ADVERTISEMENT

ಕನಿಷ್ಠ ಆದಾಯಕ್ಕೆ ಖಾತ್ರಿ: ಪಿಂಚಣಿ ಮಸೂದೆಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ನೋಂದಣಿದಾರರಿಗೆ ಕನಿಷ್ಠ ಆದಾಯವನ್ನು ಖಾತ್ರಿಪಡಿಸುವ `2011-ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ' ಮಸೂದೆಗೆ ಬುಧವಾರ ಲೋಕಸಭೆ ಅನುಮೋದನೆ ನೀಡಿತು.

ಮಸೂದೆ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವ ಪಿ.ಚಿದಂಬರಂ, `ಸಂಸದೀಯ ಸ್ಥಾಯಿ ಸಮಿತಿಯ ಬಹುತೇಕ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದೆ' ಎಂದರು.

` ಗಳಿಸುತ್ತಿರುವಾಗಲೇ ಉಳಿಕೆ' ತತ್ವವನ್ನು ಆಧರಿಸಿದ ಈ ಮಸೂದೆಯು ಉದ್ಯೋಗಿಗಳಿಗೆ ದೀರ್ಘಕಾಲೀನ ಪ್ರಯೋಜ ನೀಡಲಿದೆ' ಎಂದರು.

ಮುಂಗಾರು ಅಧಿವೇಶನ ಕೊನೆಗೊಳ್ಳಲು ಕೇವಲ ಎರಡು ದಿನಗಳು ಬಾಕಿ ಇರುವುದರಿಂದ ಸರ್ಕಾರವು ಈ ಮಸೂದೆ ಅಂಗೀಕಾರಕ್ಕೆ ಶತಾಯಗತಾಯ ಪ್ರಯತ್ನ ಮಾಡಿತ್ತು.

ಚರ್ಚೆಯಲ್ಲಿ ಭಾಗವಹಿಸಿದ್ದ ಸಮಾಜವಾದಿ ಪಕ್ಷದ ಶೈಲೇಂದ್ರ ಕುಮಾರ್, 2011ರ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ  ಪ್ರಾಧಿಕಾರ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪಿಂಚಣಿ ನಿಧಿಯನ್ನು ಅಭಿವೃದ್ಧಿಪಡಿಸುವ ಮೂಲಕ ವೃದ್ಧಾಪ್ಯದಲ್ಲಿ ಆದಾಯ ಭದ್ರತೆಗೆ ಉತ್ತೇಜನ ನೀಡುವುದಕ್ಕೆ ಪ್ರಾಧಿಕಾರವೊಂದನ್ನು ರಚಿಸುವ ಅಂಶ ಕೂಡ ಮಸೂದೆಯಲ್ಲಿ ಅಡಕವಾಗಿದೆ.

`ಉದ್ಯೋಗಿಗಳಿಗೆ ಪಿಂಚಣಿಯಲ್ಲಿ ನಿರ್ದಿಷ್ಟ ಮೊತ್ತವನ್ನು ಕೊಡಲು ಇಲ್ಲಿ ಭರವಸೆ ನೀಡಲು ಸಾಧ್ಯವಿಲ್ಲ' ಎಂದು ಕುಮಾರ್ ಆರೋಪಿಸಿದ್ದರು.

`ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸುವುದು ಬೇಡ' ಎಂದು ತೃಣಮೂಲ ಕಾಂಗ್ರೆಸ್‌ನ ಸೌಗತ ರಾಯ್ ಹೇಳಿದ್ದರು. ಡಿಎಂಕೆ ಸದಸ್ಯ ಟಿಕೆಎಸ್ ಇಳಂಗೋವನ್ ಕೂಡ ಇದಕ್ಕೆ ದನಿಗೂಡಿಸಿದ್ದರು.

ಮಸೂದೆಯನ್ನು ಬೆಂಬಲಿಸಿ ಮಾತನಾಡಿದ್ದ ಕಾಂಗ್ರೆಸ್‌ನ ಸಂಜಯ್ ನಿರುಪಮ್, `ನಿವೃತ್ತಿ ನಂತರದಲ್ಲಿ ವಯೋವೃದ್ಧರಿಗೆ ಈ ಮಸೂದೆ ಅನುಕೂಲ ಮಾಡಿಕೊಡಲಿದೆ' ಎಂದು ವಾದಿಸಿದ್ದರು.

ವಿರೋಧ ಪಕ್ಷಗಳ ಘೋಷಣೆಗಳ ನಡುವೆಯೇ ಹಣಕಾಸು ಸಚಿವ ಪಿ.ಚಿದಂಬರಂ ಅವರು ಮಸೂದೆಯನ್ನು ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.