ಚೆನ್ನೈ (ಪಿಟಿಐ): ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ಮೂವರು ಭದ್ರತಾ ಅಧಿಕಾರಿಗಳ ಮನೆಗಳ ಮೇಲೆ ಜಾಗ್ರತ ದಳದ ಅಧಿಕಾರಿಗಳ ತಂಡ ಶುಕ್ರವಾರ ದಾಳಿ ನಡೆಸಿದೆ.
ಕರುಣಾನಿಧಿ ಮುಖ್ಯಮಂತ್ರಿಯಾಗಿದ್ದಾಗ ವಿವೇಚನಾ ಕೋಟಾದಡಿ ಈ ಮೂವರಿಗೆ ನಿವೇಶನ ಹಂಚಿಕೆ ಮಾಡಿದ್ದು ಇದರಿಂದ ತಮಿಳುನಾಡು ಗೃಹ ಮಂಡಳಿಗೆ ನಷ್ಟ ಉಂಟಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ಮಾಡಲಾಗಿದೆ.
ಭದ್ರತಾ ಅಧಿಕಾರಿಗಳಾದ ಪಾಂಡ್ಯನ್, ವಿನೋದನ್ ಮತ್ತು ಗಣೇಶನ್ ಅವರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ಮಾಡಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.
2008ರಲ್ಲಿ ಈ ಮೂವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಟಿಎನ್‌ಎಚ್‌ಬಿ ಮೊಗಾಪ್ಪೈರ ವಲಯದಲ್ಲಿ ತಲಾ ಎರಡು ನಿವೇಶನ ಪಡೆದಿದ್ದರು. ಸರ್ಕಾರದಿಂದ ಮಂಜೂರಾತಿಯ ಅಧಿಕೃತ ಆದೇಶ ಬರುವ ಮೊದಲೇ ಈ ಅಧಿಕಾರಿಗಳು ಗೃಹ ಮಂಡಳಿಯ ನಿಯಮಗಳನ್ನು ಉಲ್ಲಂಘಿಸಿ ಖಾಸಗಿ ವ್ಯಕ್ತಿಗಳಿಗೆ ತಲಾ 19 ಲಕ್ಷ ರೂಪಾಯಿಗಳನ್ನು ಪಡೆದು ನಿವೇಶನವನ್ನು ನೀಡಿದ್ದರು ಎಂದು ಆರೋಪಿಸಲಾಗಿದೆ.
ಈ ಭದ್ರತಾ ಸಿಬ್ಬಂದಿ ವಿರುದ್ಧ ಭಾರತೀಯ ದಂಡ ಸಂಹಿತೆ, ಭ್ರಷ್ಟಾಚಾರದ ನಿಗ್ರಹ ದಳದ ವಿವಿಧ ಕಾಯ್ದೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ, ಕಾಂಗ್ರೆಸ್ ಹಾಗೂ ಡಿಎಂಕೆ ಶಾಸಕರಿಗೆ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ನಿವೇಶನವನ್ನು ಹಂಚಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 2011ರ ಜನವರಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿ ಅವರು ಈ ವಿವೇಚನಾ ಕೋಟಾವನ್ನು ರದ್ದು ಮಾಡಿದ್ದರು.
ಪ್ರತಿಭಟನೆ 200ನೇ ದಿನಕ್ಕೆ: ಕೂಡುಂಕುಳಂ ಅಣು ಸ್ಥಾವರ ವಿರೋಧಿಸಿ ಸ್ಥಳೀಯ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ 200ನೇ ದಿನಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ಥೇನ್ ಚಂಡಮಾರುತಕ್ಕೆ ಬಲಿಯಾದವರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಒಂದು ಲಕ್ಷ ಪರಿಹಾರವನ್ನು ನೀಡಬೇಕು ಎಂದೂ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.