ADVERTISEMENT

ಕಲ್ಮಾ ಡಿಗೆ ಟಿಕೆಟ್‌ ನಕಾರ

ಕಾಂಗ್ರೆಸ್‌ ಮೂರನೇ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:30 IST
Last Updated 18 ಮಾರ್ಚ್ 2014, 19:30 IST

ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷವು ಮಂಗಳವಾರ 58 ಅಭ್ಯರ್ಥಿಗಳ ಹೆಸರನ್ನೊಳಗೊಂಡ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, ‘ಕಳಂಕಿತ’ ಸುರೇಶ್‌ ಕಲ್ಮಾಡಿ ಅವರಿಗೆ ಟಿಕೆಟ್‌ ನಿರಾಕರಿಸಿದೆ. ಮಹಾರಾಷ್ಟ್ರದ ಪುಣೆ ಲೋಕಸಭಾ ಕ್ಷೇತ್ರದ ಸಂಸದ­ರಾಗಿರುವ ಕಲ್ಮಾಡಿ ಸ್ಥಾನದಲ್ಲಿ ಯುವನಾಯಕ ವಿಶ್ವಜೀತ್‌ ಕದಂ ಅವರಿಗೆ ಕಾಂಗ್ರೆಸ್‌ ಅವಕಾಶ ನೀಡಿದೆ.

ಇದರ ಹೊರತಾಗಿ, ಕಪಿಲ್‌ ಸಿಬಲ್‌ ಸೇರಿದಂತೆ ಹಲವು ಕೇಂದ್ರ ಸಚಿವರು ಹಾಗೂ ಹಿರಿಯ ಮುಖಂಡರಿಗೆ ಟಿಕೆಟ್‌ ನೀಡಿದೆ. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಉತ್ತರ ಪ್ರದೇಶದ ಮೊರದಾ­ಬಾದ್‌ ಕ್ಷೇತ್ರದ ಸಂಸದ ಮೊಹಮ್ಮದ್‌ ಅಜರುದ್ದೀನ್‌ ಅವರನ್ನು ಅಲ್ಪ­ಸಂಖ್ಯಾತರ ಪ್ರಾಬಲ್ಯವಿರುವ ರಾಜ­ಸ್ತಾನದ ಮಾಧೋಪುರದ ಟೊಂಕ್‌–ಸವಾಯಿ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.

ಛತ್ತೀಸಗಡದ ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ಅವರಿಗೆ ಮೊಹಸ­ಮುಂದ್‌ನಿಂದ ಟಿಕೆಟ್‌ ನೀಡಲಾಗಿದೆ. ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌  ಅವರ ಅಳಿಯ ಪಂರಂಜಯಾದಿತ್ಯ ಅವರನ್ನು ಗುಜ­ರಾತ್‌ನ ಪಂಚಮಹಲ್‌ ಕ್ಷೇತ್ರಕ್ಕೆ ನಾಮಕರಣ ಮಾಡಲಾಗಿದೆ. ಯುವ ಮುಖಂಡ, ಸಚಿನ್‌ ಪೈಲಟ್‌ ಅವರಿಗೆ ಅಜ್ಮೇರ್‌ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಸಿ.ಪಿ. ಜೋಶಿ ಅವರ ಕ್ಷೇತ್ರವನ್ನು ಭಿಲ್ವಾರಾ­ದಿಂದ ಜೈಪುರ ಗ್ರಾಮೀಣ ಕ್ಷೇತ್ರಕ್ಕೆ ಸ್ಥಳಾಂತರಿಸಲಾಗಿದೆ.

ದೆಹಲಿಯ ಐವರು ಹಾಲಿ ಸಂಸದ­ರಾದ ಕಪಿಲ್‌ ಸಿಬಲ್‌ (ಚಾಂದಿನಿ ಚೌಕ್‌), ಕೃಷ್ಣ ತೀರಥ್‌ (ವಾಯವ್ಯ ದೆಹಲಿ), ಸಂದೀಪ್‌ ದೀಕ್ಷಿತ್‌ (ಪೂರ್ವ ದೆಹಲಿ), ಜೈಪ್ರಕಾಶ್‌ ಅಗರ್‌ವಾಲ್‌ (ಈಶಾನ್ಯ ದೆಹಲಿ) ಮತ್ತು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಜಯ್‌ ಮಾಕನ್‌ ಅವರನ್ನು ನವದೆಹಲಿ ಕ್ಷೇತ್ರ­ದಿಂದ ಮರುನಾಮಕರಣ ಮಾಡ­ಲಾಗಿದೆ.

ಮೂರನೇ ಅಭ್ಯರ್ಥಿಗಳ ಪಟ್ಟಿ ಪ್ರಕಟ­ಗೊಳ್ಳುವುದರೊಂದಿಗೆ ಕಾಂಗ್ರೆಸ್‌ ಈವ­ರೆಗೆ 318 ಹುರಿಯಾಳುಗಳನ್ನು ಚುನಾ­ವಣಾ ಅಖಾಡಕ್ಕೆ ಇಳಿಸಿ­ದಂತಾ­ಗಿದೆ. ಆದರೆ, ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಲ್ಲಿ ನರೇಂದ್ರ ಮೋದಿ ವಿರುದ್ಧ ಯಾರನ್ನು ನಿಲ್ಲಿಸಲಾಗುತ್ತಿದೆ ಎಂಬ ಬಗ್ಗೆ ಕಾಂಗ್ರೆಸ್‌ ಗುಟ್ಟು ಬಿಟ್ಟುಕೊಟ್ಟಿಲ್ಲ.

ಈ ಕ್ಷೇತ್ರದಲ್ಲಿ ಅಭ್ಯರ್ಥಿ ಹೆಸರನ್ನು ಅಚ್ಚರಿಯಾಗಿ ಘೋಷಿಸುವ ಬಗ್ಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮಧು­ಸೂದನ್‌ ಮಿಸ್ತ್ರಿ ಸುಳಿವು ನೀಡಿ­ದ್ದಾರೆ. ಮೋದಿ ವಿರುದ್ಧ ‘ಅಸಾಧಾರಣ’ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಾಗುವುದು ಎಂದು ಪಕ್ಷದ ವಕ್ತಾರ ರಣದೀಪ್‌ ಸುರ್ಜೆವಾಲ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.