ADVERTISEMENT

ಐಎಸಿ ಸದಸ್ಯರ ಕುರಿತ ಆರೋಪ: ಸ್ವತಃ ತನಿಖಾ ತಂಡ ರಚನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 11:30 IST
Last Updated 19 ಅಕ್ಟೋಬರ್ 2012, 11:30 IST
ಐಎಸಿ ಸದಸ್ಯರ ಕುರಿತ ಆರೋಪ: ಸ್ವತಃ ತನಿಖಾ ತಂಡ ರಚನೆ
ಐಎಸಿ ಸದಸ್ಯರ ಕುರಿತ ಆರೋಪ: ಸ್ವತಃ ತನಿಖಾ ತಂಡ ರಚನೆ   

ನವದೆಹಲಿ (ಪಿಟಿಐ): ಭ್ರಷ್ಟಾಚಾರ ವಿರುದ್ಧ ಭಾರತ (ಐಎಸಿ) ಸಂಘಟನೆಯ ಪ್ರಮುಖ ಸದಸ್ಯರಾದ ಪ್ರಶಾಂತ ಭೂಷಣ್ ಮತ್ತು ಅಂಜಲಿ ದಮಾನಿಯಾ ಮತ್ತಿತರರ ವಿರುದ್ಧ ಮಾಡಲಾಗಿರುವ ಆರೋಪ ಪ್ರಕರಣಗಳ ಕುರಿತು ತನಿಖೆ ನಡೆಸಲು ಸ್ವತಃ ಭ್ರಷ್ಟಾಚಾರ ಭ್ರಷ್ಟಾಚಾರ ವಿರೋಧಿ ಸಂಘಟನೆಯೇ ಶುಕ್ರವಾರ ನಿವೃತ್ತ ನ್ಯಾಯಮೂರ್ತಿಗಳ ತ್ರಿಸದಸ್ಯರ ಸಮಿತಿಯನ್ನು ಶುಕ್ರವಾರ ರಚಿಸಿದೆ.

ದೆಹಲಿ ಹೈಕೋರ್ಟಿನ ಹಿಂದಿನ  ಮುಖ್ಯ ನ್ಯಾಯಮೂತ್ತಿ ಎಪಿ ಷಾ, ಬಾಂಬೆ ಹೈಕೋರ್ಟಿನ ನ್ಯಾಯಮೂರ್ತಿ ಬಿಎಚ್ ಮಾರ್ಲಪಲ್ಲೆ (ನಿವೃತ್ತ) ಮತ್ತು ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿ ಜಸ್ಪಾಲ್ ಸಿಂಗ್ (ನಿವೃತ್ತ) ಅವರು ಇನ್ನೂ ಹಸರು ಇಡದ ಅರವಿಂದ ಕೇಜ್ರಿವಾಲ್ ಅವರ ಪಕ್ಷದ ಆಂತರಿಕ ಲೋಕಪಾಲರಾಗಿರುತ್ತಾರೆ.

ಈ ವಿಚಾರವನ್ನು ಶುಕ್ರವಾರ ಇಲ್ಲಿ ಪ್ರಕಟಿಸಿದ ಕೇಜ್ರಿವಾಲ್ ಅವರು ~ಪ್ರಶಾಂತ ಭೂಷಣ್ ಅವರು ಹಿಮಾಚಲ ಪ್ರದೇಶದಲ್ಲಿ ಭೂ ಖರೀದಿಯಲ್ಲಿ ಅಕ್ರಮ ಎಸಗಿದ್ದಾರೆಂದೂ, ಮಯಾಂಕ ಗಾಂಧಿ ಅವರಿಗೆ ಕಟ್ಟಡ ನಿರ್ಮಾಣಗಾರರ ಜೊತೆಗೆ ಸಂಪರ್ಕ ಇದೆಯೆಂದೂ ಆಪಾದಿಸಲಾಗಿದೆ. ಇದೇ ರೀತಿ ಅಂಜಲಿ ದಮಾನಿಯಾ ಅವರ ವಿರುದ್ಧ ಮಹಾರಾಷ್ಟ್ರದಲ್ಲಿನ ಭೂ ವ್ಯವಹಾರಗಳ ಬಗ್ಗೆ ಪ್ರಶ್ನಿಸಲಾಗಿದೆ~ ಎಂದು ಹೇಳಿದರು.

ಈ ವಿಷಯದ ಬಗ್ಗೆ ತನಿಖೆ ನಡೆಸಲು ಸ್ವತಂತ್ರ ತನಿಖಾ ಸಂಸ್ಥೆಯನ್ನು ರಚಿಸುವಂತೆ ನಾವು ನಿರಂತರವಾಗಿ ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದೇವೆ. ತಪ್ಪು ಸಾಬೀತಾದರೆ ನಿಗದಿತ ಶಿಕ್ಷೆಯ ಇಮ್ಮಡಿ ಶಿಕ್ಷೆ ಕೊಡಿ ಎಂದೂ ಕೇಳಿದ್ದೇವೆ. ಆದರೆ ದುರದೃಷ್ಟಕರ ಎಂದರೆ ಸರ್ಕಾರವು ಸ್ವತಂತ್ರ ತನಿಖಾ ಸಂಸ್ಥೆ ರಚಿಸುವುದಕ್ಕಿಂತಲೂ ಕೆಸರೆರಚಾಟ ನಡೆಸುವುದರಲ್ಲೇ ಹೆಚ್ಚು ಆಸಕ್ತವಾಗಿದೆ ಎಂದು ಅವರು ಟೀಕಿಸಿದರು.

ಈ ಹಿನ್ನೆಲೆಯಲ್ಲೇ ಅತ್ಯಂತ ಪ್ರಾಮಾಣಿಕರೆಂದು ಖ್ಯಾತಿ ಪಡೆದಿರುವ ನಿವೃತ್ತ ನ್ಯಾಯಮೂರ್ತಿಗಳನ್ನು ಒಳಗೊಂಡ ಸ್ವತಂತ್ರ ತನಿಖಾ ಸಂಸ್ಥೆಯನ್ನು ಭ್ರಷ್ಟಾಚಾರ ವಿರುದ್ಧ ಭಾರತ ಸಂಘಟನೆಯ ಪ್ರಮುಖ ಸದಸ್ಯರ ಕುರಿತ  ಆರೋಪಗಳ ತನಿಖೆಗಾಗಿ ರಚಿಸುತ್ತಿದ್ದೇವೆ. ಅವರು ಭೂಷಣ್, ಗಾಂಧಿ ಮತ್ತು ದಮಾನಿಯಾ ಅವರ ಬಗ್ಗೆ ತನಿಖೆ ನಡೆಸುವರು. ಸೋಮವಾರ ಪ್ರಕರಣಗಳನ್ನು ನಿವೃತ್ತ ನ್ಯಾಯಮೂರ್ತಿಗಳಿಗೆ ಒಪ್ಪಿಸಿ ಮೂರು ತಿಂಗಳ ಒಳಗೆ ತನಿಖಾ ವರದಿ ನೀಡುವಂತೆ ಕೋರುತ್ತೇವೆ. ತಪ್ಪಿತಸ್ಥರೆಂದು ಸಾಬೀತಾದವರು ಪ್ರಸ್ತಾಪಿತ ರಾಜಕೀಯ ಪಕ್ಷಕ್ಕೆ ರಾಜೀನಾಮೆ ನೀಡುವ ನಿರೀಕ್ಷೆಯಿದೆ ಎಂದು ಕೇಜ್ರಿವಾಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.