ADVERTISEMENT

ಐರ್ಲೆಂಡ್‌ಗೆ ಎಚ್ಚರಿಕೆ ಗಂಟೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2012, 19:30 IST
Last Updated 16 ನವೆಂಬರ್ 2012, 19:30 IST
ಐರ್ಲೆಂಡ್‌ಗೆ ಎಚ್ಚರಿಕೆ ಗಂಟೆ
ಐರ್ಲೆಂಡ್‌ಗೆ ಎಚ್ಚರಿಕೆ ಗಂಟೆ   

ನವದೆಹಲಿ/ಲಂಡನ್ (ಪಿಟಿಐ): ಡಾ. ಸವಿತಾ ಹಾಲಪ್ಪನವರ ದುರಂತ ಸಾವಿನ ವಿರುದ್ಧ ವಿಶ್ವದಾದ್ಯಂತ ಆಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ, ಈ ಘಟನೆಯು ಐರ್ಲೆಂಡ್ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಸ್ಥಳೀಯ ಸಂಸದೆ ಅಭಿಪ್ರಾಯಪಟ್ಟಿದ್ದರೆ, ಇತ್ತ ಸ್ವದೇಶದಲ್ಲಿ ಕೇಂದ್ರ ಸರ್ಕಾರವು ಆ ದೇಶದ ರಾಯಭಾರಿ ಅವರನ್ನು ಕರೆಯಿಸಿ ತನ್ನ ಆಘಾತ ದಾಖಲಿಸಿದೆ.

ಸವಿತಾ ದುರಂತ ಸಾವಿನ ಘಟನೆ  ಕುರಿತು ಐರ್ಲೆಂಡ್ ಸರ್ಕಾರದ ಜೊತೆ ಚರ್ಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ರಾಯಭಾರಿ ಗಮನಕ್ಕೆ ಕಳವಳ: ದಂತವೈದ್ಯೆ ಡಾ. ಸವಿತಾ ಹಾಲಪ್ಪನವರ ಅಕಾಲಿಕ, ಯಾತನಾಮಯ ಸಾವಿನ ಪ್ರಕರಣ ಕುರಿತು ಕೇಂದ್ರ ಸರ್ಕಾರವು ಶುಕ್ರವಾರ ಐರ್ಲೆಂಡ್ ರಾಯಭಾರಿ ಮೆಕ್‌ಲಾಗ್ಲಿನ್ ಅವರನ್ನು ಕರೆಯಿಸಿ ತನ್ನ ತೀವ್ರ ಕಳ ವಳ ಮತ್ತು ಆಕ್ರೋಶ  ವ್ಯಕ್ತಪಡಿಸಿತು.

ಯುವ ಜೀವವೊಂದು ಅಕಾಲಿಕ ಮರಣ ಹೊಂದಿರುವುದು ತುಂಬ ಬೇಸರ ಮೂಡಿಸಿದೆ ಎಂದು ರಾಯಭಾರಿ ಫೀಲಿಮ್ ಮೆಕ್‌ಲಾಗ್ಲಿನ್ ಅವರೊಂದಿಗೆ ನಡೆಸಿದ ಮಾತುಕತೆ ವೇಳೆ ವಿದೇಶಾಂಗ ವ್ಯವಹಾರ ಸಚಿವಾಲಯದ (ಪಶ್ಚಿಮ) ಕಾರ್ಯದರ್ಶಿ ಮಧುಸೂದನ್ ಗಣಪತಿ ಅವರು ಸರ್ಕಾರದ ಅಸಮಾಧಾನ ದಾಖಲಿಸಿದರು.

ಸಾವಿನ ಪ್ರಕರಣ ಕುರಿತು ನಡೆಯುತ್ತಿರುವ ತನಿಖೆಗೆ ಐರ್ಲೆಂಡ್ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮೆಕ್ ರಾಯಭಾರಿ ಭರವಸೆ ನೀಡಿದರು. ತನಿಖೆಯ ಪ್ರಗತಿಯ ಸಂಪೂರ್ಣ ಮಾಹಿತಿಗಳು ಡಬ್ಲಿನ್‌ನಲ್ಲಿನ  ಭಾರತೀಯ ರಾಯಭಾರಿಗೆ ದೊರೆಯುವ ವಿಶ್ವಾಸವನ್ನೂ ಅವರು  ವ್ಯಕ್ತಪಡಿಸಿದರು.

ಐರ್ಲೆಂಡ್‌ನಲ್ಲಿನ ಭಾರತೀಯ ರಾಯಭಾರಿಯು, ಅಲ್ಲಿನ  ಸರ್ಕಾರದೊಂದಿಗೂ ಮಾತುಕತೆ ನಡೆಸಿದ್ದಾರೆ.

ಮಹಿಳಾ ಆಯೋಗ ಆಗ್ರಹ: ಭಾರತ ಸರ್ಕಾರವು ಈ ಬಗ್ಗೆ ಐರ್ಲೆಂಡ್ ಸರ್ಕಾರದ ಜತೆ ಚರ್ಚೆಗೆ ಮುಂದಾಗಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಆಗ್ರಹಿಸಿದೆ.

ಬಿಜೆಪಿ ಒತ್ತಾಯ: ಸವಿತಾ ಸಾವಿನ ಕುರಿತು ಎಲ್ಲೆಡೆ ಎದ್ದಿರುವ ಆಕ್ರೋಶದ ನಡುವೆ ಐರ್ಲೆಂಡ್ ರಾಯಭಾರಿ ಅವರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ, ಸಂತ್ರಸ್ತ ಕುಟುಂಬಕ್ಕೆ ಕೂಡಲೇ ನ್ಯಾಯ ಒದಗಿಸುವಂತೆ ಒತ್ತಾಯಿಸಿತು.

ಆಸ್ಪತ್ರೆ ವೈದ್ಯಾಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹಿಸಿದ ನಿಯೋಗ, ಒಂದು ವೇಳೆ ಗರ್ಭಪಾತ ನಡೆದಿದ್ದಲ್ಲಿ ಸವಿತಾ ಬದುಕುಳಿಯುತ್ತಿದ್ದರು ಎಂದು ತಿಳಿಸಿತು.

ಕಾನೂನುಬದ್ಧ ಗರ್ಭಪಾತಕ್ಕೆ ಕಾಯ್ದೆ: ಐರ್ಲೆಂಡ್ ಸಂಸದೆ (ಲಂಡನ್ ವರದಿ): ಭಾರತೀಯ ದಂತ ವೈದ್ಯೆ ಸವಿತಾ ಹಾಲಪ್ಪನವರ ಅವರ ದುರಂತ ಸಾವು ದೇಶಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಕಾನೂನು ಬದ್ಧ ಗರ್ಭಪಾತಕ್ಕೆ ಅಗತ್ಯವಾದ ಶಾಸನ ರೂಪಿಸಬೇಕು ಎಂದು ಐರ್ಲೆಂಡ್ ಸಂಸತ್ (ಸೆನೆಟ್) ಸದಸ್ಯೆ  ಇವಾನಾ  ಬ್ಯಾಕಿಕ್ ಹೇಳಿದ್ದಾರೆ.

`ಐರಿಶ್ ಟೈಮ್ಸ~ ಪತ್ರಿಕೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಬ್ಯಾಕಿಕ್, `ಇನ್ನು ಮುಂದೆ ಇಂತಹ ನಿಷ್ಕ್ರಿಯತೆಗೆ ಅವಕಾಶ ಇರಬಾರದು. ಇದುವರೆಗೂ ಆಡಳಿತ ನಡೆಸಿದ ಸರ್ಕಾರಗಳು ಕಾನೂನು ಬದ್ಧ ಗರ್ಭಪಾತಕ್ಕೆ ಅಗತ್ಯ ಶಾಸನ ರಚಿಸಲು ವಿಫಲವಾಗಿವೆ. ಇದರಿಂದ ದೇಶದ ಮಹಿಳೆಯರು ಸಾಕಷ್ಟು ನಲುಗಿದ್ದಾರೆ. ಮಹಿಳೆಯರ ಈ ನೋವಿಗೆ ಮಂಗಳ ಹಾಡಲೇ ಬೇಕು~ ಎಂದಿದ್ದಾರೆ.

`ಪತ್ನಿ ಕಳೆದುಕೊಂಡ ಪ್ರವೀಣ್ ಹಾಲಪ್ಪನವರ ಅವರಿಗೆ ಇಡೀ ರಾಷ್ಟ್ರ ಸಂತಾಪ ವ್ಯಕ್ತಪಡಿಸಿದೆ. ಜೊತೆಗೆ ಕಾನೂನಿನಲ್ಲಿರುವ ಲೋಪದ ಬಗ್ಗೆ ದೇಶವ್ಯಾಪಿ ಆಕ್ರೋಶ ಭುಗಿಲೆದ್ದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಐರ್ಲೆಂಡ್ ತಲೆತಗ್ಗಿಸುವಂತಹ ಸನ್ನಿವೇಶ ಉಂಟಾಗಿದೆ. ಯುವ ಗೃಹಿಣಿಯ ಜೀವ ರಕ್ಷಿಸಲು ವಿಫಲವಾಗಿದ್ದು ನಿಜಕ್ಕೂ ಅವಮಾನಕರ~ ಎಂದು ಅವರು `ಐರಿಶ್ ಟೈಮ್ಸ~ನಲ್ಲಿ ಬರೆದಿದ್ದಾರೆ. `1983ರಲ್ಲಿ ಸಂವಿಧಾನಕ್ಕೆ ತಂದ ತಿದ್ದುಪಡಿಯೊಂದರಲ್ಲಿ ಗರ್ಭಿಣಿ ಮತ್ತು ಭ್ರೂಣ ಎರಡಕ್ಕೂ ಜೀವ ಇದೆ ಎಂದು ವ್ಯಾಖ್ಯಾನಿಸಲಾಗಿದೆ. ಈ ಶಾಸನಕ್ಕೆ ಕ್ಯಾಥೊಲಿಕ್ ಚರ್ಚ್‌ಗಳ ಒತ್ತಾಸೆಯೂ ಇದೆ. 30 ವರ್ಷ ಕಳೆದರೂ ಈ ಕಾನೂನು ಜಾರಿಯಲ್ಲಿರುವುದು ಸೋಜಿಗ. ಗರ್ಭಪಾತದ ವಿಷಯದಲ್ಲಿ ದೇಶದ ಕಾನೂನು ಇನ್ನಾದರೂ ಸುಧಾರಣೆಗೊಳ್ಳಬೇಕಿದೆ~ ಎಂದಿದ್ದಾರೆ.

`ಸವಿತಾರನ್ನು ಉಳಿಸಬಹುದಿತ್ತು~
ಸವಿತಾ ಅವರಿಗೆ ಅಗತ್ಯವಾಗಿದ್ದ ವೈದ್ಯಕೀಯ ಕಾರ್ಯ ವಿಧಾನ ಅನುಸರಿಸಿದ್ದರೆ ಅವರನ್ನು ಉಳಿಸಬಹುದಾಗಿತ್ತು ಎಂದು ಭಾರತೀಯ ಮೂಲದ ಬ್ರಿಟನ್ ಸಂಸದ ವೀರೇಂದ್ರ ಶರ್ಮಾ ಅಭಿಪ್ರಾಯ ಪಟ್ಟಿದ್ದಾರೆ.

ವೈದ್ಯಕೀಯ ಸೇವೆಗಳ ಅಗತ್ಯಕ್ಕಿಂತಲೂ ಧಾರ್ಮಿಕ ಮನೋಭಾವಗಳು ಪ್ರಮುಖವಾಗುತ್ತಿದೆ ಎಂದು ಅವರು ನೀಡಿರುವ ಹೇಳಿಕೆಯಲ್ಲಿ ವಿಷಾದಿಸಿದ್ದಾರೆ.

ಸವಿತಾ ಹಾಲಪ್ಪನವರ ಅವರ ದುರಂತ ಸಾವಿನ ಬಗ್ಗೆ ಕೈಗೊಂಡಿರುವ ಎರಡು ತನಿಖೆಗಳು ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲವು ಎಂದಿದ್ದಾರೆ.

ಕೇಂದ್ರಕ್ಕೆ
ಸಿಎಂ ಪತ್ರ
(ಬೆಂಗಳೂರು ವರದಿ): ಸೂಕ್ತ ವೈದ್ಯಕೀಯ ನೆರವು ದೊರೆಯದೆ ಡಾ. ಸವಿತಾ ಹಾಲಪ್ಪನವರ ಅವರು ಸಾವನ್ನಪ್ಪಿದ ಘಟನೆ ಕುರಿತು ಐರ್ಲೆಂಡ್ ಸರ್ಕಾರದ ಜೊತೆ ಚರ್ಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ಸವಿತಾ ಅವರ ತಂದೆ ಅಂದಾನಪ್ಪ ಯಲಗಿ ಅವರಿಗೆ ಈ ಸಂಬಂಧ ಪತ್ರ ಬರೆದಿರುವ ಶೆಟ್ಟರ್, `ಭಾರತೀಯ ರಾಯಭಾರಿ ಮೂಲಕ ಐರ್ಲೆಂಡ್ ಸರ್ಕಾರದ ಜೊತೆ ಚರ್ಚೆ ನಡೆಸಲು ಕೇಂದ್ರವನ್ನು ಒತ್ತಾಯಿಸುತ್ತೇನೆ. ಈ ವಿಷಯದಲ್ಲಿ ನಿಮಗೆ ಅಗತ್ಯವಿರುವ ಎಲ್ಲ ನೆರವು ನೀಡಲು ಸರ್ಕಾರ ಸಿದ್ಧ~ ಎಂದು ಅವರು ತಿಳಿಸಿದ್ದಾರೆ.

ಧಾರ್ಮಿಕ ಕಾರಣ ಮುಂದೊಡ್ಡಿದ ಐರಿಷ್ ವೈದ್ಯರು ಸೂಕ್ತ ಚಿಕಿತ್ಸೆ ನೀಡಲು ಮುಂದಾಗಲಿಲ್ಲ. ಇದರಿಂದಾಗಿ ಸವಿತಾ ಪ್ರಾಣ ತೆರಬೇಕಾಯಿತು. ಅವರ ಸಾವಿಗೆ ಕಾರಣವಾದ ಸಂಗತಿಗಳು ಆಘಾತ ಉಂಟುಮಾಡುತ್ತವೆ ಎಂದು ಮುಖ್ಯಮಂತ್ರಿಯವರು ಪತ್ರದಲ್ಲಿ ಹೇಳಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.