ಮಧುರೈ (ಪಿಟಿಐ): ಡಿಎಂಕೆ ಪಕ್ಷದೊಳಗಿನ `ಕೆಲ ಶಕ್ತಿಗಳು' ಪಕ್ಷದ ಮುಖಸ್ಥರಾಗಿರುವ ತಮ್ಮ ತಂದೆ ಕರುಣಾನಿಧಿ ಅವರಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಿಲ್ಲ ಎಂದು ಪಕ್ಷದಿಂದ ಅಮಾನತುಗೊಂಡಿರುವ ಡಿಎಂಕೆ ಮುಖಂಡ, ಕೇಂದ್ರದ ಮಾಜಿ ಸಚಿವ ಎಂ.ಕೆ.ಅಳಗಿರಿ ಅವರು ಸೋಮವಾರ ಆರೋಪಿಸಿದರು.
ಭಾರಿ ಪ್ರಮಾಣದಲ್ಲಿ ನೆರೆದಿದ್ದ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು ಡಿಎಂಕೆ ಖಚಾಂಚಿಯಾಗಿರುವ ಕಿರಿಯ ಸಹೋದರ ಎಂ.ಕೆ.ಸ್ಟಾಲಿನ್ ಅವರ ವಿರುದ್ಧ ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.
`ಪಕ್ಷದೊಳಗಿನ ಕೆಲ ಶಕ್ತಿಗಳು ತಂದೆ (ಕರುಣಾನಿಧಿ) ಅವರಿಗೆ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಿಲ್ಲ. ಪಕ್ಷದ ಅಧ್ಯಕ್ಷರಿಗೆ ಅವರು ಕಿರುಕುಳ ನೀಡುತ್ತಿದ್ದಾರೆ' ಎಂದು ಅಳಗಿರಿ ಹೇಳಿದರು.
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಭವಿಷ್ಯದ ಕಾರ್ಯಯೋಜನೆಗಳನ್ನು ನಿರ್ಧರಿಸುವ ನಿಟ್ಟಿನಲ್ಲಿ ತಮ್ಮ ಬೆಂಬಲಿಗರ ಅಭಿಪ್ರಾಯ ಪಡೆಯಲು ಡಿಎಂಕೆಯ ದಕ್ಷಿಣ ವಲಯದ ಸಂಘಟನಾ ಕಾರ್ಯದರ್ಶಿಯಾಗಿರುವ ಅಳಗಿರಿ ಅವರು ಈ ಸಭೆ ಕರೆದಿದ್ದರು.
ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಪ್ರಭಾವಿ ನಾಯಕರೆಂದೇ ಗುರುತಿಸಿಕೊಂಡಿರುವ ಅಳಗಿರಿಯವರು ಪಕ್ಷದ ಚುನಾವಣೆಗಳಲ್ಲಿ ನಡೆದ `ಅಕ್ರಮ ಮತ್ತು ದುರಾಚಾರ'ಗಳನ್ನು ತಡೆಯಲು ಮುಂದಾಗಿದಕ್ಕೆ ತನ್ನನ್ನು `ಅನ್ಯಾಯವಾಗಿ ಅಮಾನತು' ಮಾಡಲಾಯಿತು ಎಂದು ಬೆಂಬಲಿಗರ ಮುಂದೆ ಅವಲತ್ತುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.