ್ಬಂದಿ, ವಿಮಾನ ನಿಲ್ದಾಣ ಸಿಬ್ಬಂದಿ ಹಾಗೂ ಇತರ ನೌಕರರನ್ನು ಪ್ರತಿನಿಧಿಸುವ ಸಂಘಟನೆಗಳ ಜತೆ ಮಾತ್ರ ಸಚಿವರು ಮಾತುಕತೆ ನಡೆಸಲಿದ್ದಾರೆ.

ಪೈಲಟ್‌ಗಳು ಅನಾರೋಗ್ಯದ ಕಾರಣ ನೀಡಿ ಗೈರುಹಾಜರಾದ ಕಾರಣ ಈವರೆಗೆ ಏರ್ ಇಂಡಿಯಾಕ್ಕೆ 200 ಕೋಟಿ ರೂಪಾಯಿ ನಷ್ಟವಾಗಿದೆ.

ಸೋಮವಾರ ಈ ಮುಷ್ಕರ 14ನೇ ದಿನಕ್ಕೆ ತಲುಪಿರುವ ಕಾರಣ ಬೆಂಗಳೂರು, ದೆಹಲಿ, ಜೋಹ್ರಾಟ್‌ಗಳಲ್ಲಿ ಭಾರತೀಯ ವಾಯುಪಡೆಯ ವೈದ್ಯಕೀಯ ಸಂಸ್ಥೆಗಳಲ್ಲಿ ಪೈಲಟ್‌ಗಳ ಸಂಪೂರ್ಣ ಆರೋಗ್ಯ ತಪಾಸಣೆಗಾಗಿ ವ್ಯವಸ್ಥೆ ಮಾಡಲಾಗಿದೆ.

453 ಕೋಟಿಗಳ ತೆರಿಗೆ ಬಾಕಿ ಪಾವತಿಗೆ ಕ್ರಮ
ನವದೆಹಲಿ (ಪಿಟಿಐ):
ತೆರಿಗೆಗಳು ಮತ್ತು ವಾಣಿಜ್ಯ ಸುಂಕಗಳನ್ನು ಪಾವತಿಸದ ಕಾರಣಕ್ಕಾಗಿ ತನ್ನ ಬ್ಯಾಂಕ್ ಖಾತೆಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡ ಐದು ತಿಂಗಳ ನಂತರ ಆರ್ಥಿಕ ಸಂಕಷ್ಟದಲ್ಲಿರುವ ಏರ್ ಇಂಡಿಯಾವು ಸುಮಾರು 454 ಕೋಟಿ ರೂಪಾಯಿಗಳ ಬಾಕಿ ಮಾಡಿದ್ದು, ಆದರೆ ಸರ್ಕಾರದಿಂದ ಬಂಡವಾಳದ ನೆರವು ಸಿಕ್ಕಿದ ಕೂಡಲೇ ಇದನ್ನು ಪಾವತಿಸುವ ಭರವಸೆ ನೀಡಿದೆ.

ಏರ್ ಇಂಡಿಯಾ ಒಟ್ಟಾರೆ 395 ಕೋಟಿಗಳ ಸೇವಾ ತೆರಿಗೆ ಬಾಕಿ ಹೊಂದಿದ್ದು, ಇದರ ಮೇಲೆ ಶೇ 15ರ ಬಡ್ಡಿ ವಸೂಲಿ ಮಾಡಲಾಗುತ್ತಿದೆ. ಹೀಗಾಗಿ ಒಟ್ಟು  454 ಕೋಟಿಗಳನ್ನು ಸಂಸ್ಥೆ ಪಾವತಿಸಬೇಕಿದೆ. ಸರ್ಕಾರದಿಂದ ಬಂಡವಾಳ ನೆರವು ಲಭಿಸಿದ ಕೂಡಲೇ ಸಂಸ್ಥೆ ಬಾಕಿ ಪಾವತಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.