ADVERTISEMENT

ಕಠುವಾ ಅತ್ಯಾಚಾರ: ಪೊಲೀಸರ ವಜಾ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2018, 19:30 IST
Last Updated 14 ಏಪ್ರಿಲ್ 2018, 19:30 IST
ಚಿತ್ರ: ಪ್ರಕಾಶ್‌ ಶೆಟ್ಟಿ
ಚಿತ್ರ: ಪ್ರಕಾಶ್‌ ಶೆಟ್ಟಿ   

ಶ್ರೀನಗರ: ಕಠುವಾ ಅತ್ಯಾಚಾರ ಪ್ರಕರಣದ ಆರೋಪಿಗಳಾದ ನಾಲ್ವರು ಪೊಲೀಸರನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಶನಿವಾರ ಸೇವೆಯಿಂದ ವಜಾ ಮಾಡಿದೆ.

ಆರೋಪಿಗಳಾದ ಸಬ್‌ ಇನ್‌ಸ್ಪೆಕ್ಟರ್, ಹೆಡ್‌ ಕಾನ್‌ಸ್ಟಬಲ್ ಮತ್ತು ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳನ್ನು ವಜಾ ಮಾಡಲು ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಆದೇಶಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅತ್ಯಾಚಾರ ಪ್ರಕರಣದ ಆರೋಪಿಗಳ ಪರ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಅರಣ್ಯ ಸಚಿವ ಲಾಲ್‌ ಸಿಂಗ್‌ ಮತ್ತು ಕೈಗಾರಿಕಾ ಸಚಿವ ಚಂದರ್‌ ಪ್ರಕಾಶ್‌ ಗಂಗಾ ಅವರ ರಾಜೀನಾಮೆ ಪತ್ರಗಳನ್ನು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಿಗೆ ರವಾನಿಸಲಾಗುವುದು ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್‌ ಮಾಧವ್‌ ತಿಳಿಸಿದ್ದಾರೆ.

ADVERTISEMENT

ಅತ್ಯಾಚಾರಿಗಳನ್ನು ಬೆಂಬಲಿಸಿ ನಡೆದ ರ‍್ಯಾಲಿಯಲ್ಲಿ ಇಬ್ಬರೂ ಸಚಿವರು ಭಾಗವಹಿಸಿದ್ದು ಭಾರಿ ಟೀಕೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಘಟನೆಯನ್ನು ಕಾಂಗ್ರೆಸ್‌ ರಾಜಕೀಯ ಲಾಭಕ್ಕಾಗಿ ಬಳಸುತ್ತಿದೆ ಎಂದು ರಾಮ್‌ ಮಾಧವ್‌ ಆರೋಪಿಸಿದ್ದಾರೆ.

ದೇಶದ ವಿವಿಧೆಡೆ ಅನೇಕ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ಘಟನೆಯನ್ನು ಖಂಡಿಸಿ ಮೊಂಬತ್ತಿ ಮೆರವಣಿಗೆ ನಡೆಸಿವೆ.

ಹೇಮಾಮಾಲಿನಿ ಬೆಂಬಲ: ಮಕ್ಕಳ ಮೇಲೆ ಬಲಾತ್ಕಾರ ನಡೆಸುವ ಅತ್ಯಾಚಾರಿಗಳನ್ನು ನೇಣುಗಂಬಕ್ಕೆ ಏರಿಸಬೇಕು ಎಂಬ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರ ಹೇಳಿಕೆಯನ್ನು ಬಿಜೆಪಿ ಸಂಸದೆ ಹೇಮಾಮಾಲಿನಿ ಬೆಂಬಲಿಸಿದ್ದಾರೆ.

ಮಾನವ ಕುಲಕ್ಕೆ ಕಳಂಕ ತರುವ ಇಂತಹ ಕ್ರೂರಿಗಳ ವಿರುದ್ಧ ರಾಷ್ಟ್ರೀಯ ಆಂದೋಲನ ಆರಂಭಿಸುವಂತೆಯೂ ಅವರು ಕರೆ ನೀಡಿದ್ದಾರೆ.

ಅತ್ಯಾಚಾರಿಗಳನ್ನು ನೇಣುಗಂಬಕ್ಕೆ ಏರಿಸುವಂತೆ ಬಾಲಕಿಯ ಪೋಷಕರು ಪಟ್ಟು ಹಿಡಿದಿದ್ದಾರೆ.

‘ಕೊನೆಗೂ ಪ್ರಧಾನಿ ಮೋದಿ ಮೌನ ಮುರಿದಿದ್ದಾರೆ. ಸಂತ್ರಸ್ತ ಬಾಲಕಿಗೆ ನ್ಯಾಯ ನೀಡುವುದು ಯಾವಾಗ’ ಎಂದು ರಾಹುಲ್ ಪ್ರಶ್ನಿಸಿದ್ದಾರೆ.

ಪೈಶಾಚಿಕ ಕೃತ್ಯ (ವಿಶ್ವಸಂಸ್ಥೆ ವರದಿ): ಕಠುವಾ ಅತ್ಯಾಚಾರ ಪ್ರಕರಣದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯು ಇದೊಂದು ಭಯಾನಕ ಮತ್ತು ಪೈಶಾಚಿಕ ಕೃತ್ಯ ಎಂದು ಪ್ರತಿಕ್ರಿಯಿಸಿದೆ.

ತಪ್ಪಿತಸ್ಥರಿಗೆ ಕಾನೂನಿನ ಅನ್ವಯ ಸರಿಯಾದ ಶಿಕ್ಷೆಯಾಗಬೇಕು ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌ ಪ್ರತಿಕ್ರಿಯಿಸಿದ್ದಾರೆ.

ವಿರೋಧಿಸಿದ್ದಕ್ಕೆ ಅಮಾನತು!
ಕೊಯಮತ್ತೂರು:
ಕಠುವಾ ಮತ್ತು ಉನ್ನಾವ್‌ ಅತ್ಯಾಚಾರ ಪ್ರಕರಣಗಳ ವಿರುದ್ಧ ಪ್ರತಿಭಟನೆ ನಡೆಸಿದ ಇಲ್ಲಿಯ ಸರ್ಕಾರಿ ಕಾನೂನು ಕಾಲೇಜಿನ ಪ್ರಥಮ ವರ್ಷದ ಪ್ರಿಯಾ ಎಂಬ ವಿದ್ಯಾರ್ಥಿನಿಗೆ ಅಮಾನತು ಶಿಕ್ಷೆ ನೀಡಲಾಗಿದೆ.

ಕಾಲೇಜಿನಲ್ಲಿ ಕೋಮುಭಾವನೆ ಪ್ರಚೋದಿಸುವ ಬಗ್ಗೆ ಸಹಪಾಠಿಗಳು ನೀಡಿದ ದೂರಿನ ಮೇರೆಗೆ ಆಕೆಯನ್ನು ಕಾಲೇಜಿನಿಂದ ಅಮಾನತುಗೊಳಿಸಲಾಗಿದೆ ಎಂದು ಪ್ರಾಚಾರ್ಯರು ಸ್ಪಷ್ಟಪಡಿಸಿದ್ದಾರೆ. ಕಾಲೇಜಿನ ಆವರಣದಲ್ಲಿ ಕಾಲಿಡದಂತೆ ವಿದ್ಯಾರ್ಥಿನಿಗೆ ಎಚ್ಚರಿಕೆ ನೀಡಲಾಗಿದೆ.

ಲೈಂಗಿಕ ಕಿರುಕುಳ: ಆತ್ಮಹತ್ಯೆ
ಮುಜಫ್ಫರ್‌ನಗರ:
ರಾಯಪುರ ಗ್ರಾಮದ ಇಟ್ಟಿಗೆ ಬಟ್ಟಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದಲಿತ ಮಹಿಳೆ ಲೈಂಗಿಕ ಕಿರುಕುಳದಿಂದ ಬೇಸತ್ತು ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ವ್ಯಕ್ತಿಗಳಿಬ್ಬರು ನೀಡುತ್ತಿದ್ದ ಲೈಂಗಿಕ ಕಿರುಕುಳದ ಬಗ್ಗೆ ಮಹಿಳೆ ನೀಡಿದ ದೂರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ ಫೂಗಾನಾ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಅಮಾನತಾಗಿದ್ದಾರೆ.

ಆತ್ಮಹತ್ಯೆಗೂ ಮುನ್ನ ಮಹಿಳೆ ಬರೆದಿಟ್ಟ ಪತ್ರದ ಆಧಾರದ ಮೇಲೆ ಲೈಂಗಿಕ ಕಿರುಕುಳ ನೀಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.