
ಬೆಂಗಳೂರು: ‘ಸರ್ ಎಂ. ವಿಶ್ವೇಶ್ವರಯ್ಯ ಅವರು ಕಟ್ಟಿದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಉನ್ನತ ಹುದ್ದೆಗೆ ಮಹಿಳೆಯರು ಹಾಗೂ ದಲಿತರನ್ನು ಕಡೆಗಣಿಸಲಾಗಿದೆ. ಸಾಹಿತಿಗಳೇ ಈ ರೀತಿ ಮಾಡಿದರೆ ಅವರನ್ನು ನಂಬುವುದು ಹೇಗೆ?’ ಎಂದು ರಂಗ ಹಾಗೂ ಚಲನಚಿತ್ರ ನಿರ್ದೇಶಕ ಸತ್ಯು ಪ್ರಶ್ನಿಸಿದರು.
ಸಮುದಾಯದ ರೆಪರ್ಟರಿ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಬಿಡುಗಡೆ ರಂಗಸಂಚಾರದ ಸಮಾರೋಪ ಸಮಾರಂಭ’ದಲ್ಲಿ ಅವರು ಮಾತನಾಡಿದರು.
‘ಸುಮಾರು ವರ್ಷಗಳಿಂದ ನಾಟಕ ಬರೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲರೂ ಟಿ.ವಿ ಕಡೆ ಹೋಗುತ್ತಿದ್ದಾರೆ. ಅದಕ್ಕೆ ಸೂಕ್ತ ಸಂಭಾವನೆ ಇಲ್ಲದಿರುವುದು ಕಾರಣ. ಕನ್ನಡ ಸೇರಿದಂತೆ ಎಲ್ಲ ಭಾಷೆಯಲ್ಲೂ ಈ ಸಮಸ್ಯೆ ಇದೆ. ಈಗ ಕಥೆ ಆಧಾರಿತ ನಾಟಕ ರೂಪಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಅವರು ಹೇಳಿದರು.
‘ಹೈದರಾಬಾದ್ ಕೇಂದ್ರೀಯ ವಿದ್ಯಾಲಯ ಘಟನೆ ಗಮನಿಸಿದರೆ ದಲಿತರ ಮೇಲೆ ಯಾವ ರೀತಿ ಶೋಷಣೆ ನಡೆಯುತ್ತಿದೆ ಎಂಬುದು ಬಹಿರಂಗವಾಗಿದೆ. ಜೆಎನ್‌ಯು ಘಟನೆ ಮನಸ್ಸಿಗೆ ನೋವುಂಟು ಮಾಡಿದೆ. ಇಂತಹ ವ್ಯವಸ್ಥೆಯನ್ನು ಬುಡಸಮೇತ ಕಿತ್ತೆಸೆಯಲು ಹೋರಾಟ ನಡೆಯಬೇಕು’ ಎಂದು ಸತ್ಯು ಅವರು ಹೇಳಿದರು.
ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ. ವೀರಣ್ಣ ಮಾತನಾಡಿ, ‘ನಾಟಕಗಳು ಜನರನ್ನು ರಂಜಿಸಿದರೆ ಸಾಕು ಎಂಬ ಅಪಾಯಕಾರಿ ಬೆಳವಣಿಗೆ ಸಮಾಜದಲ್ಲಿ ಕಂಡುಬರುತ್ತಿದೆ. ನಾಟಕ ಸೇರಿ ಎಲ್ಲ ಮಾಧ್ಯಮಗಳು ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಬೇಕಿದೆ’ ಎಂದರು.
ಗಡಿಯಾರ ವಿಷಯ ಸಣ್ಣದು
‘ಮುಖ್ಯಮಂತ್ರಿ ಅವರ ಗಡಿಯಾರ ವಿಷಯ ಸಣ್ಣದು. ಎಚ್.ಡಿ.ಕುಮಾರಸ್ವಾಮಿ ಅವರು ಅದನ್ನು ದೊಡ್ಡದು ಮಾಡುತ್ತಿದ್ದಾರೆ’ ಎಂದು ಸತ್ಯು ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಎಂದಮೇಲೆ ಅವರಿಗೆ ಅಭಿಮಾನಿಗಳಿದ್ದಾರೆ. ಪ್ರೀತಿಯಿಂದ ಬಹುಮಾನ ಕೊಡುತ್ತಾರೆ. ಅದನ್ನೇ ಸುದ್ದಿ ಮಾಡುವುದು ಹಾಗೂ ಗಡಿಯಾರ ಕೊಟ್ಟ ಅಭಿಮಾನಿ ಯಾರು ಎಂದು ಕೇಳುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.