ADVERTISEMENT

ಒಬಾಮ ಜ.26ರ ಅತಿಥಿ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST

ನವದೆಹಲಿ: ಮುಂದಿನ ವರ್ಷದ ಗಣರಾಜ್ಯೋ­ತ್ಸವ (ಜ. 26) ಸಮಾರಂಭಕ್ಕೆ ಮುಖ್ಯ ಅತಿಥಿಯಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಆಹ್ವಾ ನಕ್ಕೆ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಒಪ್ಪಿಗೆ ಸೂಚಿ ಸಿದ್ದು, ಇದು ಮೋದಿ ಅವರ ರಾಜತಾಂತ್ರಿಕ ಗೆಲುವು ಎಂದು  ಬಣ್ಣಿಸಲಾಗುತ್ತಿದೆ.

ಇದೇ ಮೊದಲ ಬಾರಿ ಅಮೆರಿಕ ಅಧ್ಯಕ್ಷರೊಬ್ಬರು ಗಣರಾಜ್ಯೋತ್ಸವ ಸಂದರ್ಭದಲ್ಲಿ ನವದೆಹಲಿಗೆ ಬರಲಿದ್ದು, ಇತಿಹಾಸ ಸೃಷ್ಟಿಸಲಿದ್ದಾರೆ.
ಅಧಿಕಾರದಲ್ಲಿ ಇದ್ದಾಗ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ ಮೊದಲ  ಅಮೆರಿಕ ಅಧ್ಯಕ್ಷ ಎಂಬ ದಾಖಲೆಯನ್ನೂ ಬರಾಕ್‌ ಒಬಾಮ ಬರೆಯಲಿದ್ದಾರೆ. 2010ರಲ್ಲಿ ಮೊದಲ ಅವಧಿಗೆ  ಅಧ್ಯಕ್ಷರಾಗಿದ್ದಾಗ ಅವರು ಭಾರತಕ್ಕೆ ಭೇಟಿ ನೀಡಿದ್ದರು.

ಒಬಾಮ ಅವರ ಭಾರತ ಭೇಟಿ ವಿಚಾರವನ್ನು ಶ್ವೇತಭವನ ಸಹ ದೃಢಪಡಿಸಿದೆ. ವಿಶ್ವಸಂಸ್ಥೆಯ ಮಹಾ­ಅಧಿವೇಶ­ನದಲ್ಲಿ ಪಾಲ್ಗೊ­ಳ್ಳಲು ಸೆಪ್ಟೆಂಬರ್‌ನಲ್ಲಿ ಅಮೆ­ರಿಕಕ್ಕೆ ತೆರಳಿದ್ದ ಮೋದಿ ಅವರು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರ ಜತೆ ಎರಡು ದಿನ ಮಾತುಕತೆ ನಡೆಸಿದ್ದರು.
 

ರಾಜತಾಂತ್ರಿಕ ಗೆಲುವು
ಈ ಗಣರಾಜ್ಯೋತ್ಸವದಂದು ನಮ್ಮ ಸ್ನೇಹಿತರೊಬ್ಬರು ಬರುವ ನಿರೀಕ್ಷೆಯಿದೆ. ಮುಖ್ಯ ಅತಿಥಿಯಾಗಿ ಬರುವಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಆಹ್ವಾನ ನೀಡಿದ್ದೇನೆ 
- ಟ್ವಿಟರ್‌ನಲ್ಲಿ ಮೋದಿ

ದೇವಯಾನಿ ಖೋಬ್ರಾಗಡೆ ಪ್ರಕರ­ಣದ ನಂತರ ಭಾರತ ಮತ್ತು ಅಮೆರಿಕ ನಡುವೆ ಹಳಸಿದ್ದ ಸಂಬಂಧ ವನ್ನು ಸುಧಾರಿಸಲೂ ಮೋದಿ ಯತ್ನಿಸಿದ್ದರು.

ಕಳೆದ ವಾರ ಮ್ಯಾನ್ಮಾರ್‌ನಲ್ಲಿ ನಡೆದ ಪೂರ್ವ ಏಷ್ಯಾ ಶೃಂಗಸಭೆಯ ಸಂದರ್ಭದಲ್ಲಿಯೂ ಮೋದಿ ಮತ್ತು ಬರಾಕ್‌ ಒಬಾಮ ಭೇಟಿಯಾಗಿದ್ದರು. ಆ ಸಭೆಯ ಫಲಶ್ರುತಿಯಾಗಿ  ವಿಶ್ವ ವ್ಯಾಪಾರ ಸಂಘ­ಟನೆಯ ಒಪ್ಪಂದಕ್ಕೆ (ಡಬ್ಲುಟಿಒ) ಸಹಿ ಹಾಕಿ­ದಲ್ಲಿ ಭಾರತದ ಆಹಾರ ಭದ್ರತೆಗೆ ಧಕ್ಕೆಯಾಗದು ಎಂಬ ಭರವಸೆಯನ್ನು ಅಮೆರಿಕದಿಂದ ಪಡೆಯಲಾಗಿದೆ.

ವೀಸಾ ನಿರಾಕರಣೆ: ಮೋದಿ ಅವರು ಗುಜರಾತ್‌ ಮುಖ್ಯ­ಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಲವು ಬಾರಿ ಅವರಿಗೆ ಅಮೆರಿಕ ವೀಸಾ ನಿರಾಕರಿಸಲಾಗಿತ್ತು.    2002ರ ಗುಜರಾತ್‌ ಕೋಮುಗಲಭೆಯ ಕಾರಣ ಮುಂದಿಟ್ಟುಕೊಂಡು ಅಮೆರಿಕದ ಕೆಲ ಸಂಸತ್‌ ಸದ­ಸ್ಯರು ವೀಸಾ ನೀಡುವುದಕ್ಕೆ ವಿರೋಧ ವ್ಯಕ್ತಪಡಿ­ಸಿದ್ದರು.

ಈ ವರ್ಷದ ಮೇ ತಿಂಗಳಿನಲ್ಲಿ ಮೋದಿ ಅವರು ಭಾರಿ ಬಹುಮತದಿಂದ ಪ್ರಧಾನಿಯಾಗಿ ಆಯ್ಕೆಯಾದ ತಕ್ಷಣ ರಾಗ ಬದಲಿಸಿದ್ದ ಅಮೆರಿಕ, ಅವರಿಗೆ ವೀಸಾ ನೀಡುವುದಾಗಿ ಹೇಳಿತ್ತು.

ಸಾಫ್ಟ್‌ವೇರ್‌ ಎಂಜಿನಿಯರುಗಳಿಗೆ ಲಾಭ (ವಾಷಿಂಗ್ಟನ್, ಪಿಟಿಐ):  ಬರಾಕ್‌ ಒಬಾಮ ಅವರು ಶುಕ್ರ­­ವಾರ ಕಾಂಗ್ರೆಸ್‌ ಒಪ್ಪಿಗೆ ಪಡೆಯದೆ ಏಕ­ಪಕ್ಷೀಯ­ವಾಗಿ ಕಾರ್ಯಾಂಗದ ಅಧಿ­ಕಾರ­­ವನ್ನು ಬಳಸಿ, ವಿವಾ­ದಿತ ವಲಸೆ ನೀತಿಯನ್ನು ಪ್ರಕಟಿಸಿರುವುದು, ‘ಗ್ರೀನ್‌ ಕಾರ್ಡ್‌’ ಕೋರಿ ಅರ್ಜಿ ಸಲ್ಲಿಸಿದ್ದ ಭಾರತ ಮೂಲದ ಸಾವಿ­ರಾರು ಸಾಫ್ಟ್‌ವೇರ್‌ ಎಂಜಿನಿ­ಯರ್‌ಗಳಿಗೆ ಲಾಭ ಮಾಡಿಕೊಡಲಿದೆ.

ಇದು ಅಮೆರಿಕದ ಅಧ್ಯಕ್ಷರೊಬ್ಬರು ಕೈಗೊಂಡ ಕಾರ್ಯಾಂಗದ ಅತಿದೊಡ್ಡ ಕ್ರಮ ಎಂದು ಬಣ್ಣಿಸ­ಲಾಗಿದೆ. ಇದರಿಂದ    ಗ್ರೀನ್‌ ಕಾರ್ಡ್‌ ಎಂದೇ ಜನ­ಪ್ರಿಯ­­ವಾಗಿ­ರುವ ಕಾನೂನುಬದ್ಧ ಕಾಯಂ ಸ್ಥಾನ­ಮಾನ­ಕ್ಕಾಗಿ (ಎಲ್‌ಪಿಆರ್‌) ಪ್ರಸ್ತುತ ಅನುಸರಿಸ­ಬೇಕಾದ ಎಚ್‌1ಬಿ ವೀಸಾ ಪ್ರಕ್ರಿ­ಯೆ­ಯಿಂದ  ಸಂಕಟಪಡುತ್ತಿರುವ  ಸಾಫ್ಟ್‌­ವೇರ್‌ ಎಂಜಿನಿಯರ್‌­ಗಳಿಗೆ ಅನುಕೂಲವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT