ADVERTISEMENT

ಒಳಮೀಸಲಾತಿ: ಖುರ್ಷಿದ್ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST
ಒಳಮೀಸಲಾತಿ: ಖುರ್ಷಿದ್ ಸಮರ್ಥನೆ
ಒಳಮೀಸಲಾತಿ: ಖುರ್ಷಿದ್ ಸಮರ್ಥನೆ   

ನವದೆಹಲಿ:  ಉತ್ತರಪ್ರದೇಶದಲ್ಲಿ ಮುಸ್ಲಿಮರಿಗೆ ಶೇ.9ರಷ್ಟು ಒಳ ಮೀಸಲಾತಿ ಕಲ್ಪಿಸುವ ತಮ್ಮ ಭರವಸೆ ಕುರಿತು ಬಿಜೆಪಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ `ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಭರವಸೆ ನೀತಿ ಸಂಹಿತೆ ಉಲ್ಲಂಘನೆ ಅಲ್ಲವೇ~ ಎಂದು ಪ್ರಶ್ನಿಸಿದ್ದಾರೆ.

`ನಾನು ಪಕ್ಷದ ಪ್ರಣಾಳಿಕೆಯಲ್ಲಿ ಪ್ರಸ್ತಾಪವಾಗಿರುವ ವಿಷಯವನ್ನು ಮಾತ್ರ ಉಲ್ಲೇಖಿಸಿದ್ದೇನೆ~ ವಿನಾ ಹೊಸದಾಗಿ ಏನನ್ನೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಗೆ ತಿರುಗೇಟು ಕೊಟ್ಟಿರುವ ಸಲ್ಮಾನ್ ಖುರ್ಷಿದ್ `ಈ ಯೋಜನೆ ಹೊಸದೇನೂ ಅಲ್ಲ. ಈಗಾಗಲೇ ಕರ್ನಾಟಕ, ಆಂಧ್ರ ಹಾಗೂ ಕೇರಳದಲ್ಲಿ ಜಾರಿಯಲ್ಲಿದೆ. ಹೊಸದೇನನ್ನೂ ನಾನು ಹೇಳಿಲ್ಲ. ಪಕ್ಷದ ಪ್ರಣಾಳಿಕೆಯಲ್ಲಿ ಇರುವುದನ್ನು ಹೇಳಿದ್ದೇನೆ. ಬಿಜೆಪಿಯು ರಾಮ ಮಂದಿರ ನಿರ್ಮಾಣ ಕುರಿತು ಮಾತನಾಡಬಹುದು. ನಾವು ಅಲ್ಪಸಂಖ್ಯಾತರ ಮೀಸಲಾತಿ ಕುರಿತು ಮಾತನಾಡಬಾರದೆ?~ ಎಂದು ಕೇಳಿದ್ದಾರೆ. `ನಾವು ಪ್ರಣಾಳಿಕೆ ಬಿಡುಗಡೆ ಮಾಡಬಾರದು. ಭಾಷಣ ಮಾಡಬಾರದು. ಅವರು ಮಾತ್ರ ಬೇಕಾದ್ದು ಹೇಳ ಬಹುದು~ ಎಂದು ಕಿಡಿ ಕಾರಿದ್ದಾರೆ.

ಬಿಹಾರದಲ್ಲಿ ನಿತೀಶ್ ಕುಮಾರ್ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದ್ದಾರೆ ಎಂಬ ಅಂಶವನ್ನು ಸಲ್ಮಾನ್ ಖುರ್ಷಿದ್ ಗಮನಕ್ಕೆ ತಂದಾಗ, ಹಾಗಾದರೆ ಬಿಜೆಪಿ ಮೊದಲು ತನ್ನ ಮಿತ್ರಪಕ್ಷದ ವಿರುದ್ಧ ದೂರು ಕೊಡಲಿ ಎಂದು ಚುಚ್ಚಿದರು. ಅನಂತರ ಮುಖ್ಯಮಂತ್ರಿ ನಿತೀಶ್ ಅವರಿಗೆ ವಾಸ್ತವದ ಅರಿವಿದೆ. ಇದನ್ನೇ ನಾವು ಉತ್ತರ ಪ್ರದೇಶದಲ್ಲಿ ಮಾಡಲು ಹೊರಟಿರುವುದು ಎಂದು ತಿಳಿಸಿದ್ದಾರೆ.

ಈ ಭರವಸೆ ನೀಡುವ ಮೂಲಕ ಕಾಂಗ್ರೆಸ್ ಮತೀಯ ಭಾವನೆ ಕೆರಳಿಸುತ್ತಿದೆ ಎಂದು ಬಿಜೆಪಿಯ ಮುಖ್ತಾರ್ ಅಬ್ಬಾಸ್ ನಖ್ವಿ, ಚುನಾವಣಾ ಆಯೋಗಕ್ಕೆ ಸಲ್ಲಿಸಿದ ದೂರಿನಲ್ಲಿ ಆರೋಪಿಸಿದ್ದಾರೆ.

`ಕಾನೂನು ಸಚಿವರ ಹೇಳಿಕೆ ನೀತಿ- ಸಂಹಿತೆ ಉಲ್ಲಂಘನೆ ಮಾತ್ರವಲ್ಲ. ಸಂವಿಧಾನಬಾಹಿರವೂ ಹೌದು. ನಾವು ಹಿಂದುಳಿದ ವರ್ಗಗಳ ಹಕ್ಕುಗಳನ್ನು ಕಸಿದುಕೊಳ್ಳಲು ಕಾಂಗ್ರೆಸ್ ಅಥವಾ ಬಿಎಸ್‌ಪಿಗೆ ಅವಕಾಶ ಕೊಡುವುದಿಲ್ಲ. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯಲು ಬಿಡುವುದಿಲ್ಲ~ ಎಂದು ನಖ್ವಿ ತಿಳಿಸಿದ್ದಾರೆ.

`ದಲಿತರು ಮತ್ತು ಹಿಂದುಳಿದವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಸಮಾಜವಾದಿ ಪಕ್ಷ ಹಾಗೂ ಬಿಎಸ್‌ಪಿ ಕಾಂಗ್ರೆಸ್ ಜತೆ ಕೈ ಜೋಡಿಸಿವೆ. ಹಿಂದುಳಿದ ವರ್ಗಗಳ ಬುಟ್ಟಿಗೆ ಕೈಹಾಕುವ ಕಾಂಗ್ರೆಸ್ ಯೋಜನೆಯನ್ನು ಇವೆರಡೂ ಪಕ್ಷಗಳು ವಿರೋಧ ಮಾಡಬೇಕಾಗಿತ್ತು. ಆದರೆ, ಮೀಸಲಾತಿ ಒದಗಿಸಲು ಸ್ಪರ್ಧೆ ಮಾಡುತ್ತಿವೆ~ ಎಂದು ಟೀಕಿಸಿದ್ದಾರೆ.

ಹಗರಣಗಳು ಮತ್ತು ಭ್ರಷ್ಟಾಚಾರಕ್ಕೆ ಗುರಿಯಾಗಿರುವ ಕಾಂಗ್ರೆಸ್ ಮುಸ್ಲಿಮರನ್ನು ಓಲೈಸುವ ಕೆಲಸ ಮಾಡುತ್ತಿದೆ. ಚುನಾವಣೆ ಘೋಷಣೆಯಾದ ಬಳಿಕ ಈ ಪಕ್ಷಕ್ಕೆ ಮುಸ್ಲಿಮರ ನೆನಪಾಗಿದೆ ಎಂದು ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.