ADVERTISEMENT

ಕಲ್ಲಿದ್ದಲು ಗಣಿ ಹಂಚಿಕೆಯಿಂದ ಬೊಕ್ಕಸಕ್ಕೆ ನಷ್ಟ ವರದಿ ಸೋರಿಕೆ: ಸಂಸತ್ ಕಲಾಪಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಯುಪಿಎ ಮೊದಲ ಅವಧಿಯಲ್ಲಿ ಕಲ್ಲಿದ್ದಲು ಗಣಿ ಪ್ರದೇಶಗಳನ್ನು ಹರಾಜು ಹಾಕದೇ 100ಕ್ಕೂ ಹೆಚ್ಚು ಖಾಸಗಿ ಹಾಗೂ ಸಾರ್ವಜನಿಕ ವಲಯದ ಕಂಪೆನಿಗಳಿಗೆ ಹಂಚಿಕೆ ಮಾಡಲಾಗಿದ್ದು, ಅದು ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವುಂಟು ಮಾಡಿದೆ ಎಂಬ ಸುದ್ದಿ ಗುರುವಾರ ಸಂಸತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಯಿತು.

2004ರಿಂದ 2009ರವರೆಗಿನ ಅವಧಿಯಲ್ಲಿ ಯುಪಿಎ ಸರ್ಕಾರ, ಕಲ್ಲಿದ್ದಲು ಗಣಿ ಪ್ರದೇಶಗಳನ್ನು ಹರಾಜು ಹಾಕದೇ ಹಾಗೆಯೇ ಹಂಚಿಕೆ ಮಾಡಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 10.6 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂಬ ಮಹಾಲೇಖಪಾಲರ (ಸಿಎಜಿ) ವರದಿ ಸೋರಿಕೆಯಾಗಿದ್ದು, ಕೆಲ ಮಾಧ್ಯಮಗಳಲ್ಲಿ ಇಂದು ವರದಿಯಾಗಿದೆ.

ಇದರಿಂದಾಗಿ 2ಜಿ ಹಗರಣದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಯುಪಿಎ ಸರ್ಕಾರ ಮತ್ತೊಂದು ಮುಜುಗರ ಎದುರಿಸುವ ಸನ್ನಿವೇಶ ಉದ್ಭವಿಸಿದೆ.

ಗುರುವಾರ ಮಧ್ಯಾಹ್ನವೇ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿರುವ ಮಹಾಲೇಖಪಾಲರು, ಆರಂಭಿಕ ಕರಡು ದಾಖಲೆಯ ಕೆಲ ಅಂಶ ಮಾಧ್ಯಮಗಳಲ್ಲಿ ವರದಿಯಾಗಿದೆ. ನಾವು ಇನ್ನೂ ಚರ್ಚೆಯ ಹಂತದಲ್ಲಿದ್ದೇವೆ. ಅಂತಿಮ ವರದಿ ಇನ್ನೂ ಸಿದ್ಧವಾಗಿಲ್ಲ. ಕಲ್ಲಿದ್ದಲು ಸಚಿವಾಲಯದ ಜತೆ ಸಭೆ ನಡೆಸಿದ ನಂತರ ಹಲವು ವಿಷಯಗಳು ಸ್ಪಷ್ಟವಾಗಿವೆ ಎಂದು ವಿವರಿಸಿದ್ದಾರೆ.

ಕರಡು ವರದಿಯಲ್ಲಿ ಏನಿದೆ?: ಕಲ್ಲಿದ್ದಲು ಗಣಿ ಪ್ರದೇಶ ಗುತ್ತಿಗೆಗೆ ಪಡೆದವರಿಗೆ, ಅದನ್ನು ಗುತ್ತಿಗೆಗೆ ಪಡೆದಾಗ ಇದ್ದ ಕಲ್ಲಿದ್ದಲು ಬೆಲೆ ಹಾಗೂ 2011ರ ಮಾರ್ಚ್ 31ರಂದು ಇದ್ದ ಕಲ್ಲಿದ್ದಲಿನ ಬೆಲೆ ಹೋಲಿಸಿದಾಗ ಅನಿರೀಕ್ಷಿತವಾಗಿ ಭಾರಿ ಲಾಭವಾದಂತೆ ಕಾಣುತ್ತದೆ. ಇಲ್ಲಿ ಒಟ್ಟಾರೆ ರೂ 6.31 ಲಕ್ಷ ಕೋಟಿ ಲಾಭವಾಗಿದೆ.

ಈಗಿನ ದರಕ್ಕೆ ಹೋಲಿಸಿದಾಗ ಈ ಲಾಭದ ಮೊತ್ತ 10.67 ಲಕ್ಷ ಕೋಟಿ ರೂಪಾಯಿಗಳಷ್ಟು ಆಗುತ್ತದೆ.
ಜೂನ್ 2004ರಂದು ಕಲ್ಲಿದ್ದಲು ಸಚಿವಾಲಯ ಸಿಎಜಿಗೆ ನೀಡಿದ್ದ ಉತ್ತರದಲ್ಲಿ, ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಕಲ್ಲಿದ್ದಲು ಪೂರೈಸುವ ದರಕ್ಕೂ, ಗಣಿಗಳ ಮೂಲಕ ಉತ್ಪಾದನೆಯಾಗುವ ಕಲ್ಲಿದ್ದಲು ದರಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಆ ಪ್ರದೇಶ ಗುತ್ತಿಗೆಗೆ ಪಡೆದವರಿಗೆ ಅನಿರೀಕ್ಷಿತವಾಗಿ ಲಾಭವಾಗುತ್ತಿದೆ. ಅದರಲ್ಲಿ ಕೆಲ ಪ್ರದೇಶಗಳನ್ನು ಹರಾಜು ಹಾಕಲು ಸರ್ಕಾರ ಬಯಸಿದೆ ಎಂದು ಹೇಳಲಾಗಿತ್ತು.

ಕಲಾಪಕ್ಕೆ ಅಡ್ಡಿ: ಗುರುವಾರ ಸಂಸತ್ ಕಲಾಪ ಆರಂಭವಾದ ಕೂಡಲೇ ಉಭಯ ಸದನಗಳಲ್ಲಿ ವಿರೋಧ ಪಕ್ಷಗಳ ಸದಸ್ಯರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ಕಲಾಪಕ್ಕೆ ಅಡ್ಡಿಪಡಿಸಿದವು.

ಮಹಾಲೇಖಪಾಲರಿಂದ ಪ್ರಧಾನಿಗೆ ಪತ್ರ

ನವದೆಹಲಿ (ಪಿಟಿಐ): ಕಲ್ಲಿದ್ದಲು ಗಣಿ ಪ್ರದೇಶಗಳ ಹಂಚಿಕೆಗೆ ಸಂಬಂಧಿಸಿ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ದಾರಿ ತಪ್ಪಿಸುವಂತಿದೆ ಎಂದು ಹೇಳಿರುವ ಮಹಾಲೇಖಪಾಲರು ಪ್ರಧಾನಿಗೆ ಪತ್ರ ಬರೆದಿದ್ದಾರೆ.  ಆ ಪತ್ರದ ಕೆಲ ಭಾಗಗಳನ್ನು ಪ್ರಧಾನಿ ಕಚೇರಿ ಬಿಡುಗಡೆ ಮಾಡಿದೆ.

`ಆರಂಭಿಕ ಹಂತದ ಚರ್ಚೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಹೊರಗೆ ಪ್ರಕಟಿಸಲಾಗಿದೆ. ಆ ಅಂಶಗಳು ನಮ್ಮ ಕೊನೆಯ ಹಂತದ ಕರಡಿನಲ್ಲೂ ಅಡಕಗೊಂಡಿಲ್ಲ. ಹಾಗಾಗಿಯೇ ಅವು ದಾರಿ ತಪ್ಪಿಸುವಂತಿವೆ. 2012ರ ಫೆಬ್ರುವರಿ 9 ಹಾಗೂ 2012ರ ಮಾರ್ಚ್ 3ರಂದು ಕಲ್ಲಿದ್ದಲು ಸಚಿವಾಲಯದ ಅಧಿಕಾರಿಗಳ ಬಳಿ ನಡೆಸಿದ ಚರ್ಚೆಯ ಸಂದರ್ಭದಲ್ಲಿ ಅವರು ನೀಡಿದ ಸ್ಪಷ್ಟನೆಯಿಂದಾಗಿ ನಾವು ನಮ್ಮ ಚಿಂತನೆಯ ಧಾಟಿ ಬದಲಿಸಿಕೊಂಡಿದ್ದೇವೆ.

ಯಾವುದೇ ಉದ್ದೇಶವಿಲ್ಲದೇ ಕಲ್ಲಿದ್ದಲು ಗಣಿ ಪ್ರದೇಶ ಪಡೆದವರಿಗೆ ಲಾಭವಾಗಿರುವುದರಿಂದ ಅದು ಅಷ್ಟೇ ಪ್ರಮಾಣದಲ್ಲಿ ಬೊಕ್ಕಸಕ್ಕೆ ಹಾನಿ ಮಾಡಿದೆ ಎಂಬ ಅಭಿಪ್ರಾಯವನ್ನು ನಾವು ಹೊಂದಿಲ್ಲ. ಲೆಕ್ಕಪರಿಶೋಧನಾ ವರದಿ ಇನ್ನೂ ಸಿದ್ಧತಾ ಹಂತದಲ್ಲಿ ಇರುವುದರಿಂದ ಈ ಸೋರಿಕೆ ಮುಜುಗರಕ್ಕೆ ಕಾರಣವಾಗಿದೆ~ ಎಂದು ಸಿಎಜಿ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

ಪಾರದರ್ಶಕ: ಜೈಸ್ವಾಲ್
ನವದೆಹಲಿ (ಪಿಟಿಐ):
ಕಲ್ಲಿದ್ದಲು ಕಂಪೆನಿಗಳಿಗೆ ಭಾರಿ ಲಾಭವಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಕಂಪೆನಿಗಳಿಗೆ ಗಣಿ ಪರವಾನಗಿ ನೀಡುವಾಗ ಪಾರದರ್ಶಕ ಕ್ರಮ ಅನುಸರಿಸಲಾಗುತ್ತಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ.

ಕಲ್ಲಿದ್ದಲು ಗಣಿ ಕ್ಷೇತ್ರಗಳ ಹಂಚಿಕೆಗಾಗಿ ನಾವು ಮೊದಲು ಜಾಹೀರಾತು ನೀಡಿ ಅರ್ಜಿ ಆಹ್ವಾನಿಸಿದ್ದೆವು. ಅರ್ಜಿ ಸ್ವೀಕರಿಸಿದ ನಂತರ ರಾಜ್ಯ ಸರ್ಕಾರಗಳ ಸಲಹೆ ಕೇಳಿ ಹಂಚಿಕೆ ಮಾಡಲಾಯಿತು ಎಂದು ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಸುದ್ದಿಸಂಸ್ಥೆಗೆ ಹೇಳಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.