ADVERTISEMENT

ಕಲಾಪ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST

ನವದೆಹಲಿ (ಐಎಎನ್‌ಎಸ್/ಪಿಟಿಐ): ಸರ್ಕಾರಿ ನೌಕರಿ ಬಡ್ತಿಯಲ್ಲಿ ಪರಿಶಿಷ್ಟ ಜಾತಿ/ ಪಂಗಡದವರಿಗೆ ಮೀಸಲಾತಿ ನೀಡುವ ಮಸೂದೆಯು ಭಾರಿ ಕೋಲಾಹಲಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯಸಭೆಯನ್ನು ಒಂದು ದಿನಕ್ಕೆ ಮುಂದೂಡಲಾಯಿತು.

ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭವಾದ ಕೆಲವೇ ಕ್ಷಣಗಳಲ್ಲಿ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಮತ್ತೆ ಸಭೆ ಸೇರಿದಾಗಲೂ ಗದ್ದಲ ನಿಲ್ಲದ ಕಾರಣ ಕಲಾಪವನ್ನು ಒಂದು ದಿನಕ್ಕೆ ಮುಂದೂಡಲಾಯಿತು.

ಉದ್ಯೋಗ ಬಡ್ತಿಯಲ್ಲಿ ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಆಗ್ರಹಿಸಿ ಎಸ್‌ಪಿ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ಬಿಎಸ್‌ಪಿ ಕೂಡ ಇದಕ್ಕೆ ದನಿಗೂಡಿಸಿತು.

ಅನಿಲ ನಿಕ್ಷೇಪ ಹಂಚಿಕೆ ಹಗರಣ: ಗುಜರಾತ್‌ನಲ್ಲಿ ಮೋದಿ ಸರ್ಕಾರದಿಂದ ಅನಿಲ ನಿಕ್ಷೇಪ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತ ವರದಿಯ ಪ್ರತಿಗಳನ್ನು ತೋರಿಸುತ್ತ ಕಾಂಗ್ರೆಸ್ ಸದಸ್ಯರು ಭಾರಿ ಕೋಲಾಹಲ ಎಬ್ಬಿಸಿದ್ದರು. `ಪತ್ರಿಕೆಗಳನ್ನು ತೋರಿಸುವುದು ನಿಯಮಕ್ಕೆ ವಿರುದ್ಧವಾದುದು' ಎಂದು ಉಪ ಸಭಾಪತಿ ಪಿ.ಜೆ.ಕುರಿಯನ್ ಕಾಂಗ್ರೆಸ್ ಸದಸ್ಯರನ್ನು ಉದ್ದೇಶಿಸಿ ಹೇಳಿದರು.

ಅಮಾಯಕ ಮುಸ್ಲಿಮರ ಬಂಧನಕ್ಕೆ ಆಕ್ರೋಶ: ದೇಶದಾದ್ಯಂತ ಭಯೋತ್ಪಾದನೆ ಪ್ರಕರಣದಲ್ಲಿ ಅಮಾಯಕ ಮುಸ್ಲಿಮರನ್ನು ಬಂಧಿಸಿದ ವಿಷಯ ಕೂಡ ಸದನದಲ್ಲಿ ಚರ್ಚೆಯಾಯಿತು.  `ಬಂಧಿತ ಅಮಾಯಕ ಮುಸ್ಲಿಮರನ್ನು ಬಿಡುಗಡೆ ಮಾಡಬೇಕು' ಎಂದು ಶೂನ್ಯ ವೇಳೆಯಲ್ಲಿ ಎಸ್‌ಪಿ ಸದಸ್ಯರು ಪಟ್ಟು ಹಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.