ADVERTISEMENT

ಕಣ್ಣಳತೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿಲ್ಲ - ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 19:30 IST
Last Updated 6 ಜುಲೈ 2012, 19:30 IST
ಕಣ್ಣಳತೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿಲ್ಲ - ಪ್ರಧಾನಿ
ಕಣ್ಣಳತೆಯಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿಲ್ಲ - ಪ್ರಧಾನಿ   

ನವದೆಹಲಿ (ಐಎಎನ್‌ಎಸ್): ಯುಪಿಎ ಸರ್ಕಾರದ ಆಡಳಿತ ಅವಧಿಯಲ್ಲಿ, ತಮ್ಮ ಕಣ್ಣಳತೆಯ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.

ಪ್ರಮುಖ ಆಂಗ್ಲ ದೈನಿಕವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಯುಪಿಎ ಆಡಳಿತದಲ್ಲಿ ಪ್ರಾಮಾಣಿಕ ನಡತೆ ಕಾಯ್ದುಕೊಳ್ಳಲಾಗಿದೆ. ಆಡಳಿತ ಯಂತ್ರದೊಳಗಿನ ವ್ಯವಸ್ಥೆಯನ್ನು ಉತ್ತಮಗೊಳಿಸಲು ಶ್ರಮಿಸಿರುವುದಾಗಿ ಅವರು ವಿವರಿಸಿದ್ದಾರೆ.

ಕಾಮನ್‌ವೆಲ್ತ್ ಹಗರಣ ಮತ್ತು 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಪ್ರಧಾನಿಯವರ ಹೆಸರು ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿ, `ಸರ್ಕಾರದ ಕೆಲಸವನ್ನು ವಿಮರ್ಶಿಸುವ ಮಾಧ್ಯಮಗಳ ಕೆಲಸ ಶ್ಲಾಘನೀಯ. ಆದರೆ ವಿಮರ್ಶೆಗೆ ಮುನ್ನ ಸುದ್ದಿಗಳ ಮೌಲ್ಯವನ್ನು ವಿಶ್ಲೇಷಿಸಬೇಕು. ಪ್ರಕಟಿಸುವ ಸುದ್ದಿಗಳಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು~ ಎಂದಿದ್ದಾರೆ.

ಯುಪಿಎ ಸರ್ಕಾರ ತಮ್ಮ ಅಧಿಕಾರಾವಧಿಯಲ್ಲಿ `ಮಾಹಿತಿ ಹಕ್ಕು ಕಾಯ್ದೆ, ಸಾರ್ವಜನಿಕ ಸಂಗ್ರಹಣಾ ಮಸೂದೆ, ದೂರು ಸಲ್ಲಿಸುವವರಿಗೆ ರಕ್ಷಣೆ ನೀಡುವ ಮಸೂದೆ, ಲೋಕಪಾಲ್ ಮಸೂದೆ ಮತ್ತು ನ್ಯಾಯಾಂಗ ಉತ್ತರದಾಯಿತ್ವ ಮಸೂದೆಗಳಂತಹ~ ಉತ್ತಮ ಕಾನೂನುಗಳನ್ನು ಜಾರಿಗೆ ತಂದಿದೆ. ಈ ಪ್ರಕ್ರಿಯೆ ಸರ್ಕಾರದ ಎಲ್ಲಾ ಹಂತಗಳಲ್ಲಿರುವ ಪ್ರಾಮಾಣಿಕತೆ ಮತ್ತು ನಡತೆಗೆ ಪುರಾವೆ ಒದಗಿಸುತ್ತದೆ ಎಂದಿದ್ದಾರೆ.

ಯುಪಿಎ ಸರ್ಕಾರ ಜಾರಿಗೆ ತಂದಿರುವ `ಮಾಹಿತಿ ಹಕ್ಕು ಕಾಯ್ದೆ~ಯು ಕಾಂಗ್ರೆಸ್ ಮತ್ತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಮುಂದಿನ ಪೀಳಿಗೆಯವರು ನೆನಪಲ್ಲಿಟ್ಟುಕೊಳ್ಳುವಂತಾಗಿದೆ~ ಎಂದು ಪ್ರಧಾನಿ ಸಿಂಗ್ ಅವರು ಅಭಿಪ್ರಾಯಪಟ್ಟಿದ್ದಾರೆ.`ಈ ಎಲ್ಲಾ ಸೌಲಭ್ಯಗಳು, ಯೋಜನೆಗಳು ಸರ್ಕಾರದ ಭ್ರಷ್ಟಾಚಾರ ನಿಯಂತ್ರಣಕ್ಕೆ ಹಿಡಿದ ಕನ್ನಡಿಯಾಗಿದೆ~ ಎಂದು ಪ್ರಧಾನಿಯವರು ಪ್ರತಿಪಾದಿಸಿದ್ದಾರೆ.

ಹೂಡಿಕೆದಾರರ ವಿಶ್ವಾಸಕ್ಕೆ ಆದ್ಯತೆ
ಜಾಗತಿಕ ಆರ್ಥಿಕ ಪರಿಸ್ಥಿತಿ ಕುಸಿದಿದ್ದರೂ, ಭಾರತದ ಪ್ರಗತಿ ಸ್ಥಿರವಾಗಿದೆ ಎಂದಿರುವ ಪ್ರಧಾನಿ ಮನಮೋಹನ್ ಸಿಂಗ್, ತೆರಿಗೆ ಸಂಬಂಧಿ ವಿಚಾರವೂ ಸೇರಿದಂತೆ ಹೂಡಿಕೆದಾರರಲ್ಲಿ  ವಿಶ್ವಾಸ ಹುಟ್ಟಿಸುವ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.    

`ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು, 5 ವಲಯಗಳನ್ನು ಪಟ್ಟಿ ಮಾಡಿದ್ದು, ಶೀಘ್ರದಲ್ಲೇ ಆದ್ಯತೆ ಮೇಲೆ ಅವುಗಳತ್ತ ಗಮನಹರಿಸಲಾಗುತ್ತದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.